ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಕಿತ್ತೂರು ರಾಣಿ ಚನ್ನಮ್ಮ ಅವರ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿ, ಅಭಿವೃದ್ಧಿಗೆ ₹ 200 ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿ ರಾಯಣ್ಣ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಬೆಂಬಲ ಸೂಚಿಸಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ಅವರು ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಚನ್ನಮ್ಮ ಅವರ ಇತಿಹಾಸ ಝಾನ್ಸಿ ರಾಣಿಗಿಂತಲೂ 24 ವರ್ಷ ಹಳೆಯದು. ಆದರೂ, ಅವರಿಗೆ ಸಲ್ಲಬೇಕಾದ ಗೌರವ ಸಿಗುತ್ತಿಲ್ಲ. ಇದು ಸರ್ಕಾರಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ದೂರಿದರು.

ಚನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ರೂಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ₹ 200 ಕೋಟಿ ಅನುದಾನ ಬೇಡಿಕೆ ಸಮಂಜಸವಾಗಿದೆ. ಇದು ಭಿಕ್ಷೆಯಲ್ಲ, ನಮ್ಮ ಹಕ್ಕು ಎಂದು ಹೇಳಿದರು.

ಚನ್ನಮ್ಮನಿಗೆ ಸಂಬಂಧಿಸಿದ ತಾಣಗಳು ಸರ್ಕಾರಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿದ್ದು, ಸೆರೆಮನೆ ವಾಸ, ಬಾವಿ ಸೇರಿದಂತೆ ಅನೇಕ ಸ್ಥಳಗಳು ಕಸದ ತೊಟ್ಟಿಗಳಾಗಿವೆ. ಚನ್ನಮ್ಮನ ಸಮಾಧಿ ಮಾತ್ರವಲ್ಲದೆ, ಸೆರೆಮನೆ ವಾಸ, ಪೂಜೆಗೆ ನೀರು ಬಳಸುತ್ತಿದ್ದ ಬಾವಿ ಸೇರಿದಂತೆ ಎಲ್ಲಾ ಐತಿಹಾಸಿಕ ತಾಣಗಳನ್ನು ಸಂರಕ್ಷಿಸಿ ಸ್ಮಾರಕಗಳನ್ನಾಗಿ ರೂಪಿಸಬೇಕು ಎಂದು ಒತ್ತಾಯಿಸಿದರು.


ಚನ್ನಮ್ಮನಿಗೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದ ಅವರು, ಸರ್ಕಾರಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು. ದೀರ್ಘಕಾಲದಿಂದ ಮುಂದುವರಿದಿರುವ ಈ ಬೇಡಿಕೆಗೆ ಸ್ಪಂದಿಸದ ಸರ್ಕಾರಗಳು ನಾಚಿಕೆಪಡಬೇಕು. ಚನ್ನಮ್ಮ ಹೆಸರಿನಲ್ಲಿ ಪ್ರಶಸ್ತಿ, ರಸ್ತೆ, ಮೂರ್ತಿಗಳನ್ನು ಸ್ಥಾಪಿಸುವುದಕ್ಕಿಂತ ಮೊದಲು ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವುದು ಮುಖ್ಯ. ವೀರರಾಣಿ ಕಿತ್ತೂರು ಚನ್ನಮ್ಮ ಅವರ ಪವಿತ್ರ ಹಾಗೂ ಐತಿಹಾಸಿಕ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆಯಿಂದ ರಾಜ್ಯಾದ್ಯಂತ ಒಂದು ದಿನದ ಮನವಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ವೀರರಾಣಿಯ ತ್ಯಾಗ ಮತ್ತು ಶೌರ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸುವುದು ಅತ್ಯಾವಶ್ಯಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ‌ಮಡಿವಾಳಪ್ಪ ಹೋಟಿ, ಮಡಿವಾಳಪ್ಪ ಚಿಕ್ಕೋಪ್ಪ, ಬಸವರಾಜ ನೇಸರಗಿ, ವಿಜಯ ಪತ್ತಾರ, ಅನಂದಗೌಡ ಪಾಟೀಲ, ವಿಶಾಲ ಬೋಗೂರ, ಶಿವಪ್ರಸಾದ ಪಾಟೀಲ ಸೇರಿದಂತೆ ಹೊಸೂರ‌ ಗ್ರಾಮಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

----------

ಕೋಟ್‌ರಾಜಕಾರಣಿಗಳು ಮತಗಳಿಗಾಗಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಹೆಸರನ್ನು ಬಳಸಿಕೊಳ್ಳುತ್ತಿದ್ದು, ಅವರ ಐತಿಹಾಸಿಕ ತಾಣಗಳ ಅಭಿವೃದ್ಧಿಯಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಈ ವಿಷಯವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಶೋಭೆ ತರುವಂತದಲ್ಲ. ಈ ವಿಚಾರ ವಿಧಾನಸಭೆ ಹಾಗೂ ಸಂಸತ್ತಿನ ಮಟ್ಟದಲ್ಲೂ ಚರ್ಚೆಯಾಗದಿರುವುದು ವಿಷಾದನೀಯ.

ಪ್ರಮೋದ್‌ ಮುತಾಲಿಕ, ಶ್ರೀರಾಮ ಸೇನೆ ಮುಖ್ಯಸ್ಥ