ಸಾರಾಂಶ
ಉಡುಪಿ : ಉಡುಪಿ, ದಕ್ಷಿಣ ಕನ್ನಡ, ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಸಮುದ್ರ ತೀರ ಭಾನುವಾರ ಹೊಸ ದಾಖಲೆಗೆ ಸಾಕ್ಷಿಯಾಯಿತು. ಇಲ್ಲಿ ಏಕಕಾಲದಲ್ಲಿ ಸುಮಾರು 20 ಸಾವಿರ ಮಂದಿ ಆಸ್ತಿಕರು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು.
ಕೇರಳದ ಕಣ್ಣೂರಿನಿಂದ ಉಡುಪಿ ಜಿಲ್ಲೆಯ ಶಿರೂರು ವರೆಗೆ 108 ಕಡೆಗಳಲ್ಲಿ ಸಂಜೆ 4ರಿಂದ ಏಕಕಾಲಕ್ಕೆ ಎರಡು ಗಂಟೆಗಳ ಕಾಲ ತಲಾ ಆರು ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಯಿತು.ವಿಷ್ಣುಸಹಸ್ರನಾಮ ಪಾರಾಯಣದಿಂದ ಕಡಲಿನ ಭೀಕರ ಅಲೆಗಳನ್ನು ಶಾಂತಗೊಳಿಸಲು ಸಾಧ್ಯವಿದೆ, ಆದ್ದರಿಂದ ಈ ಪಾರಾಯಣವನ್ನು ನಡೆಸಲಾಗಿದೆ ಎಂದು ಸಂಘಟನಾ ಸಮಿತಿಯ ಅಧ್ಯಕ್ಷ ಕಟ್ಕೆರೆ ಪ್ರೇಮಾನಂದ ಶೆಟ್ಟಿ ಹೇಳಿದ್ದಾರೆ.
ಮೊದಲು ಸಮುದ್ರಕ್ಕೆ ಹಾಲೆರೆದು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಸಮುದ್ರಕ್ಕೆ ಅಭಿಮುಖವಾಗಿ ಕುಳಿತು ಪಾರಾಯಣ ಮಾಡಿದ ಪ್ರತಿ ತಂಡದಲ್ಲಿ ಸುಮಾರು 200ಕ್ಕೂ ಹೆಚ್ಚು ಶ್ರದ್ಧಾಳುಗಳು ಭಾಗವಹಿಸಿದ್ದರು. ಪಾರಾಯಣದ ಬಳಿಕ ಸಮುದ್ರ ಕೊರೆತ, ಸುನಾಮಿಯಂಥಹ ಭೀಕರ ಪ್ರಾಕೃತಿಕ ವಿಪತ್ತುಗಳಿಂದ ರಕ್ಷಣೆ, ಸನಾತನ ಧರ್ಮದ ಮೇಲಾಗುತ್ತಿರುವ ಆಕ್ರಮಣ, ಗೋಹಿಂಸೆಯ ಅಂತ್ಯ, ದೇಶದ ಸುಭಿಕ್ಷೆ - ಸುರಕ್ಷೆ ಮತ್ತು ವೈಯಕ್ತಿಕ ಕೌಟುಂಬಿಕ ಶ್ರೇಯಸ್ಸಿಗೆ ಪ್ರಾರ್ಥನೆ ನಡೆಸಲಾಯಿತು. ವೇದ ಕೃಷಿಕ ಕೆ.ಎಸ್. ನಿತ್ಯಾನಂದರ ಸಲಹೆಯಂತೆ ಈ ಸಾಮೂಹಿಕ ಪಠಣ ನಡೆಸಲಾಗಿದ್ದು, ಈ ಹಿಂದೆಯೂ ಎರಡು ಬಾರಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಗಿತ್ತು. ಆಗ ಸಮುದ್ರ ಶಾಂತವಾಗಿ ಕಡಲುಕೊರೆತ ಕಡಿಮೆಯಾಗಿತ್ತು ಎಂದು ಸಂಘಟಕರು ತಿಳಿಸಿದ್ದಾರೆ.