ಸಾರಾಂಶ
ಕಾರವಾರ: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡಕುಸಿದು ೧೧ ಜನ ಕಣ್ಮರೆಯಾದ ಭಾರೀ ದುರಂತಕ್ಕೆ ೨೦೨೪ ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ೨೦೨೪ನೇ ಸಾಲಿನಲ್ಲಿ ಪ್ರಾಕೃತಿಕವಾಗಿ ಸಾಕಷ್ಟು ಅಹಿತಕರ ಘಟನಾವಳಿಗಳು ನಡೆದುಹೋಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಕಳೆದುಕೊಂಡಿದೆ.
ಜುಲೈ ೧೬ರಂದು ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಗುಡ್ಡಕುಸಿದು ೧೧ ಜನರು ಕಣ್ಮರೆಯಾಗಿದ್ದರು. ಬೃಹತ್ ಗಾತ್ರದ ಗುಡ್ಡ ಕಲ್ಲುಬಂಡೆ, ಮಣ್ಣಿನ ಸಮೇತ ಕುಸಿದು ಪಕ್ಕದ ಗಂಗಾವಳಿ ನದಿಗೆ ಬಿದ್ದಿತ್ತು. ಹೆದ್ದಾರಿ ಪಕ್ಕದಲ್ಲೇ ಹೊಟೆಲ್ ನಡೆಸುತ್ತಿದ್ದ ಕುಟುಂಬ, ಹೆದ್ದಾರಿಯಲ್ಲಿ ಸಂಚಾರ ಮಾಡುವ ೪ ಲಾರಿ, ಅದರ ಚಾಲಕರು ಮಣ್ಣಿನಡಿ ಸಿಲುಕಿದ್ದರು. ನದಿತಪ್ಪಲಿನಲ್ಲಿ ಇರುವ ಉಳುವರೆ ಗ್ರಾಮದ ೪ ಮನೆಗಳು ಸಂಪೂರ್ಣ ಧರಾಶಾಹಿಯಾಗಿತ್ತು. ರಾಜ್ಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಮಿಲಿಟರಿ ತಂಡ, ವಿವಿಧ ತಜ್ಞರು ಕಾರ್ಯಾಚರಣೆ ನಡೆಸಿ ೯ ಜನರ ಕಳೇಬರ ತೆಗೆದಿದ್ದು, ಇನ್ನೂ ಇಬ್ಬರ ದೇಹ ಪತ್ತೆಯಾಗಿಲ್ಲ. ಗ್ಯಾಸ್ ಸಿಲಿಂಡರ್ ತುಂಬಿದ್ದ ಟ್ಯಾಂಕರ್ ನದಿಗೆ ಉರುಳಿ ಸುತ್ತಮುತ್ತಲಿನ ಪ್ರದೇಶದ ಜನರು ಆತಂಕಿತರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಡಾ. ವೀರೇಂದ್ರ ಹೆಗ್ಗಡೆ ಒಳಗೊಂಡು ಹಲವಾರು ಜನರು ಭೇಟಿ ನೀಡಿದ್ದರು. ಈ ಘಟನೆ ಕರ್ನಾಟಕ ಒಂದೇ ಅಲ್ಲದೇ ರಾಷ್ಟ್ರ ಮಟ್ಟದಲ್ಲೂ ಸುದ್ದಿಯಾಗಿತ್ತು. ಇದೇ ಅವಧಿಯಲ್ಲಿ ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲೂ ಗುಡ್ಡಕುಸಿದು ವಾರಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.ಆ. ೭ರಂದು ಮಧ್ಯರಾತ್ರಿ ಕಾರವಾರದಲ್ಲಿ ಹರಿಯುವ ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆ ಕುಸಿದು ಬಿದ್ದು, ಸೇತುವೆ ಮೇಲೆ ಸಾಗುತ್ತಿದ್ದ ಒಂದು ಲಾರಿ, ಅದರ ಚಾಲಕ ನದಿಯಲ್ಲಿ ಬಿದ್ದಿದ್ದರು. ಅಂದಾಜು ೪೦ ವರ್ಷಗಳ ಹಿಂದೆ ಈ ಸೇತುವೆಯನ್ನು ನಿರ್ಮಿಸಲಾಗಿತ್ತು.
ಗಣ್ಯರ ನಿಧನ: ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ, ವೃಕ್ಷಮಾತೆ ಎಂದೇ ಕರೆಸಿಕೊಂಡಿದ್ದ ಅಂಕೋಲಾ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ಡಿ. 16ರಂದು ನಿಧನರಾದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರು ಐದು ದಶಕಗಳ ಕಾಲ ಪರಿಸರ ಸಂರಕ್ಷಣೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದರು.ಜನವರಿ ತಿಂಗಳ ಅಂತ್ಯದಲ್ಲಿ ಶಿರಸಿಯ ಟಿಎಸ್‌ಎಸ್ ರೂವಾರಿ, ಹಿರಿಯ ಸಹಕಾರಿ ಶಾಂತಾರಾಮ ಹೆಗಡೆ ಶೀಗೇಹಳ್ಳಿ ನಿಧನರಾದರು. ಶಿರಸಿ ತಾಲೂಕಿನ ಮುಂಡಗನಮನೆ ಸೇವಾ ಸಹಕಾರಿ ಸಂಘಕ್ಕೆ ೧೯೭೬ರಲ್ಲಿ ಅಧ್ಯಕ್ಷರಾಗಿ, ೧೯೯೫ರಿಂದ ಟಿಎಸ್‌ಎಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದಲ್ಲದೇ ಕೆಡಿಸಿಸಿ ಬ್ಯಾಂಕ್, ಜಿಲ್ಲಾ ಕಾಂಗ್ರೆಸ್, ಶಿರಸಿಯ ಮಾಡನ್ ಎಜ್ಯುಕೇಶನ್ ಸೊಸೈಟಿ (ಎಂಇಎಸ್) ಅಧ್ಯಕ್ಷರಾಗಿ ಕೂಡಾ ಸೇವೆ ಸಲ್ಲಿಸಿದ್ದರು. ಫೆಬ್ರವರಿಯಲ್ಲಿ ಹಿರಿಯ ಸಾಹಿತಿ, ಪ್ರಕಾಶಕ ವಿಷ್ಣು ನಾಯ್ಕ ನಿಧನರಾದರು. ಅಂಕೋಲಾ ತಾಲೂಕಿನ ಅಂಬಾರಕೊಡ್ಲು ಊರಿನವರಾದ ವಿಷ್ಣು ನಾಯ್ಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿದ್ದಾರೆ. ರಾಘವೇಂದ್ರ ಪ್ರಕಾಶನ ಸ್ಥಾಪನೆ ಕೂಡಾ ಮಾಡಿ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಹಕಾರಿ ಹಾಗೂ ಸಾಹಿತ್ಯಕ್ಷೇತ್ರದ ಸಾಧಕರನ್ನು ಜಿಲ್ಲೆ ಕಳೆದುಕೊಂಡಂತಾಗಿದೆ.
ಹೋರಾಟ: ಜನವರಿ ಅಂತ್ಯದಲ್ಲಿ ಹೊನ್ನಾವರ ತಾಲೂಕಿನ ಕಾಸರಗೋಡ ವಾಣಿಜ್ಯ ಬಂದರು, ಹೈಟೆಡ್ ಲೈನ್ ಸರ್ವೆಗೆ ವಿರೋಧಿಸಿ ಸ್ಥಳೀಯ ನೂರಾರು ಜನರು ಪ್ರತಿಭಟನೆ ನಡೆಸಿದ್ದರು. ಭಟ್ಕಳ ಉಪ ವಿಭಾಗಾಧಿಕಾರಿ ಡಾ. ನಯನಾ ನೇತೃತ್ವದಲ್ಲಿ ಸರ್ವೆ ನಡೆಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಇದನ್ನು ವಿರೋಧಿಸಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಫೆಬ್ರವರಿ ಮೊದಲ ವಾರಲ್ಲಿ ಭಟ್ಕಳದಿಂದ ಕುಮಟಾ ವರೆಗೆ ಹೋರಾಟಗಾರ ಅನಂತಮೂರ್ತಿ ಹೆಗಡೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಪಾದಯಾತ್ರೆ ನಡೆಸಿದರು.
ಶಿರಸಿಯ ಗಣೇಶನಗರದ ಅಂಗನವಾಡಿ ಮಕ್ಕಳಿಗೆ ನೀರಿನ ಸಮಸ್ಯೆ ಇರುವುದನ್ನು ಅರಿತ ಗೌರಿ ನಾಯ್ಕ ಏಕಾಂಗಿಯಾಗಿ ಬಾವಿ ತೋಡಿ ನೀರಿನ ವ್ಯವಸ್ಥೆ ಮಾಡುವಲ್ಲಿ ಯಶ ಕಂಡಿದ್ದರು. ಮಾರ್ಚ್ ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ವಿಧಾಸೌಧದಲ್ಲಿ ಪಾಕ್ ಪರ ಘೋಷಣೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಮಾ. ೫ರಂದು ಬನವಾಸಿಯಲ್ಲಿ ಆಯೋಜನೆಗೊಂಡಿದ್ದ ಕದಂಬೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.ಏ. ೨೯ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿಯಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರ ನಡೆಸಿದರು.
6 ಜನರ ಸಾವು: ಏ. ೨೨ರಂದು ದಾಂಡೇಲಿಯ ಅಕೋಡಾ ಬಳಿ ಕಾಳಿ ನದಿ ಹಿನ್ನೀರಿನಲ್ಲಿ ಆಕಸ್ಮಿಕವಾಗಿ ನದಿಗೆ ಬಿದ್ದು ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಣೆ ಮಾಡಲು ಹೋಗಿ ಹುಬ್ಬಳ್ಳಿಯ ಒಂದೇ ಕುಟುಂಬದ ೬ ಜನರು ಮೃತಪಟ್ಟಿದ್ದರು.ಮೇ ತಿಂಗಳಲ್ಲಿ ಭಟ್ಕಳದ ಕಡವಿನಕಟ್ಟೆ ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದರು. ಹೊಳೆಯಲ್ಲಿ ಆಕಸ್ಮಿಕವಾಗಿ ಯುವಕ ಬಿದ್ದಿದ್ದು, ಅದನ್ನು ನೋಡಿದ ಮಹಿಳೆ ಆತನ ರಕ್ಷಣೆಗೆ ಹೋಗಿ ಅವರೂ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಇದೇ ತಿಂಗಳಲ್ಲಿ ಹೊನ್ನಾವರ ತಾಲೂಕಿನ ಗುಳದಕೇರಿಯಲ್ಲಿ ಜ್ಯುವೆಲರಿ ಅಂಗಡಿಯೊಂದರಲ್ಲಿ ₹೧೪.೫೫ ಲಕ್ಷದ ಚಿನ್ನ, ₹೧೧ ಲಕ್ಷದ ಬೆಳ್ಳಿ ಕಳ್ಳತನ ನಡೆಸಿದ್ದ ೭ ಜನರ ಆರೋಪಿತರನ್ನು ಪೊಲೀಸರು ಹೆಡೆಮುರಿಕಟ್ಟಿದ್ದರು. ಕಾರವಾರ ಅರ್ಬನ್ ಬ್ಯಾಂಕಿನಲ್ಲಿ ₹೫೦ ಕೋಟಿಗೂ ಅಧಿಕ ಮೊತ್ತದ ಹಗರಣ ಆಗಿರುವುದು ಬೆಳಕಿಗೆ ಬಂದಿತ್ತು. ೧೦ ವರ್ಷದಿಂದ ಅವ್ಯವಹಾರ ನಡೆದರೂ ಆಡಳಿತ ಮಂಡಳಿ ಗಮನಕ್ಕಿಲ್ಲ.
ನಾಲ್ವರ ಸಾವು: ಡಿ. ೧೧ರಂದು ಕೋಲಾರ ತಾಲೂಕಿನ ಮುಳಬಾಗಿಲಿನ ವಿದ್ಯಾರ್ಥಿಗಳು, ಶಿಕ್ಷಕರು ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದು, ಕಡಲತೀರದಲ್ಲಿ ಆಟವಾಡುವಾಗ ಅಲೆಯಬ್ಬರಕ್ಕೆ ಸಿಲುಕಿ ನಾಲ್ಕು ಜನ ವಿದ್ಯಾರ್ಥಿನಿಯರು ಮೃತಪಟ್ಟಿದ್ದರು. ಇದಾದ ಮರುದಿನವೇ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೆಲಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದನು.ಉತ್ತರಾಧಿಕಾರಿ: ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠಕ್ಕೆ ಶಿಷ್ಯ ಸ್ವೀಕಾರ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನ ನಡೆದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ಪಟ್ಟಾಭಿಷೇಕ ಮಾಡಲಾಯಿತು.