ಸಾರಾಂಶ
ಯಾದಗಿರಿ: ತಾಲೂಕಿನ ಹೆಡಗಿಮದ್ರಾ ಶ್ರೀ ಶಾಂತಶಿವಯೋಗೀಶ್ವರ ಜಾತ್ರೆ ಫೆ.21ರಂದು ನಡೆಯಲಿದ್ದು, ಅಂದು ಸಂಜೆ 7 ಗಂಟೆಗೆ ಶ್ರೀಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ ನೇತೃತ್ವದಲ್ಲಿ ಭವ್ಯ ರಥೋತ್ಸವ ಜರುಗಲಿದೆ ಎಂದು ಶ್ರೀಮಠದ ಭಕ್ತರಾದ ರಾಚನಗೌಡ ಮುದ್ನಾಳ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.19 ರಿಂದ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಫೆ.19ರಂದು ಶ್ರೀಮಠದ ವಿದ್ಯಾ ಸಂಸ್ಥೆಯಾದ ಎಸ್.ಎಸ್.ವಿದ್ಯಾಪೀಠದ ವಾರ್ಷಿಕೋತ್ಸವ ಕಾರ್ಯಕ್ರಮ, ಫೆ.20 ರಂದು ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಂಜೆ 4 ಗಂಟೆಗೆ ಶ್ರೀಗಳ ಗಂಗಾಸ್ನಾನ ಹೆಡಗಿಮದ್ರಾ ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ಶ್ರೀಮಠದ ಪೀಠಾಧಿಪತಿಗಳು ಹಾಗೂ ಭಕ್ತರಿಂದ ತನಾರತಿ ಮಹೋತ್ಸವ ಜರುಗಲಿದೆ, ಫೆ.21 ರಂದು ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಗ್ಗೆ 11ಕ್ಕೆ ಗುರುದೀಕ್ಷೆ ನಂತರ ಸಂಜೆ 7 ಗಂಟೆಗೆ ರಥೋತ್ಸವ ನಂತರ ಧರ್ಮ ಸಂಸ್ಕೃತಿ ಉತ್ಸವ ನಡೆಯಲಿದೆ. ನಂತರ ಖ್ಯಾತ ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮ ಮತ್ತು ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಫೆ.22ರಂದು ಬೃಹತ್ ಜಾನುವಾರು ಜಾತ್ರೆ ನಂತರ ಭಕ್ತರಿಂದ ದೇಸಿಕ್ರೀಡೆಗಳಾದ ಕೈಕುಸ್ತಿ, ಸಂಗ್ರಾಣಿ ಕಲ್ಲು ಎತ್ತುವುದು, ಉಸುಕಿನ ಚೀಲ ಎತ್ತುವುದು ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.ಫೆ.21ರಂದು ರಥೋತ್ಸವ ನಂತರ ನಡೆಯುವ ಧಾರ್ಮಿಕ ಸಾಂಸ್ಕೃತಿಕ ಉತ್ಸವ ಸಾನ್ನಿಧ್ಯವನ್ನು ರಾಯಚೂರು ಕಿಲ್ಲಾ ಬ್ರಾಹನ್ಮಠದ ಶಾಂತಮಲ್ಲ ಶಿವಾಚಾರ್ಯ ಶ್ರೀ, ದೇವಾಪುರದ ಜಡಿ ಶಾಂತಲಿಂಗೇಶ್ವರ ಶ್ರೀ, ಕಲಬುರಗಿಯ ಡಾ.ರಾಜಶೇಖರ ಶಿವಾಚಾರ್ಯ ಶ್ರೀ. ಚನದಾಪುರಿ ಹಿರೇಮಠ ಕಲಬುರ್ಗಿ, ತೊನಸನಳ್ಳಿಯ ರೇವಣಸಿದ್ಧಚರಂತೇಶ್ವರ ಶಿವಾಚಾರ್ಯ ಶ್ರೀಗಳು ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕರಾದ ಚನ್ನಾರಡ್ಡಿ ಪಾಟೀಲ ತುನ್ನೂರ, ಶರಣಗೌಡ ಕಂದಕೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ರಾಚನಗೌಡ ಮುದ್ನಾಳ ಪ್ರಾಸ್ತಾವಿಕ ಮಾತನಾಡಲಿದ್ದು, ಮುಖ್ಯ ಅತಿಥಿಗಳಾಗಿ ಮಹೇಶರಡ್ಡಿಗೌಡ ಮುದ್ನಾಳ, ನಾಗರತ್ನ ಕುಪ್ಪಿ, ಚೆನ್ನಪ್ಪಗೌಡ ಮೊಸಂಬಿ, ಬಸರಡ್ಡಿಗೌಡ ಅನಪೂರ, ಬಸ್ಸುಗೌಡ ಬಿಳ್ತಾರ, ವಿನಾಯಕ ಮಾಲಿಪಾಟೀಲ್, ರಾಮರಡ್ಡಿ ಸಾಹು ತಂಗಡಗಿ, ಚಂದ್ರಾಯಗೌಡ ಗೋಗಿ, ಭೀಮನಗೌಡ ಕ್ಯಾತನಾಳ, ಬಸವರಾಜ ಚಂಡ್ರಿಕೆ ಸೇರಿದಂತೆ ಮತ್ತಿತರರು ಆಗಮಿಸಲಿದ್ದಾರೆಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಿದ್ದುಗೌಡ ಕಾಮರಡ್ಡಿ, ಸಿದ್ರಾಮರಡ್ಡಿ ಅಣಿಬಿ, ವೀರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಮತ್ತಿತರರಿದ್ದರು.
ನಾಳೆ ಎಸ್.ಎಸ್.ವಿದ್ಯಾಪೀಠದ 6ನೇ ವಾರ್ಷಿಕೋತ್ಸವಯಾದಗಿರಿ: ಫೆ.19 ರಂದು ಸಂಜೆ 5 ಗಂಟೆಗೆ ಶ್ರೀಮಠದ ವಿದ್ಯಾಸಂಸ್ಥೆಯಾದ ಎಸ್.ಎಸ್.ವಿದ್ಯಾಪೀಠದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಸಾನ್ನಿಧ್ಯವನ್ನು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಸ್ವಾಮೀಜಿ ವಹಿಸಲಿದ್ದು, ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಲಕ್ಷ್ಮೀ ಅರುಣಾ ರೆಡ್ಡಿ ಉದ್ಘಾಟಿಸಲಿದ್ದಾರೆ ಎಂದು ರಾಚನಗೌಡ ಮುದ್ನಾಳ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ, ಮಹೇಶರಡ್ಡಿಗೌಡ ಮುದ್ನಾಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಶ್ರೀ ವೇ.ಮೂ ಮಹಂತಯ್ಯ ಸ್ವಾಮಿ ಹಿರೇಮಠ ಹೆಡಗಿಮದ್ರಾ, ಖ್ಯಾತ ವೈದ್ಯರಾದ ಡಾ.ಸಿ.ಎಮ್.ಪಾಟೀಲ್, ಬಸವರಾಜ ಪಾಟೀಲ್ ಬಿಳ್ಳಾರ್, ಮೆಹಫೂಜ್ ಆಲಿಖಾನ್, ಶೇಖರಗೌಡ ದಮ್ಮೂರು, ಜಿಲ್ಲಾ ನ್ಯಾಯವಾದಿಗಳ ಸಂಘ ಯಾದಗಿರಿ ಜಿಲ್ಲಾಧ್ಯಕ್ಷರಾದ ಸಿ.ಎಸ್.ಮಾಲಿ ಪಾಟೀಲ್, ಯಾದಗಿರಿ ಆರ್ಯಭಟ್ಟ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಸುಧಾಕರ ರೆಡ್ಡಿ ಅನಪೂರ್ಭಾ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.