ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡಗು ಜಿಲ್ಲೆಯ ಬಹುಕಾಲದ ವಿದ್ಯುತ್ ಸಮಸ್ಯೆ ಸರಿಪಡಿಸಲು ವಿದ್ಯುತ್ ಉನ್ನತಿಕರಣಕ್ಕೆ ಸರ್ಕಾರದಿಂದ 208 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಕೊಡಗಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತದ ಅನುದಾನವನ್ನು ವಿದ್ಯುತ್ ಕ್ಷೇತ್ರಕ್ಕೆ ತರಲಾಗಿದೆ, ಈ ಮೂಲಕ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಹೆಜ್ಜೆ ಇಡಲಾಗುತ್ತಿದೆ ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ತಿಳಿಸಿದ್ದಾರೆ.ಪೊನ್ನಂಪೇಟೆ ಪಟ್ಟಣದ ಭಗವತಿ ನಗರದ ಬಹುವರ್ಷದ ಬೇಡಿಕೆಯಾದ ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿವಾರಿಸಲು ನೂತನವಾಗಿ ಸ್ಥಾಪಿಸಿದ ಹೆಚ್ಚುವರಿ 63 ಕೆ.ವಿ.ಯ ಪರಿವರ್ತಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂಧನ ಸಚಿವ ಕೆ.ಜೆ. ಜಾರ್ಜ್ ಕೊಡಗು ಜಿಲ್ಲೆಯವರೇ ಆಗಿದ್ದು ಅವರೊಂದಿಗೆ ಸಮಾಲೋಚಿಸಿ ಅವರ ಸಹಕಾರದೊಂದಿಗೆ ವಿದ್ಯುತ್ ಉನ್ನತಿಕರಣಕ್ಕೆ 208 ಕೋಟಿ ರು. ಅನುದಾನ ಚೆಸ್ಕಾಂಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸುಮಾರು 108 ಕೋಟಿ ರು. ವಿರಾಜಪೇಟೆ ಕ್ಷೇತ್ರದ ವ್ಯಾಪ್ತಿಗೆ ದೊರೆಯಲಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ 10 ಲಕ್ಷ ಕಿಲೋಮೀಟರ್ ವಿದ್ಯುತ್ ತಂತಿಗಳು ಹಾದುಹೋಗಿವೆ. ಪ್ರಸಕ್ತ ವರ್ಷ ಅತಿ ಹೆಚ್ಚಿನ ಬಿರುಗಾಳಿ ಮಳೆಯಿಂದ ವಿದ್ಯುತ್ ನಿರ್ವಹಣೆ ಗೆ ಹೆಚ್ಚಿನ ನಿಗಾ ವಹಿಸಲಾಯಿತು. ಪ್ರತಿದಿನ 25 ವಿದ್ಯುತ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತಿತ್ತು. ಒಂದು ಕಡೆ ವಿದ್ಯುತ್ ಕಂಬಗಳ ಸರಬರಾಜು ಹಾಗೂ ಅವುಗಳನ್ನು ಸ್ಥಳದಲ್ಲಿ ಅಳವಡಿಸುವ ಯುದ್ಧೋಪಾದಿಯಾಗಿ ಕೆಲಸ ನಿರ್ವಹಿಸಲಾಗಿದೆ ಎಂದರು.ಪ್ರಸ್ತುತ ವರ್ಷ ಮಳೆಗಾಲದಲ್ಲಿ 3800 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಹಾಗೆಯೇ 120 ಟ್ರಾನ್ಸ್ ಫಾರ್ಮರ್ ದುರಸ್ತಿಯಾಗಿವೆ ಎಂದು ಪೊನ್ನಣ್ಣ ವಿವರಿಸಿದರು.
ಜಿಲ್ಲೆಗೆ ಬಾಳೆಲೆ, ಹುದಿಕೇರಿ, ಸಿದ್ದಾಪುರ, ಮೂರ್ನಾಡು, ಕಳತ್ಮಾಡು, ಕಾಟಗೇರಿಗಳಿಗೆ ಒಟ್ಟು 6 ಸ್ಥಳಗಳಿಗೆ 66/11 ಹಾಗೂ 132/11 ಕೆ.ವಿ.ಯ ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದ್ದು ಈ ಕಾಮಗಾರಿ ಪೂರ್ಣವಾದರೆ ಮಳೆಗಾಲದಲ್ಲಿಯೂ ಸಹ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಭಾಗಮಂಡಲ, ಸಂಪಾಜೆಯಲ್ಲಿಯೂ 33 ಕೆ.ವಿ. ಹುದಿಕೇರಿಯಲ್ಲಿ 66 ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಗೋಣಿಕೊಪ್ಪ ಚೆಸ್ಕಾಂ ಎ.ಇ. ಇ ಸತೀಶ್ ಪೊನ್ನಂಪೇಟೆ ಭಗವತಿ ನಗರದ ವ್ಯಾಪ್ತಿಗೆ ಹೆಚ್ಚುವರಿ ಪರಿವರ್ತಕ ಬೇಕೆಂಬ ಶಾಸಕರ ಸೂಚನೆಯಂತೆ ತ್ವರಿತವಾಗಿ 63 ಕೆ.ವಿ. ಪರಿವರ್ತಕ ಸ್ಥಾಪಿಸಿ ವೋಲ್ಟೇಜ್ ಸಮಸ್ಯೆ ಬಗೆಹರಿಸಲಾಗಿದೆ ಎಂದರು.ಚೆಸ್ಕಾಂ ಇಲಾಖೆಗೆ 208 ಕೋಟಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಗೋಣಿಕೊಪ್ಪ ವಿದ್ಯುತ್ ಉಪ ವಿಭಾಗಕ್ಕೆ 51 ಕೋಟಿ ರು. ಮಂಜೂರಾಗಿದ್ದು, ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ, ಪ್ರಕ್ರಿಯೆ ಮುಗಿದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಬಾಳೆಲೆ, ಹುದಿಕೇರಿ ಗಳಲ್ಲಿ ತಲಾ 66 ಕೆ..ವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಟೆಂಡರ್ ಆಗಿದೆ. ಶೀಘ್ರ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ಭಗವತಿ ನಗರದ ನಿವಾಸಿಗಳ ಪರವಾಗಿ ಶಾಸಕ ಪೊನ್ನಣ್ಣ ಅವರನ್ನು ಮಾಜಿ ಪ್ರಾಂಶುಪಾಲ ಬಾಚೀರ ಕಾರ್ಯಪ್ಪ ಗೌರವಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಗೋಪಿ, ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಹುದಿಕೇರಿ ಗ್ರಾ. ಪಂ.ಮಾಜಿ ಅಧ್ಯಕ್ಷೆ ಮತ್ರಂಡ ರೇಖಾ, ಪ್ರಮುಖರಾದ ಮೂಕಲೆರ ಕುಶಾಲಪ್ಪ, ಎರ್ಮು ಹಾಜಿ, ಸಾಧಲಿ, ಬಾಜಿ, ಅಹಮದ್, ಬಾಬು, ಸಾಜಿ ಅಚ್ಚುತನ್, ಚಂಗುಲಂಡ ಸೂರಜ್, ಮತ್ರಂಡ ಸುಕು, ಮಾಜಿ ಪ್ರಾಂಶುಪಾಲರಾದ ಬಾಚೀರ ಕಾರ್ಯಪ್ಪ, ಚೇರಂಡ ಮೋಹನ್ ಮತ್ತಿತರರು ಇದ್ದರು.