ಸಾರಾಂಶ
ಚಿಕ್ಕಬಳ್ಳಾಪುರದ ಸಿಎಸ್ಐ ಚರ್ಚ್ ಆವರಣದಲ್ಲಿ ವಿಶ್ವ ವಿಕಲಚೇತನರ ದಿನ ಆಯೋಜನೆ । ಅಂದು ವಿಕಲಚೇತನ ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರವಿಕಲಚೇತನರು ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು ಎಂದು ಕರ್ನಾಟಕ ವಿಕಲಚೇತನರ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ. ಕಿರಣ್ ನಾಯಕ್ ಹೇಳಿದರು.
ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ಸಂಸ್ಥೆಯ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಲಚೇತನರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರಜ್ಞಾನ, ಮನೊರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು. ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಾಗಿರಿಸಲಾಗಿದೆ. ಅಂದು ಜಗತ್ತಿನೆಲ್ಲೆಡೆ ವಿಶ್ವ ವಿಕಲಚೇತನರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.ವಿಕಲಚೇತನರಾದ ನಮಗೂ ಇತರ ಮನುಷ್ಯರಿಗಿರುವಂತೆ ರಕ್ತ,ಮಾಂಸ, ಹೃದಯ ಸೇರಿದಂತೆ ಎಲ್ಲವೂ ಇರುತ್ತದೆ. ನಮಗೂ ಕಾಯಿಲೆಗಳು ಬರುತ್ತವೆ ಎಂಬುದನ್ನು ಎಲ್ಲರೂ ಅರಿಯ ಬೇಕಿದೆ. ಅದಕ್ಕಾಗಿಯೇ ಡಿಸೆಂಬರ್ 20 ರಂದು ಚಿಕ್ಕಬಳ್ಳಾಪುರ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದ ಸಿಎಸ್ಐ ಚರ್ಚ್ ಆವರಣದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಮ್ಮಿಕೊಂಡಿದ್ದು, ಅಂದು ಎಲ್ಲಾ ವಿಕಲಚೇತನರಿಗೆ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿ ಕೊಂಡಿದ್ದೇವೆ. ಹಾಗೆಯೇ ಅಂದು 18 ಜೋಡಿ ವಿಕಲಚೇತನ ನೂತನ ದಂಪತಿಗಳ ಸನ್ಮಾನ ಸಮಾರಂಭ, ಎಸ್ಎಸ್ಎಲ್ಸಿ, ಪಿ.ಯು.ಸಿ. ಮತ್ತು ಡಿಗ್ರಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿಕಲಚೇತನರಿಗೆ ಸನ್ಮಾನ, ವಿಕಲಚೇತನರ ಮಹಿಳೆಯರ ಜನ ಜಾಗೃತಿ , ವಿಕಲಚೇತನರಿಗೆ ಸಾಧನ-ಸಲಕರಣೆಗಳ ನೋಂದಣಿ ಮತ್ತು ವಿತರಣೆ , ಕೆವಿಎಸ್ ನ ಡಿಪಿಓ ಪ್ರತಿನಿಧಿಗಳಿಗೆ ಸನ್ಮಾನ, ಮೆದುಳುವಾತ (ಸಿ.ಪಿ) ವಿಶೇಷಚೇತನರ ಮಕ್ಕಳಿಗೆ ಪೌಷ್ಠಿಕ ಆಹಾರ ಕಿಟ್ ವಿತರಣೆ ಮತ್ತು ಕೆ.ವಿ.ಎಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ವಿಕಲಚೇತನರ ಸಂಸ್ಥೆ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ವಿಕಲಚೇತನ ವ್ಯಕ್ತಿಗಳು ಮತ್ತು ಅವರ ಸ್ನೇಹಿತರು ಸೇರಿ ವಿಕಲಚೇತನರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾವಲಂಬನೆಯ ಜೀವನ ನಿರ್ವಹಿಸಲು ಸಾದ್ಯವಿದೆಯೆಂದು ತೋರಿಸುವ ನಿಟ್ಟಿನಲ್ಲಿ 2012 ರಲ್ಲಿ ಈ ಸಂಸ್ಥೆಯನ್ನು ಆರಂಭಿಸಿದರು. ಸಂಸ್ಥೆಯು ಸಹಭಾಗಿಗಳ ಸಮರ್ಥನೆ ಮತ್ತು ಸಬಲೀಕರಣದ ಮೂಲಕ ಅವಕಾಶಗಳನ್ನು ದೊರಕಿಸಿಕೊಡುವುದು. ಸಮನ್ವಯಕ್ಕೆ ಉತ್ತೇಜನ, ನ್ಯಾಯಬದ್ದ ಹಕ್ಕು ಮತ್ತು ಸೌಲಭ್ಯಗಳನ್ನು ಹೊಂದಿರುವ ಉದ್ದೇಶಗಳನ್ನು ಈಡೇರಿಸಲು ವೈದ್ಯಕೀಯ, ಶಿಕ್ಷಣ, ತರಬೇತಿ ಮತ್ತು ಉದ್ಯೋಗ, ಜನ ಸಂಘಟನೆ ಮತ್ತು ವಕಾಲತ್ತು ನಿರಂತರವಾಗಿ ಸಂಪರ್ಕ ಕ್ರೂಡೀಕರಣ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕ್ಷೇತ್ರದ ಆಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಕಲಚೇತನರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು, ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.ವಿಕಲಚೇತರ ಅಂಗನ್ಯೂನ್ಯತೆ ಎತ್ತಿಹಿಡಿಯುವ ಬದಲು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದರಲ್ಲದೇ, ಕಾರ್ಯಕ್ರಮಕ್ಕೆ ಜಿಲ್ಲೆಯ ವಿಕಲಚೇತನರೆಲ್ಲರೂ ಬಂದು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿಕಲಚೇತನರ ಸಂಸ್ಥೆಯ ಅಧ್ಯಕ್ಷ ಕೆ.ಜಿ.ಸುಭ್ರಮಣಿ ,ಉಪಾಧ್ಯಕ್ಷ ಜಿ.ವಿ.ವೆಂಕಟಶಿವಪ್ಪ,ಪದಾಧಿಕಾರಿಗಳಾದ ಮಮತ, ಬಿ.ಎನ್.ಕೃಷ್ಣಪ್ಪ, ಕೆ.ಎಂ.ಚಂದ್ರಕಲಾ,ವಿಜಯಕುಮಾರಿ,ಗೌಸ್ ಪಾಷ ಮತ್ತಿತರರು ಇದ್ದರು.---ಸಿಕೆಬಿ-1 ಸುದ್ದಿ ಗೋಷ್ಟಿಯಲ್ಲಿ ಕರ್ನಾಟಕ ವಿಕಲಚೇತನರ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ. ಕಿರಣ್ ನಾಯಕ್ ಮಾತನಾಡಿದರು.