ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರು ಇಂದು ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ತ್ರಿವರ್ಣ ಧ್ವಜ ಮೆರವಣಿಗೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಸಚಿವರು, 78ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಹಾಸನ ಜಿಲ್ಲೆಯಲ್ಲಿ ಈ ಬಾರಿ ವಿನೂತನವಾಗಿ ಹಮ್ಮಿಕೊಂಡಿರುವ ತ್ರಿವರ್ಣ ಧ್ವಜ ಮೆರವಣಿಗೆ ದೇಶ ಭಕ್ತಿ, ದೇಶ ಪ್ರೇಮ ಹಾಗೂ ದೇಶಾಭಿಮಾನ ಮೂಡಿಸುವಂತಹ ಪ್ರಯತ್ನದಲ್ಲಿ ಇದು ಒಂದು ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.ಎಲ್ಲಾ ಸಾರ್ವಜನಿಕರ ಅಪೇಕ್ಷೆಯಂತೆ ಹಾಸನದಲ್ಲಿ ಪ್ರಪ್ರಥಮವಾಗಿ 2000 ಅಡಿಗಳ ಧ್ವಜವನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪರೇಡ್ ಮೈದಾನದವರೆಗೂ ಹಾಸನ ನಗರದ ಎಲ್ಲಾ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಳಗೊಂಡಂತೆ ಈ ತ್ರಿವರ್ಣ ಧ್ವಜವನ್ನು ಪಟ್ಟಣದಲ್ಲಿ ಅನಾವರಣ ಮಾಡುವಂತಹ ಒಂದು ಪ್ರಯತ್ನಕ್ಕೆ ಕಾರಣರಾದ ಎಲ್ಲಾ ದೇಶ ಅಭಿಮಾನಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೂ ಶುಭಾಶಯ ಮತ್ತು ಅಭಿನಂದನೆ ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಸದರಾದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಮತ್ತಿತರರು ಹಾಜರಿದ್ದರು.