ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ೯೬,೨೮೦ ಚದರಡಿ ಅಳತೆಯ ೨೧.೩೨ ಕೋಟಿ ರು. ಮೌಲ್ಯದ ೩೫ ಆಸ್ತಿಗಳನ್ನು ವಕ್ಫ್‌ಬೋರ್ಡ್‌ಗೆ ಖಾತೆ ಮಾಡಿ ರಾಜ್ಯಸರ್ಕಾರ ೨೦೧೯ರಲ್ಲಿ ಅಧಿಸೂಚನೆ ಹೊರಡಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ನಗರದ ಗುತ್ತಲು, ವಿವಿ ಬಡಾವಣೆ, ಗಾಂಧಿನಗರ, ಹಾಲಹಳ್ಳಿ, ಮಾರುತಿನಗರ, ಇಂದಿರಾ ಕಾಲೋನಿ, ತಾಲೂಕಿನ ಹಲ್ಲೇಗೆರೆ, ಬೇವಿನಹಳ್ಳಿ, ಹಳುವಾಡಿ, ಕಮ್ಮನಾಯಕನಹಳಿ, ಟಿ.ಮಲ್ಲೀಗೆರೆ, ಬೇವಿನಹಳ್ಳಿ, ಕೊತ್ತತ್ತಿ, ತಗ್ಗಹಳ್ಳಿ ಮುಂತಾದ ಕಡೆಗಳಲ್ಲಿ ಮುಸ್ಲಿಂ ಜಮಾತ್, ಮದರಸ, ಮಸೀದಿ, ಶಾದಿ ಮಹಲ್, ಅರೇಬಿಕ್ ಮದರಸ, ಖಬರಸ್ತಾನ್, ದರ್ಗಾ ಹಾಗೂ ಇನ್ನಿತರ ಉದ್ದೇಶಗಳಿಗೆ ಮೀಸಲಿರಿಸಿ ವಕ್ಫ್‌ಬೋರ್ಡ್ ಸೇರಿದ ಆಸ್ತಿ ಎಂದು ಘೋಷಣೆ ಮಾಡಲಾಗಿದೆ.ವಿವಿಧ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ ಪಡೆದ ಜಮೀನನ್ನು ವಕ್ಫ್ ಹೆಸರಿಗೆ ಖಾತೆ ಮಾಡಿದಂತೆ ದಾಖಲಿಸಲಾಗಿದೆ. ಜಮೀನುಗಳ ಸರ್ವೆ ನಂಬರ್, ಖಾತಾ ನಂಬರ್‌ಗಳನ್ನು ನಮೂದಿಸಲಾಗಿದ್ದು ಆಸ್ತಿಯ ಮೌಲ್ಯವನ್ನೂ ದಾಖಲಿಸಿರುವುದು ಕಂಡುಬಂದಿದೆ. ಬಿಜೆಪಿ ಪಕ್ಷದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ೧೧ ಡಿಸೆಂಬರ್ ೨೦೧೯ ಅಧಿಸೂಚನೆ ಹೊರಡಿಸಿರುವುದು ವಿಶೇಷವಾಗಿದೆ.
ಈ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ದೃಢೀಕರಿಸಿ ಜಿಲ್ಲಾಧಿಕಾರಿ, ಸರ್ವೆ ಇಲಾಖೆ ಉಪ ಆಯುಕ್ತರು ಅವರು ವಕ್ಫ್‌ಬೋರ್ಡ್‌ಗೆ ಬರೆದಿರುವ ಪತ್ರದ ಅನುಸಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಜ್ಯ ವಕ್ಫ್‌ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಕರ್ನಾಟಕ ವಕ್ಫ್‌ಬೋರ್ಡ್ ಆಡಳಿತಾಧಿಕಾರಿ ೮.೭.೨೦೧೯ರಲ್ಲಿ ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಕಳುಹಿಸಿದ್ದರು. ಅದರಂತೆ ೧೧ ಡಿಸೆಂಬರ್ ೨೦೧೯ರಂದು ಬಿಜೆಪಿ ನೇತೃತ್ವದ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.ಜನರಲ್ಲಿ ಹೊಸ ಆತಂಕ ಶುರು:
ವಕ್ಫ್ ಆಸ್ತಿ ರಾದ್ಧಾಂತ ಜಿಲ್ಲೆಯೊಳಗೆ ಹೊಸ ಗೊಂದಲ, ಆತಂಕವನ್ನು ಸೃಷ್ಟಿಸುತ್ತಿರುವುದರಿಂದ ಗೆಜೆಟ್ ನೋಟಿಫಿಕೇಷನ್ ಹೊರಡಿಸಿರುವ ಆಸ್ತಿಗಳಲ್ಲೂ ಸರ್ಕಾರಿ ಜಮೀನು, ಶಾಲೆ, ದೇಗುಲ, ರೈತರ ಜಮೀನು, ಕೆರೆ-ಕಟ್ಟೆ ಸೇರಿದಂತೆ ಇನ್ನಿತರ ಸರ್ಕಾರಿ ಆಸ್ತಿಗಳು ಸೇರಿವೆಯೇ ಎಂಬ ಅನುಮಾನಗಳು ಶುರುವಾಗಿವೆ.ವಕ್ಫ್‌ಗೆ ಘೋಷಣೆಯಾಗಿರುವ ಆಸ್ತಿಗಳ ಅಕ್ಕಪಕ್ಕ ಚಕ್ಕುಬಂದಿಗಳಲ್ಲಿ ಸರ್ಕಾರಿ ಜಾಗ, ಸರ್ಕಾರಿ ಶಾಲೆ, ಹಿಂದೂ ದೇವಸ್ಥಾನ, ರೈತರ ಜಮೀನುಗಳಿರುವುದು ಕಂಡುಬಂದಿದೆ. ಈ ಆಸ್ತಿಗಳು ನ್ಯಾಯಬದ್ಧವಾಗಿ ವಕ್ಫ್‌ಗೆ ಸೇರಿದ ಆಸ್ತಿಗಳೇ ಎಂಬ ಬಗ್ಗೆ ಸಂಬಂಧಿಸಿದ ರೈತರು, ಸರ್ಕಾರಿ ಸಂಸ್ಥೆಗಳವರು ಪರಿಶೀಲನೆ ಮಾಡಿಕೊಳ್ಳುವುದು ಅಗತ್ಯವಾಗಿದೆ.
ಕೊತ್ತತ್ತಿ ರೈತನ ಜಮೀನು ಅಧಿಸೂಚನೆ:ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೊತ್ತತ್ತಿ ಗ್ರಾಮದ ಸರ್ವೆ ನಂಬರ್ ೨೩೭ ರಲ್ಲಿ ರೈತರೊಬ್ಬರಿಗೆ ಸೇರಿದ ಜಮೀನು ವಕ್ಫ್‌ಬೋರ್ಡ್‌ಗೆ ಖಾತೆಯಾಗಿದ್ದು, ಈ ಆಸ್ತಿಯೂ ೨೦೧೯ರಲ್ಲಿ ಹೊರಡಿಸಿರುವ ಗೆಜೆಟ್ ಅಧಿಸೂಚನೆಯೊಳಗೆ ಸೇರಿದೆ. ಹಾಗಾಗಿ ಈ ಆಸ್ತಿಗಳ ಮೂಲದ ಬಗ್ಗೆ ಪರಿಶೀಲಿಸಿಕೊಳ್ಳಬೇಕಾದ ಅನಿವಾರ್ಯತೆ ಆಸ್ತಿ ಮಾಲೀಕರಿಗೆ ಎದುರಾಗಿದೆ.
ಜಿಲ್ಲೆಯೊಳಗೆ ದಿನಕ್ಕೊಂದು ಕಡೆಗಳಲ್ಲಿ ವಕ್ಫ್ ಆಸ್ತಿ ಎಂಬುದಾಗಿ ಆರ್‌ಟಿಸಿಯಲ್ಲಿ ದಿಢೀರ್ ಪ್ರತ್ಯಕ್ಷವಾಗುತ್ತಿರುವುದರಿಂದ ರೈತರು ಆಸ್ತಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಜಿಲ್ಲಾಡಳಿತ ಕೂಡ ಈ ಸಮಸ್ಯೆಗೆ ಪರಿಹಾರ ದೊರಕಿಸಲಾಗದೆ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ. ಮಹದೇವಪುರ ದೇವಸ್ಥಾನದ ಜಾಗವನ್ನು ವಕ್ಫ್‌ನಿಂದ ಹಿಂಪಡೆದದ್ದನ್ನು ಬಿಟ್ಟರೆ ಉಳಿದವು ಸಮಸ್ಯೆಗಳಾಗಿಯೇ ಉಳಿದುಕೊಂಡಿವೆ. ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂಬುದನ್ನು ತೆಗೆದುಹಾಕುವುದಕ್ಕೆ ಏನು ಮಾಡಬೇಕೆಂಬುದು ತಿಳಿಯದೆ ರೈತರು, ದೇಗುಲದ ಆಡಳಿತ ಮಂಡಳಿಯವರು, ಸರ್ಕಾರಿ ಶಾಲೆಯವರು ದಿಕ್ಕು ತೋಚದಂತಾಗಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ಅಧಿಸೂಚನೆ:
ವಕ್ಫ್ ಆಸ್ತಿ ವಿಚಾರದಲ್ಲಿ ವಿಪಕ್ಷ ನಾಯಕರೆಲ್ಲರೂ ಕಾಂಗ್ರೆಸ್ ಸರ್ಕಾರದ ಮೇಲೆ ತೀವ್ರ ವಾಕ್‌ಪ್ರಹಾರ ನಡೆಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಮಂಡ್ಯ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ೩೫ ಆಸ್ತಿಗಳು ವಕ್ಫ್ ಆಸ್ತಿಯಾಗಿ ಘೋಷಣೆಯಾಗಿ ಅಧಿಸೂಚನೆಯಾಗಿರುವುದು ಬಿಜೆಪಿಯವರಿಗೂ ಈಗ ಮುಜುಗರಕ್ಕೊಳಗಾಗುವಂತೆ ಮಾಡಿದೆ.ಮೈಷುಗರ್ ಆಸ್ತಿ ಬಗ್ಗೆಯೂ ಆತಂಕ:
ಕರ್ನಾಟಕ ಸರ್ಕಾರ ಹೊರಡಿಸಿರುವ ರಾಜ್ಯಪತ್ರದಲ್ಲಿ ಷುಗರ್‌ಟೌನ್‌ನಲ್ಲಿ ೨೭೦೦ ಚದರಡಿಯ ಮೂರು ಆಸ್ತಿ ವಕ್ಫ್ ಹೆಸರಿಗೆ ಖಾತೆಯಾಗಿವೆ. ಇದರಲ್ಲಿ ಮೈಷುಗರ್ ಕಾರ್ಖಾನೆಗೆ ಸೇರಿದ ಆಸ್ತಿ ಖಾತೆಯಾಗಿರುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆ ಅಧಿಕಾರಿಗಳು ಸಮರ್ಪಕವಾಗಿ ಕಂಪನಿಗೆ ಸೇರಿದ ಆಸ್ತಿಯನ್ನು ಸಂರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲರಾಗಿರುವುದರಿಂದ ಕಾರ್ಖಾನೆಯ ಎಷ್ಟೋ ಆಸ್ತಿಗಳು ಕೈಬಿಟ್ಟುಹೋಗಿವೆ. ಅಧಿಸೂಚನೆಯಲ್ಲಿರುವ ಆಸ್ತಿಗಳ ಕುರಿತಂತೆ ಅಧಿಕಾರಿಗಳು ಕೂಡಲೇ ಪರಿಶೀಲಿಸಿಕೊಂಡು ಒಮ್ಮೆ ವಕ್ಫ್‌ಬೋರ್ಡ್‌ಗೆ ಅಕ್ರಮವಾಗಿ ಖಾತೆಯಾಗಿದ್ದರೆ ಅದನ್ನು ಜಿಲ್ಲಾಧಿಕಾರಿಗಳ ಮೂಲಕ ಬಿಡಿಸಿಕೊಳ್ಳುವುದಕ್ಕೆ ಕ್ರಮ ವಹಿಸುವಂತೆ ಅನೇಕರು ಒತ್ತಾಯಿಸಿದ್ದಾರೆ.)
;Resize=(128,128))
;Resize=(128,128))
;Resize=(128,128))
;Resize=(128,128))