ಮಕ್ಕಳ ಲೈಂಗಿಕ ಕಿರುಕುಳ ಅಂದರೆ ಮಕ್ಕಳಿಗೆ ಶಾಬ್ಧಿಕ, ಅಂಗಿಕ, ಭಾಷಿಕ ಹಾಗೂ ಲಿಖಿತವಾಗಿ ಅವರ ಘನತೆಗೆ ಧಕ್ಕೆ ಉಂಟುಮಾಡಬಹುದಾದ ಯಾವುದೇ ಈ ರೀತಿಯ ಕೃತ್ಯಗಳಿಗೆ 7 ವರ್ಷ ವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.

ಕೊಪ್ಪಳ:

ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಗೆ ಹಲವು ಕಾನೂನುಗಳಿದ್ದು 18 ವರ್ಷದೊಳಗಿನ ಮಕ್ಕಳ ಮೇಲಿನ ಬೇಧಕ ಲೈಂಗಿಕ ಹಲ್ಲೆಗೆ ಕನಿಷ್ಠ 20 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ಆಶ್ರಯದಲ್ಲಿ ನಡೆದ ಮಕ್ಕಳ ಹಕ್ಕು, ಕಾನೂನು ಮತ್ತು ಸುರಕ್ಷತೆಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳ ಲೈಂಗಿಕ ಕಿರುಕುಳ ಅಂದರೆ ಮಕ್ಕಳಿಗೆ ಶಾಬ್ಧಿಕ, ಅಂಗಿಕ, ಭಾಷಿಕ ಹಾಗೂ ಲಿಖಿತವಾಗಿ ಅವರ ಘನತೆಗೆ ಧಕ್ಕೆ ಉಂಟುಮಾಡಬಹುದಾದ ಯಾವುದೇ ಈ ರೀತಿಯ ಕೃತ್ಯಗಳಿಗೆ 7 ವರ್ಷ ವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಈ ರೀತಿಯ ಕೃತ್ಯಗಳಿಗೆ ಸಹಾಯ, ಪ್ರೋತ್ಸಾಹ ಮತ್ತು ಪ್ರಯತ್ನಪಟ್ಟವರಿಗೂ ಅಷ್ಟೇ ಪ್ರಮಾಣದ ಶಿಕ್ಷೆ ವಿಧಿಸಬಹುದಾಗಿದೆ. ಸಾಮಾಜಿಕ ಜಾಲತಾಣ ಅಥವಾ ಇತರೆ ಮಾಧ್ಯಮಗಳ ಪ್ರಭಾವದಿಂದ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮಕ್ಕಳು ತಿಳಿದೋ, ತಿಳಿಯದೆಯೋ ಈ ಕಾಯ್ದೆಯಲ್ಲಿ ಸಿಲುಕುತ್ತಿದ್ದಾರೆ ಎಂದರು.

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿದವರು, ಭಾಗಿಯಾದವರು, ಪ್ರೋತ್ಸಾಹಿಸಿದವರು ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಈ ಕಾಯ್ದೆಯಲ್ಲಿ ಸಿಲುಕಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಗ್ರಾಮಮಟ್ಟದಲ್ಲಿ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲು ಗ್ರಾಮಮಟ್ಟದ ಮಕ್ಕಳ ರಕ್ಷಣಾ ಸಮಿತಿ ಚರ್ಚಿಸಿ, ಮಕ್ಕಳ ಹಕ್ಕು, ಕಾನೂನು ಮತ್ತು ಮಕ್ಕಳ ಸುರಕ್ಷತೆ ಕುರಿತು ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ, ತನ್ಮೂಲಕ ಮಕ್ಕಳ ಮೇಲಿನ ಲೈಂಗಿಕ ಹಲ್ಲೆ, ಬಾಲ್ಯವಿವಾಹ ತಡೆದು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸುವಂತೆ ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೊಬೇಷನ್ ಆಫೀಸರ್ ಶಿವಲೀಲಾ ವನ್ನೂರು ಮಾತನಾಡಿ, ತಾಯಿ ಮರಣ, ಶಿಶು ಮರಣ, ಅಪೌಷ್ಟಿಕ ಮಕ್ಕಳ ಜನನ ನಿರ್ಮೂಲನೆಗಾಗಿ ಸರ್ಕಾರ ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೊಳಿಸಿದೆ. ಅದರನ್ವಯ 18 ವರ್ಷದೊಳಿಗಿನ ಹೆಣ್ಣು ಮಗು ಮತ್ತು 21 ವರ್ಷದೊಳಗಿನ ಗಂಡು ಮಗುವಿಗೆ ವಿವಾಹ ಮಾಡುವುದನ್ನು ನಿಷೇಧಿಸಲಾಗಿದೆ ಎಂದರು.

ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಬಾಲ್ಯ ವಿವಾಹ ನಿಷೇಧ ಕಾಯ್ದೆ ತಿದ್ದುಪಡಿ ತಂದಿದ್ದು, ಅದರನ್ವಯ ಬಾಲ್ಯವಿವಾಹ ಅಸಿಂಧು ಆಗಲಿವೆ. ಬಾಲ್ಯವಿವಾಹ ಮಾಡುವವರು, ಭಾಗವಹಿಸುವವರು, ಆಯೋಜಿಸುವವರಿಗೂ ಕನಿಷ್ಠ 1ರಿಂದ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಪಂ ಪಿಡಿಒ ಬಸವರಾಜ ಸಂಕನಾಳ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸಮೂಹ ಸಂಪನ್ಮೂಲ ಅಧಿಕಾರಿ ವಿನಾಯಕ, ಮುಸಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಂಜುಮ ತಾಜ್, ಮುಖ್ಯಪೇದೆ ಬೈಲಪ್ಪ, ಅಂಗನವಾಡಿ ಮೇಲ್ವಿಚಾರಕಿ ಚಂದ್ರಕಲಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ, ರಮೇಶ ಸೇರಿದಂತೆ ಇತರರು ಇದ್ದರು.