ಸಾರಾಂಶ
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆಹೊಸ ವರ್ಷದ ಮೊದಲ ದಿನವಾದ ಸೋಮವಾರ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ, ಪಾರ್ವತಿ ಬೆಟ್ಟ, ತ್ರಿಯಂಬಕೇಶ್ವರ ದೇವಸ್ಥಾನ, ಬಂಡೀಪುರ ಸಫಾರಿಯಲ್ಲಿ ಪ್ರವಾಸಿಗರ ದಂಡೇ ನೆರೆದಿತ್ತು.ಹೊಸ ವರ್ಷದ ಮುನ್ನಾ ದಿನ ರಜೆ ಹಾಕಿ ಬಂದಿದ್ದ ಪ್ರವಾಸಿಗರು ವರ್ಷಾಚರಣೆಗೆ ಆಗಮಿಸಿದ್ದ ರಾಜ್ಯದ ವಿವಿಧ ಜಿಲ್ಲೆಯ ಜನರು ಗುಂಡ್ಲುಪೇಟೆ, ಬಂಡೀಪುರ ಅರಣ್ಯದಂಚಿನ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದರು.ಸೋಮವಾರ ಮುಂಜಾನೆ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಬೆಟ್ಟಕ್ಕೆ ತೆರಳಿ, ಗೋಪಾಲನ ದರ್ಶನ ಪಡೆದರು. ಹಿಮದ ಸವಿಯನ್ನು ಸವಿದು ತೆರಳುತ್ತಿದ್ದ ದೃಶ್ಯ ಬೆಟ್ಟದಲ್ಲಿ ಕಂಡು ಬಂದಿತು. ಬೆಟ್ಟಕ್ಕೆ ಆಗಮಿಸುವ ಭಕ್ತರಿಗಾಗಿ ೩೦ ಬಸ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊಸ ವರ್ಷದ ದಿನ ಹೆಚ್ಚಿನ ಪ್ರವಾಸಿಗರು ಬರುವ ಸಾದ್ಯತೆ ಕಂಡು ಬೆಟ್ಟದ ತಪ್ಪಲಿನಿಂದ ೨೦ ಬಸ್, ಗುಂಡ್ಲುಪೇಟೆ ಬಸ್ ನಿಲ್ದಾಣದಿಂದ ಗೋಪಾಲಸ್ವಾಮಿ ಬೆಟ್ಟಕ್ಕೂ ೧೦ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಘಟಕ ವ್ಯವಸ್ಥಾಪಕಿ ಪುಷ್ಪ ತಿಳಿಸಿದರು.ಬೆಳಗ್ಗೆಯಿಂದ ಸಂಜೆಯ ತನಕ ಪ್ರಯಾಣಿಕರ, ಕಳುಹಿಸಿ ಬರುವ ತನಕ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಶ್ರಮ ಹಾಕಿದ್ದಾರೆ ಅಲ್ಲದೆ ಆರು ೬.೪೦ ಲಕ್ಷ ಆದಾಯ ಕೆಎಸ್‌ಆರ್‌ಟಿಸಿಗೆ ಬಂದಿದೆ ಎಂದರು.ಗೋಪಾಲಸ್ವಾಮಿ ಬೆಟ್ಟ ಹೊರತು ಪಡಿಸಿ ತೆರಕಣಾಂಬಿ ಬಳಿ ಹುಲಗಿನಮುರುಡಿ ಪಾರ್ವತಿ ಬೆಟ್ಟ ಹಾಗೂ ತ್ರಿಯಂಬಕಪುರದ ತ್ರಿಯಂಬಕೇಶ್ವರ ದೇವಸ್ಥಾನ ಹಾಗು ಗುಂಡ್ಲುಪೇಟೆ ಬಳಿ ಕಬ್ಬೇಕಟ್ಟೆ ಶನೇಶ್ವರಸ್ವಾಮಿ ದೇವಸ್ಥಾನಕ್ಕೂ ಪ್ರವಾಸಿಗರು ಮುಖ ಮಾಡಿದ್ದರು.ತಾಲೂಕಿನ ಪ್ರಸಿದ್ಧ ಮಠಗಳಲ್ಲೊಂದಾದ ಪಡಗೂರು ಅಡವಿ ಮಠಕ್ಕೆ ಭಕ್ತರು ಭೇಟಿ ಪಡಗೂರು ಮಠಾಧೀಶ ಶಿವಲಿಂಗೇಂದ್ರಸ್ವಾಮೀಜಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.
ಸಫಾರಿಯಲ್ಲೂ ಜನವೋ ಜನ!ಗೋಪಾಲಸ್ವಾಮಿ ಬೆಟ್ಟ, ಹುಲಗಿನ ಮುರಡಿ ಹಾಗೂ ಊಟಿಗೆ ತೆರಳಿ ವಾಪಸ್ ಬರುವ ಪ್ರವಾಸಿಗರು ಸಫಾರಿಗೆ ತೆರಳಲು ಸೋಮವಾರ ಬೆಳಗ್ಗೆ ಮತ್ತು ಸಂಜೆ ಪ್ರವಾಸಿಗರು ಮುಗಿ ಬಿದ್ದಿದ್ದರು.ರಜಾ ಮುಗಿಸಿ ನಗರದತ್ತ ಪ್ರಯಾಣ ಬೆಳೆಸುವ ಮಂದಿ ಬಂಡೀಪುರ ಸಫಾರಿಯಲ್ಲಿ ಒಂದು ರೌಂಡ್ ಹಾಕಿ ಮನೆಗೆ ತೆರಳುವ ಸಲುವಾಗಿ ಸೋಮವಾರ ಸಂಜೆ ಸಫಾರಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು.