ಒಂದೇ ದಿನ 2050 ಕೇಜಿ ಚಿನ್ನ ಮಾರಾಟ!

| Published : May 10 2024, 11:49 PM IST / Updated: May 11 2024, 05:40 AM IST

ಸಾರಾಂಶ

ಅಕ್ಷಯ ತೃತೀಯಾ ದಿನವಾದ ಶುಕ್ರವಾರ ರಾಜ್ಯಾದ್ಯಂತ ಬರೋಬ್ಬರಿ ಎರಡು ಸಾವಿರ ಕೆ.ಜಿ.ಗೂ ಅಧಿಕ ಚಿನ್ನ ಮತ್ತು 1900 ಕೆ.ಜಿ.ಗೂ ಹೆಚ್ಚು ಬೆಳ್ಳಿ ಮಾರಾಟವಾಗಿದ್ದು, ಸಾವಿರ ಕೋಟಿಗಿಂತ ಹೆಚ್ಚು ವಹಿವಾಟು ಆಗಿದೆ.

  ಬೆಂಗಳೂರು :  ಅಕ್ಷಯ ತೃತೀಯಾ ದಿನವಾದ ಶುಕ್ರವಾರ ರಾಜ್ಯಾದ್ಯಂತ ಬರೋಬ್ಬರಿ ಎರಡು ಸಾವಿರ ಕೆ.ಜಿ.ಗೂ ಅಧಿಕ ಚಿನ್ನ ಮತ್ತು 1900 ಕೆ.ಜಿ.ಗೂ ಹೆಚ್ಚು ಬೆಳ್ಳಿ ಮಾರಾಟವಾಗಿದ್ದು, ಸಾವಿರ ಕೋಟಿಗಿಂತ ಹೆಚ್ಚು ವಹಿವಾಟು ಆಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.18ರಷ್ಟು ಹೆಚ್ಚುವರಿ ವ್ಯಾಪಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ತಿಳಿಸಿದೆ.

ರಾಜ್ಯಾದ್ಯಂತ ಈ ಬಾರಿಯ ಅಕ್ಷಯ ತೃತೀಯಾದಲ್ಲಿ 2050 ಕೆ.ಜಿ.ಗೂ ಅಧಿಕ ಚಿನ್ನ ಹಾಗೂ 1900 ಕೆ.ಜಿ.ಗೂ ಹೆಚ್ಚು ಬೆಳ್ಳಿ ಮಾರಾಟವಾಗಿದೆ. ಮಂಗಳಕರವಾದ ಶುಕ್ರವಾರವೇ ಅಕ್ಷಯ ತೃತೀಯಾ ಬಂದಿರುವ ಹಿನ್ನೆಲೆಯಲ್ಲಿ ಚಿನ್ನಾಭರಣಗಳ ಖರೀದಿ ಸಂಭ್ರಮ ಜೋರಾಗಿಯೇ ನಡೆದಿದೆ.

ಬೆಂಗಳೂರು, ದಾವಣಗೆರೆ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಆಭರಣ ಮಳಿಗೆಗಳ ಮುಂದೆ ಚಿನ್ನಾಭರಣ ಖರೀದಿಗಾಗಿ ಜನಸಾಗರವೇ ನೆರೆದಿತ್ತು. ದೊಡ್ಡ ಮತ್ತು ಸಣ್ಣ ಮಳಿಗೆಗಳು ಎಂಬ ಭೇದವಿಲ್ಲದೆ ಎಲ್ಲ ಆಭರಣಗಳ ಅಂಗಡಿಗಳ ಮುಂದೆಯೂ ನಿರೀಕ್ಷೆಗೂ ಮೀರಿ ಗ್ರಾಹಕರು ಆಭರಣ ಖರೀದಿಯಲ್ಲಿ ತೊಡಗಿದ್ದರು.

ಶುಕ್ರವಾರ ಬೆಳಗ್ಗೆಯಿಂದಲೇ ಆಭರಣ ಮಳಿಗೆಗಳನ್ನು ತೆರೆಯಲಾಗಿತ್ತು. ಕೆಲ ಮಳಿಗೆಗಳು ರಾತ್ರಿ 10-11 ಗಂಟೆವರೆಗೆ ವಹಿವಾಟು ನಡೆಸಿದವು.

ಚಿನ್ನದ ಕಾಯಿನ್‌ ಖರೀದಿ ಜೋರು:

ಅಕ್ಷಯ ತೃತೀಯಕ್ಕೆ ಚಿನ್ನಾಭರಣಗಳ ಖರೀದಿಗಿಂತ ಹೂಡಿಕೆ ಸಲುವಾಗಿ `ಗೋಲ್ಡ್ ಕಾಯಿನ್ಗ ಳ ಖರೀದಿ ಹೆಚ್ಚಾಗಿತ್ತು. 1 ರಿಂದ 100 ಗ್ರಾಂವರೆಗೂ ಕಾಯಿನ್‍ಗಳು ಲಭ್ಯವಿದ್ದು, ಹಲವರು ಖರೀದಿಸಿದರು.

ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ

ಅಕ್ಷಯ ತೃತೀಯ ದಿನವೇ ಪ್ರತಿ ಗ್ರಾಂ ಚಿನ್ನದ ಬೆಲೆ 100 ರು. ಏರಿಕೆ ಆಗಿದೆ. ಇದೀಗ ಗ್ರಾಮ್‌ಗೆ 6,700 ರು.ಇದೆ. ಬೆಳ್ಳಿ ಗ್ರಾಮ್‌ಗೆ 82 ರು. ಇದ್ದು, ಇದರ ದರವೂ ಜಾಸ್ತಿಯಾಗಿದೆ. ಕಳೆದ ವರ್ಷಕ್ಕಿಂತ ವಹಿವಾಟು ಕಡಿಮೆ ಆಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆದಿಲ್ಲ. ಚುನಾವಣೆ ನಂತರ ಚಿನ್ನಾಭರಣ ದರ ಕಡಿಮೆ ಆಗಬಹುದು, ಆಗ ಖರೀದಿ ಮಾಡೋಣ ಎಂಬ ನಿರೀಕ್ಷೆಯಲ್ಲಿ ಗ್ರಾಹಕರು ಇದ್ದಿರಬಹುದು.

- ಶ್ರೀಕಾಂತ್‌ ಕರಿ, ಅಧ್ಯಕ್ಷ, ಕರ್ನಾಟಕ ಸ್ಟೇಟ್‌ ಜ್ಯುವೆಲ್ಲರಿ ಫೆಡರೇಷನ್‌

  ಶೇ.18ರಷ್ಟು ವಹಿವಾಟು ಹೆಚ್ಚಳ

ಕಳೆದ ವರ್ಷಕ್ಕಿಂತ ಚಿನ್ನಾಭರಣ ಮಾರಾಟ ಶೇ.18ರಷ್ಟು ಹೆಚ್ಚಾಗಿದೆ. ಒಂದೇ ದಿನದಲ್ಲಿ ಸಹಸ್ರ ಕೋಟಿಗೂ ಮೀರಿದ ವಹಿವಾಟು ನಡೆದಿದೆ. ಈ ಬಾರಿ ಬೆಳ್ಳಿ ಕಾಯಿನ್‍ಗಳು ಹೆಚ್ಚು ಮಾರಾಟವಾದವು. ಬೆಳ್ಳಿ ಕಾಯಿನ್‍ಗಳಲ್ಲಿ ಒಂದು ಬದಿಗೆ ಅಯೋಧ್ಯೆಯ ಬಾಲರಾಮ ಚಿತ್ರ, ಮತ್ತೊಂದು ಬದಿಗೆ ಲಕ್ಷ್ಮಿಯ ಚಿತ್ರವನ್ನು ಒಳಗೊಂಡ ಕಾಯಿನ್‍ಗಳ ಖರೀದಿ ಹೆಚ್ಚಾಗಿತ್ತು.

- ಡಾ.ಬಿ.ರಾಮಾಚಾರಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ