ಹಲವು ಸಿಹಿ, ಕೆಲವು ಕಹಿ ನೆನಪುಗಳಿಂದ ಕೂಡಿದ್ದ 2024

| Published : Jan 01 2025, 12:01 AM IST

ಹಲವು ಸಿಹಿ, ಕೆಲವು ಕಹಿ ನೆನಪುಗಳಿಂದ ಕೂಡಿದ್ದ 2024
Share this Article
  • FB
  • TW
  • Linkdin
  • Email

ಸಾರಾಂಶ

ಗಡಿಜಿಲ್ಲೆ ಚಾಮರಾಜನಗರಕ್ಕೆ 2024ರ ವರ್ಷ ಹಲವು ಸಿಹಿ, ಕೆಲವು ಕಹಿ, ದಾಖಲೆಗಳ ಗರಿಯನ್ನು ಹೊತ್ತುತಂದಿತ್ತು. ವಿಶ್ವದ ಅತಿದೊಡ್ಡ ಚುನಾವಣೆಯಾದ ಲೋಕ ಅಖಾಡದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಜೊತೆಗೆ, ಮತಗಟ್ಟೆಯ ಧ್ವಂಸ ಮಾಡಿದ ಕಹಿ ಪ್ರಸಂಗವೂ ಜರುಗಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗಡಿಜಿಲ್ಲೆ ಚಾಮರಾಜನಗರಕ್ಕೆ 2024ರ ವರ್ಷ ಹಲವು ಸಿಹಿ, ಕೆಲವು ಕಹಿ, ದಾಖಲೆಗಳ ಗರಿಯನ್ನು ಹೊತ್ತುತಂದಿತ್ತು. ವಿಶ್ವದ ಅತಿದೊಡ್ಡ ಚುನಾವಣೆಯಾದ ಲೋಕ ಅಖಾಡದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಜೊತೆಗೆ, ಮತಗಟ್ಟೆಯ ಧ್ವಂಸ ಮಾಡಿದ ಕಹಿ ಪ್ರಸಂಗವೂ ಜರುಗಿತು.ಕೈ ವಶವಾದ ಅರಳಿದ್ದ ಕಮಲ:

ಚಾಮರಾಜನಗರ ಲೋಕಸಭಾ ಕ್ಷೇತ್ರದ 2019ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು. ಸಿಎಂ ಸಿದ್ದರಾಮಯ್ಯ ಸ್ವ ಕ್ಷೇತ್ರವೂ ಚಾಮರಾಜನಗರ ಲೋಕ ಅಖಾಡಕ್ಕೆ ಒಳಪಡಲಿದ್ದು 2024ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸುನೀಲ್ ಬೋಸ್ ದಾಖಲೆ ಮತ ಪಡೆದು ಜಯಭೇರಿ ಬಾರಿಸುವ ಮೂಲಕ ಚಾಮರಾಜನಗರ ಕೈ ವಶವಾಯಿತು.

ಮತಗಟ್ಟೆ ಧ್ವಂಸ:

ಮೂಲಸೌಕರ್ಯಕ್ಕೆ ಒತ್ತಾಯಿಸಿ ಮತದಾನ ಬಹಿಷ್ಕಾರ ಮಾಡಿದ್ದ ಹನೂರು ತಾಲೂಕಿನ ಇಂಡಿಗನತ್ತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮತಗಟ್ಟೆಯನ್ನೇ ಧ್ವಂಸ ಮಾಡಿದ್ದರು. ಜನತಂತ್ರದ ಹಬ್ಬದಲ್ಲಿ ಇಂಡಿಗನತ್ತ ಪ್ರಕರಣ ದೇಶದಲ್ಲಿ ಸದ್ದು ಮಾಡಿತ್ತು. ಬಳಿಕ, ಮರು ಚುನಾವಣೆ ನಡೆಯಿತು.

ಗಜ ಗಣತಿ, ಕಾಡಿಗೆ ಬೆಂಕಿ, ದಾಖಲೆ ಗರಿ:

2024 ರಲ್ಲಿ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಗಜ ಗಣತಿ ನಡೆಯಿತು. ಚಾಮರಾಜನಗರದ ಬಂಡೀಪುರ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಮೂರು ದಿನ ಗಜಗಣತಿ ನಡೆಯಿತು. ಬಂಡೀಪುರದಲ್ಲಿ ಅತ್ಯಧಿಕ ಆನೆಗಳಿರುವ ಹುಲಿ ಸಂರಕ್ಷಿತ ಪ್ರದೇಶ ಎಂಬ ಗರಿಮೆಗೆ ಪಾತ್ರವಾಯಿತು. ದೇಶದಲ್ಲೇ 2ನೇ ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶ ಎಂಬ ಕೀರ್ತಿಗೂ ಬಂಡೀಪುರ 2024ರಲ್ಲಿ ಪಾತ್ರವಾಯಿತು. ಬಂಡೀಪುರದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಮತ್ತು ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ವಿದ್ಯಾರ್ಥಿ ಮಿತ್ರ ಕಾರ್ಯಕ್ರಮ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿತು.

ಕಾಡಿದ ಕಾಡ್ಗಿಚ್ಚು:

ವರ್ಷಾರಂಭದಲ್ಲಿ ಬಿಸಿಲಿನ ಧಗೆ ಹೆಚ್ಚಿದ್ದರಿಂದ ಕಾಡಿನಲ್ಲಿ ಕಾಡ್ಗಿಚ್ಚು ಸಮಸ್ಯೆ ಅತಿಯಾಗಿ ಕಾಡಿತು. ಫೆ.28ರಂದು ಯಳಂದೂರು ತಾಲೂಕಿನ ಬಿಳಿಗಿರಿ ರಂಗನಬೆಟ್ಟದ ಯರಕನಗದ್ದೆಯ ಬಳಿ ಕಾಡ್ಗಿಚ್ಚು ಕಾಣಿಸಿಕೊಂಡು ಅರಣ್ಯ ಬೆಂಕಿಗೆ ಆಹುತಿಯಾಯಿತು. ಕೊಳ್ಳೇಗಾಲ ತಾಲೀಕಿನ ಕರಿಯನಪುರ ಗ್ರಾಮದ ಕೋಲದೇವನ ಕುರಚಲು ಗುಡ್ಡ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವಲಯ ವ್ಯಾಪ್ತಿಯ ಬಿಳಿಗಿರಿ ರಂಗನಬೆಟ್ಟದ ಮುತ್ತು ಗದಗದ್ದೆ ಪೋಡಿನ ಮುಂಭಾಗದ ಚಿಕ್ಕಮಲ್ಕಿ ಕಾಡು, ಬೈಲೂರು ವನ್ಯಜೀವಿ ವಲಯದ ಪಿ.ಜಿ ಪಾಳ್ಯ ಶಾಖೆಯ ಮಾವತ್ತೂರು ಗಸ್ತಿನ ಹೊಕ್ಕುಬರೆ ಬೋಳಿ ಮತ್ತು ಮದ್ದಳೆಮಾವು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡು ಅರಣ್ಯ ಅಗ್ನಿಗೆ ಆಹುತಿಯಾಯಿತು.

ಏ.23 ಹಾಗೂ 28ರಂದು ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯದಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ನೂರಾರು ಎಕರೆ ಅರಣ್ಯ ಹಾಗೂ ಹುಲ್ಲುಗಾವಲು ಸುಟ್ಟುಹೋಯಿತು.

ಎಸ್ಸೆಸ್ಸೆಲ್ಸಿ ಫಲಿತಾಂಶ:

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಶೇ.73.85 ಫಲಿತಾಂಶದೊಂದಿಗೆ 24ನೇ ಸ್ಥಾನ ಪಡೆಯಿತು. 2022–23ನೇ ಸಾಲಿನಲ್ಲಿ ಜಿಲ್ಲೆ 7ನೇ ಸ್ಥಾನ ಪಡೆದಿತ್ತು. ದ್ವಿತೀಯ ಪಿಯು ಫಲಿತಾಂಶ: 2023–24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯು ಶೇ.84.99ರಷ್ಟು ಫಲಿತಾಂಶ ದಾಖಲಿಸಿ 14ನೇ ಸ್ಥಾನ ಪಡೆಯಿತು. ಕಳೆದ ಸಾಲಿನಲ್ಲಿ ಜಿಲ್ಲೆ ರಾಜ್ಯಕ್ಕೆ 12ನೇ ಸ್ಥಾನ ಪಡೆದಿತ್ತು. ಆದರೆ, ಶೇಕಡವಾರು ಫಲಿತಾಂಶದಲ್ಲಿ ಸುಧಾರಣೆ ಕಂಡುಬಂತು.

ಬಿಜೆಪಿಗೆ ಹೊಸ ಹುರುಪು; ಕೈ ಶಾಸಕಗೆ ನಿಗಮ ಮಂಡಲಿ:

2024ರಲ್ಲಿ ಬಿಜೆಪಿ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಗುಂಡ್ಲುಪೇಟೆ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅಧಿಕಾರ ಸ್ವೀಕರಿಸುವ ಮೂಲಕ ಗಡಿಜಿಲ್ಲೆ ಬಿಜೆಪಿಯಲ್ಲಿ ಹೊಸ ಹುರುಪು ಕಂಡುಬಂದಿತು. ಇನ್ನು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಎಂಎಸ್ಐಎಲ್ ನಿಗಮದ ಅಧ್ಯಕ್ಷರನ್ನಾಗಿ ಸಿಎಂ ಸಿದ್ದರಾಮಯ್ಯ ನೇಮಿಸಿದರು.

ಗಣರಾಜ್ಯೋತ್ಸವಕ್ಕೆ ಕವಿಗೆ, ಪದಗ್ರಹಣಕ್ಕೆ ಮಹಿಳಾ ಉದ್ಯಮಿಗೆ ಆಹ್ವಾನ:

ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದ ಜೋಗುಳ ಪದ ರಚಿಸಿದ್ದ ಕೊಳ್ಳೇಗಾಲ ನಿವಾಸಿ, ಕವಿ ಮಂಜುನಾಥ್ ಅವರಿಗೆ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಲವದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿತ್ತು. ಕೊರೊನಾ ವೇಳೆ "ಮಲಗು ಕಂದ ಮಲಗು ಕೂಸೆ, ಮಲಗು ನನ್ನ ಜಾಣ ಮರಿಯೇ.. ಎಂಬ ಜೋಗುಳ ಪದ ರಚಿಸಿದ್ದರು.

ಇನ್ನು, ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಚಾಮರಾಜನಗರದ ಮಹಿಳಾ ಉದ್ಯಮಿ ವರ್ಷಾ ಅವರಿಗೆ ಆಹ್ವಾನ ಕೊಡಲಾಗಿತ್ತು. ಇವರು, ಕಸವೆಂದು ಬಿಸಾಡುವ ಬಾಳೆದಿಂಡಿನಿಂದ ಹಲವು ವಸ್ತು ತಯಾರಿಸಿ ಇನ್ನಿತರ ಮಹಿಳೆಯರಿಗೆ ನೌಕರಿ ಕೊಟ್ಟಿದ್ದರು. ರಾಜ್ಯದ ಕಟ್ಟ ಕಡೆಯ ರೈಲ್ವೆ ನಿಲ್ದಾಣವಾದ ಚಾಮರಾಜನಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಅಮೃತ ಭಾರತ ಸ್ಟೇಷನ್ ಯೋಜನೆ ವ್ಯಾಪ್ತಿಗೆ ತರಲಾಗಿದ್ದು ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಸದ್ಯ, ಕಾಮಗಾರಿ ಭರದಿಂದ ಸಾಗುತ್ತಿದ್ದು ಹೈಟೆಕ್ ಸ್ಪರ್ಶ ಕೊಡಲಾಗುತ್ತಿದೆ.

ಅತಿವೃಷ್ಟಿ- ಅನಾವೃಷ್ಟಿಗೆ ರೈತರು ತತ್ತರ:

2024ರಲ್ಲಿ ಗಡಿಜಿಲ್ಲೆ ರೈತರು ಅತಿವೃಷ್ಟಿ- ಅನಾವೃಷ್ಟಿಗೆ ತತ್ತರಿಸಿದ್ದರು. ಆರಂಭದಲ್ಲಿ ಬರದಿಂದ ಬೆಳೆ ಕಳೆದುಕೊಂಡಿದ್ದ ರೈತರು ಮುಂಗಾರಿನ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗಿ ಕೈಗೆ ಬಂದಿದ್ದ ಫಸಲು ಬರದಂತಾಗಿತ್ತು. ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ‌.ಎಸ್.ಪಾಟೀಲ್ ನಡಹಳ್ಳಿ ಹಾಗೂ ಉಪಾಧ್ಯಕ್ಷ ರುದ್ರೇಶ್ ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲೆಯ ಹಲವೆಡೆ ಬರ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಿದ್ದರು.ರಥೋತ್ಸವ ಸಡಗರ- ಚಿಕ್ಕಲ್ಲೂರಲ್ಲಿ ಭರ್ಜರಿ ಬಾಡೂಟ:

2024ರಲ್ಲಿ ಜಿಲ್ಲಾದ್ಯಂತ ವಿವಿಧ ರಥೋತ್ಸವಗಳು ಸಡಗರದಿಂದ ನಡೆಯಿತು. ಚಾಮರಾಜೇಶ್ವರ ರಥೋತ್ಸವ, ಬಿಳಿಗಿರಿರಂಗನಾಥ, ಹಿಮವದ್ ಗೋಪಾಲಸ್ವಾಮಿ, ಕಂದೇಗಾಲದ ಪಾರ್ವತಾಂಭ, ಮಲೆಮಹದೇಶ್ವರನ ರಥೋತ್ಸವಗಳು ಅದ್ಧೂರಿಯಾಗಿ ನೆರವೇರಿತು. ಅದ್ಧೂರಿ ದಸರಾ ನಡೆದ ಪರಿಣಾಮವಾಗಿ ಜಿಲ್ಲಾ ದಸರಾವೂ ಈ ಬಾರಿ ಕಳೆಗಟ್ಟಿತ್ತು. ಪಂಕ್ತಿಸೇವೆಗೆ ಹೆಸರಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ನಿಷೇಧದ ಹೊರತಾಗಿಯೂ ಭಕ್ತರು ಭಕ್ತಿ ಮೆರೆದರು. ಭರ್ಜರಿ ಬಾಡೂಟ ತಯಾರಿಸಿ ನೂರಾರು ವರ್ಷದ ಸಂಪ್ರದಾಯವಾದ ಪಂಕ್ತಿಸೇವೆಯನ್ನು ನಡೆಸಿದರು.

ವೀರಪ್ಪನ್ ಕೇಸ್ ಖುಲಾಸೆ: ವೀರಪ್ಪನ್ ಕೇಸ್‌ಗಳಲ್ಲಿ ಆರೋಪಿಯಾಗಿದ್ದ ಸ್ಪೆಲ್ಲಾ ಮೇರಿ ಎಲ್ಲ ಕೇಸ್‌ಗಳಿಂದ ಖುಲಾಸೆಗೊಂಡರು‌. ವೀರಪ್ಪನ್ ಗ್ಯಾಂಗಿನಲ್ಲಿ ಗುರುತಿಸಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಸ್ಟೆಲ್ಲಾ ಮೇರಿ ಆರೋಪ ಮುಕ್ತರಾದರು. ಚಾಮರಾಜನಗರ ಬಾಲನ್ಯಾಯ ಮಂಡಲಿಯು ಸ್ಟೆಲ್ಲಾ ಮೇರಿ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಂದ ಖುಲಾಸೆಗೊಂಡರು.

2024ರಲ್ಲಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಾರು ಮಂದಿಗೆ ಶಿಕ್ಷೆ ಕೂಡ ಪ್ರಕಟವಾಗಿತ್ತು. ಸುಳ್ವಾಡಿ ವಿಷ ಪ್ರಸಾದ ದುರಂತದ ಮೊದಲನೇ ಆರೋಪಿ ಇಮ್ಮಡಿ ಮಹಾದೇವಸ್ವಾಮಿಗೆ ಜಿಲ್ಲಾ ನ್ಯಾಯಾಲಯ ಎರಡನೇ ಬಾರಿ ಜಾಮೀನು ನಿರಾಕರಿಸಿತ್ತು. ಅಂಬೇಡ್ಕರ್‌ ಬಗ್ಗೆ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವಹೇಳ‍ನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಡಿ.31ರಂದು ದಲಿತ ಸಂಘಗಳ ನೇತೃತ್ವದಲ್ಲಿ ಚಾಮರಾಜನಗರ ಬಂದ್‌ ಮಾಡಲಾಯಿತು.

ಅಗಲಿದ ನೇತಾರರು:

5 ದಶಕಗಳ ಸುದೀರ್ಘ ಸಕ್ರಿಯ ರಾಜಕಾರಣದಲ್ಲಿದ್ದು 2024 ರ ಮಾರ್ಚ್‌ನಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದ ವಿ.ಶ್ರೀನಿವಾಸಪ್ರಸಾದ್ ವಯೋಸಹಜ ಕಾಯಿಲೆಗಳಿಂದ ಇಹಲೋಕ ತ್ಯಜಿಸಿದರು‌. 1974ರ ಉಪ ಚುನಾವಣೆಯಿಂದ 2019ರ ಲೋಕಸಭಾ ಚುನಾವಣೆ ತನಕ‌ ಒಟ್ಟು 14 ಬಾರಿ ಚುನಾವಣಗೆ ಸ್ಪರ್ಧೆ ಮಾಡಿದ್ದರು.‌ ಇದರಲ್ಲಿ,‌ 6 ಬಾರಿ ಲೋಕಸಭಾ ಚುನಾವಣೆ ಮತ್ತು ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಚುನಾವಣೆಯಲ್ಲಿ ಸೋಲು- ಗೆಲುವು ಕಂಡಿದ್ದರೂ ಎಂದಿಗೂ ಅವರು ಧೃತಿಗೆಡದೇ ಅಂಬೇಡ್ಕರ್ ಚಿಂತನೆ, ದಲಿತಪರ ಹೋರಾಟದ ಮುಖ್ಯ ಧ್ವನಿಯಾಗಿದ್ದರು.

ಕೊಳ್ಳೇಗಾಲದ ಮಾಜಿ ಶಾಸಕ ಎಸ್.ಜಯಣ್ಣ ಹೃದಯಾಘಾತದಿಂದ ಕೊನೆಯುಸಿರೆಳೆದರು. ನೂತನ ಗೃಹ ಪ್ರವೇಶದ ಸಡಗರದಲ್ಲಿದ್ದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಜಯಣ್ಣ ಹೃದಯಾಘಾತದಿಂದ ಮೃತಪಟ್ಟರು.ಕಂಪ್ಯೂಟರ್ ತರಬೇತಿ ಪಡೆದ ಜೈಲು ಹಕ್ಕಿಗಳು:

ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುವ ರಾಜ್ಯದಲ್ಲಿಯೇ ಮೊದಲು ಎನಿಸಿರುವ ವಿನೂತನ ಅರ್ಥಪೂರ್ಣ ಕಾರ್ಯಕ್ರಮ ಚಾಮರಾಜನಗರ ಜಿಲ್ಲೆಯಲ್ಲಿ ಯಶಸ್ಸು ಕಂಡಿತು. ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿಗಳಿಗೆ ಅಲ್ಲಿಯೇ ಕಂಪ್ಯೂಟರ್ ತರಬೇತಿ ನೀಡಿ ಅವರು ಬಿಡುಗಡೆಗೊಂಡ ಬಳಿಕ ಬದುಕು ಕಟ್ಟಿಕೊಳ್ಳಲು ನೆರವಾಗಲಿ ಎಂಬ ಉದ್ದೇಶದಿಂದ ಕಂಪ್ಯೂಟರ್ ತರಬೇತಿ ನೀಡಲು ಯೋಚಿಸಿ ಮೈಸೂರಿನ ಇನ್‍ಫೋಸಿಸ್ ರೋಟರಿ ಪಂಚಶೀಲ ಸಂಸ್ಥೆಗಳೊಂದಿಗೆ ಸಿಎಸ್‍ಆರ್ ನೆರವಿನೊಂದಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ತರಬೇತಿಗೆ ಈ ಹಿಂದೆ ಚಾಲನೆ ಕೊಟ್ಟು ಹಲವರು ಕೋರ್ಸ್ ಮುಗಿಸಿ ಸರ್ಟಿಫಿಕೇಟ್ ಪಡೆಯುವ ಮೂಲಕ ಬದಲಾವಣೆ ಗಾಳಿಗೆ ಒಳಾಗಾದರು.ಬೆಚ್ಚಿ ಬೀಳಿಸಿದ ಆತ್ಮಹತ್ಯೆಗಳು:ಚಾಮರಾಜನಗರ ಜಿಲ್ಲೆಯ ಕೆಲವು ಆತ್ಮಹತ್ಯೆ ಪ್ರಕರಣಗಳು ಬೆಚ್ಚಿ ಬೀಳಿಸಿದವು‌. ಸಾಲಬಾಧೆಯಿಂದ ಗುಂಡ್ಲುಪೇಟೆ ರೈತ, ಪಿಯು ಕಾಲೇಜಿಗೆ ಸೀಟ್ ಸಿಗಲಿಲ್ಲವೆಂದು ಚಾಮರಾಜನಗರದ ವಿದ್ಯಾರ್ಥಿನಿ ನೇಣಿಗೆ ಕೊರಳೊಡ್ಡಿದ್ದರು.

ಯುವಕನ ಕಾಟದಿಂದ ಬೇಸತ್ತ ಮೈಸೂರಿನ ಕುಟುಂಬವೊಂದು ಸಾಮೂಹಿಕವಾಗಿ ಮಲೆ‌ಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಮೃತಪಟ್ಟಿದ್ದರು.

ತಾಯಿಯೊಬ್ಬಳು ತನ್ನ ಎರಡು ಮಕ್ಕಳ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದಲ್ಲಿ ನಡೆದಿತ್ತು. ಕೊಳ್ಳೇಗಾಲದಲ್ಲಿ ಸಾಲಬಾಧೆಗೆ ಬೇಸತ್ತು ದಂಪತಿ ನೇಣಿಗೆ ಕೊರಳೊಡ್ಡಿದ್ದರು.

ಚಲಿಸುತ್ತಿದ್ದ ಬಸ್‌ಗೆ ವ್ಯಕ್ತಿಯೋರ್ವ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಚಾಮರಾಜನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ನಡೆದಿತ್ತು. 34 ವರ್ಷದ ವ್ಯಕ್ತಿಯೋರ್ವ ಚಲಿಸುತ್ತಿದ್ದ ಬಸ್‌ನ ಹಿಂಬದಿ ಚಕ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು.

ಸಿ.ಪಿ.ಯೋಗೇಶ್ವರ್ ಅವರ ಮಾವನನ್ನು ಅಪಹರಿಸಿ ಕೊಲೆ ಮಾಡಿ ಹನೂರು ತಾಲೂಕಿನ ರಾಮಾಪುರದ ರಸ್ತೆ ಸಮೀಪದ ಕಮರಿಗೆ ದುಷ್ಕರ್ಮಿಗಳು ಬಿಸಾಡಿದ್ದರು.