ಸಾರಾಂಶ
ಸಿರವಾರ ತಾಲೂಕಿ ಮಾಡಗಿರಿಯಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ವಿಚಾರಿಸುತ್ತಿರುವ ಮುಖಂಡ ರವಿ ಬೋಸರಾಜು
ಕನ್ನಡಪ್ರಭ ವಾರ್ತೆ ಸಿರವಾರ
ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದಾಗಿ ಸುಮಾರು 20 ಜನರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ ನಡೆದಿದೆ.ಕಳೆದ ಎರಡು ದಿನಗಳಿಂದ ಗ್ರಾಮದ ಒಬ್ಬ ವಯಸ್ಕ, 20 ವರ್ಷ ಮೇಲ್ಪಟ್ಟ 4 ಯುವಕರು, ಉಳಿದಂತೆ 11 ಬಾಲಕರು ಅಸ್ವಸ್ಥಗೊಂಡಿದ್ದರು. ಅವರಲ್ಲಿ 6 ಜನರನ್ನು ಜಿಲ್ಲಾ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರಿಗೆ ಮಾಡಗಿರಿ ಗ್ರಾಮದಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಶರಣಬಸವ ತಿಳಸಿದ್ದಾರೆ.
ಸೋಮವಾರ ಮತ್ತೆ ನಾಲ್ಕು ಜನರು ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿದ್ದು ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.ಶಾಸಕರ,ಅಧಿಕಾರಿಗಳ ಭೇಟಿ: ಶಾಸಕ ಜಿ.ಹಂಪಯ್ಯ ನಾಯಕ ಅವರು ಗ್ರಾಮಕ್ಕೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿ ಅಗತ್ಯ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ತಹಶೀಲ್ದಾರ್ ರವಿ ಎಸ್.ಅಂಗಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ನೀರಿನ ಸರಬರಾಜಿನ ಕುರಿತು ಮಾಹಿತಿ ಪಡೆದು ಕೂಡಲೇ ನೀರಿನಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳುವಂತೆ ತಾಲ್ಲೂಕು ಅಧಿಕಾರಿಗಳಿಗೆ ಸೂಚಿಸಿದರು.
ಕಲುಷಿತಗೊಂಡಿರುವ ನೀರು ಪರೀಕ್ಷೆಗೆ ಕಳಿಸಿ ವರದಿ ಬಂದ ತಕ್ಷಣ ನನ್ನ ಗಮನಕ್ಕೆ ತರಬೇಕು ಎಂದು ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿ ಸತೀಶ ತಿಳಿಸಿದರು. ಜಿಲ್ಲಾ ವೈದ್ಯಾಧಿಕಾರಿ ಸುರೇಂದ್ರ ಬಾಬು, ತಾಲ್ಲೂಕು ಪಂಚಾಯಿತಿ ಇಒ ಶಶಿಧರ ಸ್ವಾಮಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.