ಕನ್ನಡಪ್ರಭ ವಾರ್ತೆ, ಕೆಜಿಎಫ್ಸಮಾಜದಲ್ಲಿ ಕೂಲಿ ಕೆಲಸ ಮಾಡುವವರಿಂದ ಹಿಡಿದು ದೊಡ್ಡ ದೊಡ್ಡ ವ್ಯಕ್ತಿಗಳಿಗೂ ತಮ್ಮ ಮಕ್ಕಳಿಗೆ ಒಳ್ಳೆಯ ಗುಣಾತ್ಮಕ ಶಿಕ್ಷಣ ಕೊಡಿಸಬೇಕೆಂಬ ಆಸೆ ಇರುತ್ತದೆ. ಆದರೆ, ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿ, ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ಸರ್ಕಾರವೇ ಅಂಗನವಾಡಿಗಳಲ್ಲಿ ಮಾಂಟೆಸ್ಸರಿಗಳನ್ನು (ಎಲ್‌ಕೆಜಿ ಮತ್ತು ಯುಕೆಜಿ) ಪ್ರಾರಂಭಿಸಿದೆ.ಇತ್ತೀಚೆಗೆ ಖಾಸಗಿ ಮಾಂಟೆಸ್ಸರಿ ಶಾಲೆಗಳಲ್ಲಿ ವರ್ಷಕ್ಕೆ ೪೫ ರಿಂದ ೫೦ ಸಾವಿರ ರು. ಗಳನ್ನು ನೀಡಬೇಕಾದ ಪರಿಸ್ಥಿತಿ ಇದೆ. ಅಷ್ಟೊಂದು ದುಬಾರಿ ಹಣವನ್ನು ಕೊಟ್ಟು ಜನಸಾಮಾನ್ಯರು ತಮ್ಮ ಮಕ್ಕಳನ್ನು ಮಾಂಟೆಸ್ಸರಿಗಳಿಗೆ ಕಳುಹಿಸಲು ಸಾಧ್ಯವಿಲ್ಲದೇ ಇರುವುದರಿಂದ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಲು, ಗುಣಮಟ್ಟದ ಶಿಕ್ಷಣ ಮತ್ತು ಪೌಷ್ಟಿಕ ಆಹಾರ ಪ್ರತಿ ಮಗುವಿಗೂ ನೀಡುವ ಉದ್ದೇಶದಿಂದ ಉಚಿತವಾಗಿ ಮಾಂಟೆಸ್ಸರಿ ತರಗತಿಗಳನ್ನು ತೆರೆಯಲು ಸರ್ಕಾರ ಮುಂದಾಗಿದ್ದು, ಪೋಷಕರು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಕೆಜಿಎಫ್ ತಾಲೂಕಿನಲ್ಲಿ ಪ್ರಸಕ್ತ ೨೦೨೬-೨೭ನೇ ಸಾಲಿನಿಂದ ನಗರ ಮತ್ತು ಗ್ರಾಮೀಣ ಭಾಗದ ೨೦ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್‌ಕೆಜಿ ಮತ್ತು ಯುಕೆಜಿ) ತರಗತಿಗಳನ್ನು ಪ್ರಾರಂಭಿಸಲಾಗುತ್ತಿದ್ದು, ಪ್ರತಿ ಕೇಂದ್ರಕ್ಕೆ ೨ ಲಕ್ಷ ರು. ಅನುದಾನದಲ್ಲಿ ತರಗತಿ ಕೊಠಡಿ, ಬೋಧನಾ ಸಾಧನ ಮತ್ತು ಎಲ್‌ಇಡಿ ಟಿವಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಕೇಂದ್ರಗಳಲ್ಲಿ ೩ ರಿಂದ ೬ ವರ್ಷ ವಯಸ್ಸಿನ ೨೫ ಮಕ್ಕಳಿಗೆ ಉಚಿತ ಶಿಕ್ಷಣ, ಸಮವಸ್ತ್ರ, ಬ್ಯಾಗ್ ಮತ್ತು ಪುಸ್ತಕಗಳನ್ನು ಸರ್ಕಾರದ ವತಿಯಿಂದಲೇ ಉಚಿತವಾಗಿ ಒದಗಿಸಲಾಗುತ್ತದೆ.ಕೋಟ್..
ಈ ಬಾರಿ ಜೂನ್ ೧ರಿಂದಲೇ ತಾಲೂಕಿನ ೨೦ ಶಾಲೆಗಳಲ್ಲಿ ಮಾಂಟೆಸ್ಸರಿ ಶಿಕ್ಷಣ ಪ್ರಾರಂಭಿಸಲಾಗುತ್ತಿದೆ. ಸರ್ಕಾರಿ ಅಂಗನವಾಡಿಗಳಲ್ಲೇ ಮಾಂಟೆಸ್ಸರಿ ಆರಂಭಿಸುತ್ತಿರುವ ಬಗ್ಗೆ ಎಲ್ಲ ಕಡೆ ವ್ಯಾಪಕ ಪ್ರಚಾರ ಮಾಡಲಾಗಿದ್ದು, ಪೋಷಕರು ದುಬಾರಿ ಶುಲ್ಕವನ್ನು ನೀಡಿ ಖಾಸಗೀ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಬದಲು ಸರ್ಕಾರಿ ಮಾಂಟೆಸ್ಸರಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲು ಮಾಡಿ.– ಎಸ್ ಟಿ ರಾಜೇಶ್,
ಸಿಡಿಪಿಒ, ಕೆಜಿಎಫ್ ತಾಲೂಕು.೨೫ಕೆಜಿಎಫ್೧ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ಚಿಣ್ಣರು.