ದಿ.25 ಅರ್.ಪಿ.ಟಿ.5ಪಿ ರಿಪ್ಪನ್‍ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆದ್ದಾರಿಪುರ ಕಗ್ಗಲಿಜಡ್ಡು ಕುಮದ್ವತಿ ಸಂಪರ್ಕದ ಸೇತುವೆ ನಿರ್ಮಾಣಕ್ಕೆ ಪಿಎಂಜಿಎಸ್‍ವೈ ಯೋಜನೆಯಡಿ 3.48 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಸಂಸದ ಬಿ.ವೈ.ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. | Kannada Prabha
Image Credit: KP
ಹೆದ್ದಾರಿಪುರ ಕಗ್ಗಲಿಜಡ್ಡು ಕುಮದ್ವತಿ ಸಂಪರ್ಕದ ಸೇತುವೆ ನಿರ್ಮಾಣ
ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜಾರಿಗೊಳಿಸಿದ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ಅನಂತರ ಬಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪಿಎಂಜಿಎಸ್‍ವೈ ಯೋಜನೆಯಿಂದಾಗಿ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 200 ಕಿ.ಮೀ. ರಸ್ತೆಗೆ ₹200 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆ ಮೂಲಕ ಜಿಲ್ಲೆ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ರಿಪ್ಪನ್‍ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿಪುರ ಕಗ್ಗಲಿಜಡ್ಡು ಕುಮದ್ವತಿ ಸಂಪರ್ಕದ ಸೇತುವೆ ನಿರ್ಮಾಣಕ್ಕೆ ಯೋಜನೆಯಡಿ ₹3.48 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಜಲಜೀವನ ಯೋಜನೆಯಡಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಜಿಲ್ಲೆಯ 5 ಲಕ್ಷ ಮನೆಗಳಿಲ್ಲಿ ಈಗಾಗಲೇ 2 ಲಕ್ಷ ಮನೆಗಳಿಗೆ ಈ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಆಯುಷ್ಮಾನ್ ಕಾರ್ಡ್‌ನಿಂದಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ₹5 ಲಕ್ಷ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ₹2 ಲಕ್ಷ ಈ ಯೋಜನೆ ಅನ್ವಯ ಜಿಲ್ಲೆಯ ₹174 ಕೋಟಿ ವೆಚ್ಚದಲ್ಲಿ ಬಡಕುಟುಂಬದವರು ಆರೋಗ್ಯದ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು. ಉಜ್ವಲ ಯೋಜನೆಯಡಿ ₹700ಕ್ಕೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ ಅನ್ವಯ ತಾಯಂದಿರು ಕಟ್ಟಿಗೆ ಬಳಸಿ, ಹೊಗೆಯಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಲಾಗಿದೆ. ಈ ಉದ್ದೇಶಕ್ಕಾಗಿ ಕಡಿಮೆ ಹಣದಲ್ಲಿ ಗ್ಯಾಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ಹೊಸನಗರ ತಾಲೂಕಿಗೆ ಈಗಾಗಲೇ 44 ಬಿ.ಎಸ್.ಎನ್.ಎಲ್. ಟವರ್‌ಗಳನ್ನು ಮಂಜೂರು ಮಾಡಿಸಲಾಗಿದೆ. ಸಧ್ಯದಲ್ಲಿಯೇ ಟವರ್‌ಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಯೋಜನೆ ಫಲ ಪಡೆಯಲು ಅಭಿವೃದ್ಧಿಯನ್ನೇ ತ್ಯಾಗ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಾರಿ ಮಳೆಯಾಗದೇ ತೀವ್ರ ಬರಗಾಲ ಎದುರಿಸುವಂತಾಗಿದೆ. ಬೆಳೆಗಳು ಒಣಗುತ್ತಿದ್ದು, ಮಲೆನಾಡು ಸಂಪೂರ್ಣವಾಗಿ ಬರಗಾಲ ಪ್ರದೇಶವಾಗಿದೆ. ನವಂಬರ್-ಡಿಸೆಂಬರ್ ಅಂತ್ಯದಲ್ಲಿಯೇ ಕುಡಿಯುವ ನೀರಿನ ಅಭಾವ ಎದುರಿಸುವಂತಾಗಿದೆ. ವಿದ್ಯುತ್ ಸಮಸ್ಯೆ ಸಹ ಕಾಣವಂತಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೇ ನೀರಾವರಿ ಸಚಿವರಾಗಿದ್ದು, ಅವರೇ ಅಭಿವೃದ್ಧಿಗೆ ಹಣವಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಮುಂದೆ ಏನು ಎಂಬ ಚಿಂತೆ ಕಾಡುವಂತಾಗಿದೆ. ಸರ್ಕಾರದ ಉಪಮುಖ್ಯಮಂತ್ರಿಗಳೇ ಹೀಗೆ ಹೇಳಿದರೆ ಏನು ಕಥೆ ಎಂದರು. ಸಭೆಯಲ್ಲಿ ಹೆದ್ದಾರಿಪುರ ಗ್ರಾಪಂ ಅಧ್ಯಕ್ಷೆ ವಿನಂತಿ ರಾಘವೇಂದ್ರ, ಉಪಾಧ್ಯಕ್ಷೆ ವನಿತಾ ಗಂಗಾಧರ, ಗ್ರಾಪಂ ಸದಸ್ಯರಾದ ನಾಗರತ್ನ, ಸುಮಿತ್ರಮ್ಮ, ವಿಶುಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಗಣಪತಿ ಬೆಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ. ಮಂಜುನಾಥ, ನಾಗೇಂದ್ರ ಕಲ್ಲೂರು, ಲಿಂಗಪ್ಪ ಕಗ್ಗಲಿ ಇನ್ನಿತರ ಹಲವರು ಹಾಜರಿದ್ದರು. - - - -ಫೋಟೋ: ಹೆದ್ದಾರಿಪುರ- ಕಗ್ಗಲಿಜಡ್ಡು- ಕುಮದ್ವತಿ ಸಂಪರ್ಕದ ಸೇತುವೆ ನಿರ್ಮಾಣಕ್ಕೆ ಸಂಸದ ಬಿ.ವೈ.ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.