ಹಾಸನ ಜಿಲ್ಲೆಯಲ್ಲಿ ನೆಲೆ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕಾಂಗ್ರೆಸ್, ಮೂರು ಬಾರಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜುಲೈ 26 ರಂದು ಅರಸೀಕೆರೆಗೆ ಬಂದಿದ್ದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಕ್ಟೋಬರ್ 15 ರಂದು ಹಾಸನಾಂಬೆಯ ದರ್ಶನ ಪಡೆದಿದ್ದರು. ಡಿಸೆಂಬರ್ 6 ರಂದು ನಡೆದ ಸರ್ಕಾರಿ ಸೇವೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಹಾಸನ
ಹೊಸ ವರ್ಷ 2026 ಅನ್ನು ಸ್ವಾಗತಿಸುವ ಸಂಭ್ರಮದ ನಡುವೆಯೇ ಕಳೆದ ವರ್ಷದ ಹಿನ್ನೋಟವನ್ನೊಮ್ಮೆ ಅವಲೋಕಿಸುವುದಾದರೆ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತಗಳ ಜತೆಗೆ ಒಳಿತುಗಳೂ ಆಗಿವೆ. ಆದರೆ, ಒಳಿತಿಗಿಂತ ಕೊಂಚ ಕೆಡುಕುಗಳ ಕೈ ಮೇಲಿದೆ ಎಂದರೂ ತಪ್ಪಾಗಲಾರದು.ಕಾಡಾನೆ ದಾಳಿಗಳ, ಮುಂದುವರಿದ ಸಾವು- ನೋವು:
2025ರ ಆರಂಭದಿಂದಲೇ ಕಾಡಾನೆ ದಾಳಿ ಶುರುವಾಗಿದ್ದು, ಈ ವರ್ಷದಲ್ಲಿ 6 ಜನ ಮೃತಪಟ್ಟರು. ವಿದ್ಯುತ್ ಆಘಾತದಿಂದ ಆನೆಗಳು, ಅವುಗಳ ಮರಿಗಳು ಕೂಡ ಮೃತಪಟ್ಟಿವೆ. ಜನವರಿ 22ರಂದು ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಪುಟ್ಟಯ್ಯ (78) ಸ್ಥಳದಲ್ಲಿಯೇ ಮೃತಪಟ್ಟರು.ಫೆಬ್ರವರಿ 13 ರಂದು ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ದ್ಯಾವಮ್ಮ(62) ಎಂಬುವವರ ಶವ ಪತ್ತೆಯಾಗಿತ್ತು. ಕಾಡಾನೆ ದಾಳಿಯಿಂದಲೇ ದ್ಯಾವಮ್ಮ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಶವ ತೆಗೆಯದೇ ಅರಣ್ಯ ಸಚಿವರು, ಜಿಲ್ಲಾಧಿಕಾರಿ ಬರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಮಾರ್ಚ್ 14ರಂದು ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಸುಶೀಲಮ್ಮ (65) ಮೃತಪಟ್ಟಿದ್ದರು. ಏಪ್ರಿಲ್ 25 ರಂದು ಸಕಲೇಶಪುರ ತಾಲೂಕಿನ ಬೈಕೆರೆ ಗ್ರಾಮದ ಕಾಫಿ ತೋಟದಲ್ಲಿ ತೋಟದ ಮಾಲೀಕ ಷಣ್ಮುಖ (36) ಕಾಡಾನೆ ದಾಳಿಯಿಂದ ಸ್ಥಳದಲ್ಲಿಯೇ ಮೃತಪಟ್ಟರು. ಮೇ 25 ರಂದು ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಅಂಕಿಹಳ್ಳಿ ಗ್ರಾಮದಲ್ಲಿ ಚಂದ್ರಮ್ಮ (45) ಸಾವನ್ನಪ್ಪಿದರು. ಮೇ 5 ರಂದು ಹೆತ್ತೂರು ಸಮೀಪದ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದಲ್ಲಿ ಕಾಡೆಮ್ಮೆ ದಾಳಿಯಿಂದ ಕೃಷಿಕ ತಿಮ್ಮಪ್ಪ (70) ಮೃತಪಟ್ಟಿದ್ದರು.ಆನೆಗಳ ಸಾವು:
ವಿದ್ಯುತ್ ತಗುಲಿ, ಆನೆಗಳ ನಡುವಿನ ಕಾಳಗದಿಂದ ಹಲವು ಆನೆಗಳು ಮೃತಪಟ್ಟಿವೆ. ಜನವರಿ 31ರಂದು ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿ ದೇವಾಲದಕೆರೆ ಸಮೀಪ ಮರಗುಂದ ಗ್ರಾಮದಲ್ಲಿ ಸುಮಾರು 35 ವರ್ಷದ ಕಾಡಾನೆ ಶವ ಪತ್ತೆಯಾಗಿತ್ತು. ಮಾರ್ಚ್ 15ರಂದು ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿ ನೆಲಬಳ್ಳಿ ಗ್ರಾಮದಲ್ಲಿ ಎರಡು ದಂತಗಳನ್ನು ಹೊಂದಿದ್ದ 25 ವರ್ಷದ ಗಂಡಾನೆ ಮೃತಪಟ್ಟಿತ್ತು. ಮೇ 10 ರಂದು ಸಕಲೇಶಪುರ ತಾಲೂಕಿನ ಸುಳ್ಳಕ್ಕಿ- ಶಾಂತಪುರ ಗ್ರಾಮದ ಬಳಿ 20 ವರ್ಷದ ಆನೆಯೊಂದು ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದು, ಜೂನ್ 15 ರಂದು ಸಕಲೇಶಪುರ ತಾಲೂಕಿನ ಗುಡ್ಡಬೆಟ್ಟ ಗ್ರಾಮದ ಬಳಿಯ ಎಬಿಸಿ ಎಸ್ಟೇಟ್‌ನಲ್ಲಿ ಕಾಡಾನೆ ಹಾಗೂ ಮರಿಯಾನೆ ವಿದ್ಯುತ್ ಆಘಾತದಿಂದ ಮೃತಪಟ್ಟವು.ಜೂನ್ 16ರಂದು ಬೇಲೂರು ತಾಲೂಕಿನ ಶಿರಗೂರು ಗ್ರಾಮದ ಜಾಕ್ನಳ್ಳಿ ಎಸ್ಟೇಟ್‌ನಲ್ಲಿ ಮೃತ ಮರಿಯಾನೆಯನ್ನು ತಾಯಿ ಆನೆ ಎಳೆದೊಯ್ದ ದೃಶ್ಯ ಮನ ಕಲಕುವಂತಿತ್ತು.
ನವೆಂಬರ್ 9 ರಂದು ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಜಗಬೋರನಹಳ್ಳಿಯಲ್ಲಿ ಕಾಡಾನೆಗಳಾದ ‘ಕ್ಯಾಪ್ಟನ್’ ಹಾಗೂ ‘ಭೀಮ’ನ ನಡುವಿನ ಕಾಳಗದಲ್ಲಿ ಭೀಮ ದಂತ ಕಳೆದುಕೊಂಡಿತು.ಬಾನು ಮುಷ್ತಾಕ್‌ಗೆ ಬುಕರ್ ಪ್ರಶಸ್ತಿಯ ಗರಿ:
ಕಥೆಗಾರ್ತಿ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಸಂಕಲನ ‘ಹಾರ್ಟ್ ಲ್ಯಾಂಪ್’ಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಒಲಿಯಿತು. ಮೇ 20ರಂದು ಲಂಡನ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಇದು ಕನ್ನಡಕ್ಕೆ ಬಂದ ಮೊದಲ ‘ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ. ಅಲ್ಲದೇ ಕಥಾ ಸಂಕಲನವೊಂದಕ್ಕೆ ಈ ಗೌರವ ಲಭಿಸಿದ್ದು ಇದೇ ಇದೇ ಮೊದಲು.ಪ್ರಶಸ್ತಿಯೊಂದಿಗೆ ತವರಿಗೆ ಬಂದ ಬಾನು ಮುಷ್ತಾಕ್ ಅವರಿಗೆ ಹಾಸನದಲ್ಲಿ ನಾಗರಿಕರಿಂದ ಅಭೂತಪೂರ್ವ ಸನ್ಮಾನ ಆಯೋಜಿಸಲಾಗಿತ್ತು. ತಮ್ಮ ಮನದಾಳದ ಮಾತುಗಳನ್ನು ಅಂದು ವೇದಿಕೆಯಲ್ಲಿ ಬಾನು ಮುಷ್ತಾಕ್ ಹಂಚಿಕೊಂಡಿದ್ದರು.
ಹಾಸನಾಂಬ ಜಾತ್ರೆ: ದಾಖಲೆ ಸಂಗ್ರಹಈ ವರ್ಷ ನಡೆದ ಹಾಸನಾಂಬಾ ದೇವಿಯ ದರ್ಶನೋತ್ಸವ ಜನರ ಜಾತ್ರೆಯಾಗಿ ಪರಿವರ್ತನೆಯಾಗಿದ್ದು, ಹೊಸ ದಾಖಲೆ ಬರೆಯಿತು. 26 ಲಕ್ಷ ಜನ ದರ್ಶನ ಪಡೆದಿದ್ದು, 25.59 ಕೋಟಿ ಆದಾಯ ಸಂಗ್ರಹವಾಗಿತ್ತು.
ದೇಗುಲದಲ್ಲಿಯೇ ಠಿಕಾಣಿ ಹೂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ಹೊಸ ರೂಪುರೇಷೆ ಫಲ ನೀಡಿದ್ದು, ಭಕ್ತರು ಸಂತಸದಿಂದ ದರ್ಶನ ಪಡೆದರು. ಈ ಬಾರಿ ಗಣ್ಯರು, ಅತಿ ಗಣ್ಯರು, ಅವರ ಬೆಂಬಲಿಗರಿಗೆ ನೀಡಲಾಗುತ್ತಿದ್ದ ವಿಐಪಿ ಪಾಸ್ ಸಂಸ್ಕೃತಿಗೆ ಕಡಿವಾಣ ಹಾಕಲಾಗಿತ್ತು.ಗಣಪತಿ ಮೆರವಣಿಗೆ ಮೇಲೆ ಹರಿದ ಲಾರಿ
ಸೆ.12ರಂದು ರಾತ್ರಿ ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಗಳೂ ಸೇರಿ 10 ಜನ ಮೃತಪಟ್ಟಿದ್ದರು.ರಾತ್ರಿ ಸಾಗುತ್ತಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ವೇಗವಾಗಿ ಬಂದ ಕ್ಯಾಂಟರ್ ಹರಿದು 9 ಜನರು ಮೃತಪಟ್ಟಿದ್ದರು. ಇದರಲ್ಲಿ ಐವರು ವಿದ್ಯಾರ್ಥಿಗಳಿದ್ದರು. ನಂತರ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿತ್ತು.
ವರ್ಷದಲ್ಲಿ 3 ಬಾರಿ ಜಿಲ್ಲೆಗೆ ಸಿಎಂ ಸಿದ್ಧರಾಮಯ್ಯಹಾಸನ ಜಿಲ್ಲೆಯಲ್ಲಿ ನೆಲೆ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕಾಂಗ್ರೆಸ್, ಮೂರು ಬಾರಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜುಲೈ 26 ರಂದು ಅರಸೀಕೆರೆಗೆ ಬಂದಿದ್ದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಕ್ಟೋಬರ್ 15 ರಂದು ಹಾಸನಾಂಬೆಯ ದರ್ಶನ ಪಡೆದಿದ್ದರು. ಡಿಸೆಂಬರ್ 6 ರಂದು ನಡೆದ ಸರ್ಕಾರಿ ಸೇವೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.