ಶಾಸಕರ ನಿಧಿಯಲ್ಲಿ ಅಂಗವಿಕಲರಿಗೆ 20 ಲಕ್ಷ ರು ಮೀಸಲು

| Published : Dec 25 2024, 12:45 AM IST

ಸಾರಾಂಶ

ಚಿತ್ರದುರ್ಗ: ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿಯಲ್ಲಿ ತಮಗೆ ಲಭ್ಯವಾಗುವ ಅನುದಾನದಲ್ಲಿ ಅಂಗವಿಲಕರ ಕ್ಷೇಮಾಭಿವೃದ್ಧಿಗೆ 20 ಲಕ್ಷ ರು. ಕಾಯ್ದಿರಿಸುವುದಾಗಿ ಶಾಸಕ ವೀರೇಂದ್ರ ಪಪ್ಪಿ ವಾಗ್ದಾನ ಮಾಡಿದರು.

ಚಿತ್ರದುರ್ಗ: ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿಯಲ್ಲಿ ತಮಗೆ ಲಭ್ಯವಾಗುವ ಅನುದಾನದಲ್ಲಿ ಅಂಗವಿಲಕರ ಕ್ಷೇಮಾಭಿವೃದ್ಧಿಗೆ 20 ಲಕ್ಷ ರು. ಕಾಯ್ದಿರಿಸುವುದಾಗಿ ಶಾಸಕ ವೀರೇಂದ್ರ ಪಪ್ಪಿ ವಾಗ್ದಾನ ಮಾಡಿದರು. ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುದಯ ಸಂಘ, ಎಂಆರ್‌ಡಬ್ಯ್ಲೂ, ಯುಆರ್‌ಡಬ್ಯು, ವಿಆರ್‌ಡಬ್ಯು ವತಿಯಿಂದ ಐಎಂಎ ಹಾಲ್‍ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವಸತಿ ನಿಗಮಗಳ ಯೋಜನೆಯಲ್ಲಿ ಮೀಸಲಾತಿ, ಗ್ರಾಮ ಪಂಚಾಯಿತಿಯಲ್ಲಿ ಶೇ.5 ರಷ್ಟು ಅನುದಾನ ಮೀಸಲಿಡುತ್ತೇನೆ. ವಿಕಲಚೇತನರೆಂಬ ಕೀಳರಿಮೆ ತೊರೆದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ವಿನಂತಿಸಿದರು.

ಪ್ರತಿ ಮತ ಕ್ಷೇತ್ರದಲ್ಲಿ ಶೇ.5ರಷ್ಟು ವಿಕಲಚೇತನರಿದ್ದಾರೆ. ಆಧಾರ್ ಯೋಜನೆಯಲ್ಲಿ ಒಂದು ಲಕ್ಷ ರು.ಸಾಲ ಸಿಗುತ್ತದೆ. ಅದರಲ್ಲಿ ಐವತ್ತು ಸಾವಿರ ರು.ಸಬ್ಸಿಡಿ, ಲ್ಯಾಪ್‍ಟಾಪ್, ಹೊಲಿಗೆ ಯಂತ್ರ, ಅಂಧರಿಗೆ ಸ್ಮಾರ್ಟ್ ಫೋನ್‍ಗಳನ್ನು ನೀಡಲಾಗುತ್ತಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸ್ವ-ಉದ್ಯೋಗಿಗಳಾಗಿ ಎಂದರು. ಮುಂದಿನ ದಿನಗಳಲ್ಲಿ ವಿಕಲಚೇತನರಿಗೆ ಸಮುದಾಯ ಭವನ ಕಟ್ಟಿಸಿಕೊಡುತ್ತೇನೆ. ಮಾಳಪ್ಪನಹಟ್ಟಿಯಲ್ಲಿರುವ ಅಂಧರ ಶಾಲೆಯಲ್ಲಿ ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬ ಆಚರಿಸಿಕೊಂಡು ಅವರೊಟ್ಟಿಗೆ ಕೆಲವು ಕಾಲ ಕಳೆಯುತ್ತೇನೆ ಎಂದ ಅವರು, ಭಿಕ್ಷಾಟನೆ ಮಾಡುವುದನ್ನು ಬಿಟ್ಟು ಸಮಾಜದೊಂದಿಗೆ ಎಲ್ಲರೊಡನೆ ಬೆರೆತು ಸ್ವಂತ ಕಾಲ ಮೇಲೆ ನಿಲ್ಲುವಂತಾಗಿ ಎಂದು ವಿಕಲಚೇತನರಿಗೆ ತಿಳಿಸಿದರು. ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಅಂಗವಿಕಲರಿಗೆ ಅನುಕಂಪ ಬೇಡ. ಅವಕಾಶ ಸಿಗಬೇಕು. ಸಾಮಾನ್ಯರಿಗಿಂತ ವಿಕಲಚೇತನರಲ್ಲಿ ವಿಶೇಷವಾದ ಸಾಮರ್ಥ್ಯವಿರುತ್ತದೆ. ಅಂಗವಿಕಲರಿಗೆ ಕೇವಲ ಸರ್ಕಾರದ ಸಹಾಯ ಸಿಕ್ಕರೆ ಸಾಲದು. ಸಾರ್ವಜನಿಕರು, ವಿವಿಧ ಸಂಘಟನೆಗಳ ಜವಾಬ್ದಾರಿಯೂ ಇದೆ ಎಂದರು. ದಲಿತ ಮುಖಂಡ ಬಿ.ರಾಜಣ್ಣ ಮಾತನಾಡಿ, ಅಂಗವಿಕಲರಿಗೆ ಸರ್ಕಾರಿ ನೌಕರಿ ಸಿಗಬೇಕು. ಚಿತ್ರದುರ್ಗದಲ್ಲಿ ಕೈಗಾರಿಕಾ ಘಟಕ ಪ್ರಾರಂಭಿಸಿದರೆ ವಿಕಲಚೇತರಿಗೆ ಉದ್ಯೋಗ ದೊರಕುತ್ತದೆ. ಹಾಗಾಗಿ ಕೈಗಾರಿಕೆ ಕಡೆ ಹೆಚ್ಚಿನ ಗಮನ ಕೊಡಬೇಕೆಂದು ವಿನಂತಿಸಿದರು. ಲೇಖಕ ಎಚ್.ಆನಂದಕುಮಾರ್ ಮಾತನಾಡಿ, ಅಂಗವಿಕಲರಿಗೆ ಅನುಕಂಪ ತೋರುವ ಬದಲು ಸ್ವಾವಲಂಬಿಗಳಾಗಿ ಬದುಕುವ ಅವಕಾಶ ಕಲ್ಪಿಸಬೇಕು. ಸರ್ಕಾರದಿಂದ ಸಾಕಷ್ಟು ನೆರವು ದೊರಕುತ್ತಿದೆ. ಎಲ್ಲವನ್ನು ಬಳಸಿಕೊಂಡು ಆತ್ಮಸ್ಥೈರ್ಯದಿಂದ ಬದುಕುವಂತೆ ಹೇಳಿದರು.ಸೆಲ್ಕೋ ಪೌಂಡೇಶನ್‍ನ ಮಂಜುನಾಥ್ ಭಾಗವತ್ ಮಾತನಾಡಿದರು. ಚಿತ್ರ ನಿರ್ಮಾಪಕ ಘನಶ್ಯಾಂ ಭಾಂಡಗೆ, ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುದಯ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್.ಟಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪಾಪಣ್ಣ, ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ, ಕೆ.ಆನಂದ್, ಎನ್.ಮೈಲಾರಪ್ಪ, ಟಿ.ಕೆ.ವೆಂಕಟೇಶ್, ಭಾನುಕಿರಣ್, ಅಜ್ಜಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ನ್ಯಾಯವಾದಿ ಪ್ರತಾಪ್‍ಜೋಗಿ, ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕಿರ್ ಹುಸೇನ್, ವಾಗೀಶ್, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಎಚ್.ಪ್ಯಾರೆಜಾನ್ ವೇದಿಕೆಯಲ್ಲಿದ್ದರು.