ಸಾರಾಂಶ
ಮಲೇಬೆನ್ನೂರು ಪಟ್ಟಣದ ಜಾಮಿಯಾ ಮಸೀದಿ ಬಳಿ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪೂರಿ ಸೇವಿಸಿ 21 ಮಂದಿ ಮಕ್ಕಳು ಅಸ್ವಸ್ಥರಾದ ಘಟನೆ ಮಲೇಬೆನ್ನೂರಲ್ಲಿ ಜರುಗಿದೆ.
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಪಟ್ಟಣದ ಜಾಮಿಯಾ ಮಸೀದಿ ಬಳಿ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪೂರಿ ಸೇವಿಸಿ 21 ಮಂದಿ ಮಕ್ಕಳು ಅಸ್ವಸ್ಥರಾದ ಘಟನೆ ಮಲೇಬೆನ್ನೂರಲ್ಲಿ ಜರುಗಿದೆ.
ಕಳೆದ ಬುಧವಾರ ಸಂಜೆ ಪಟ್ಟಣದ ಮುಖ್ಯ ಮಸೀದಿ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಪಾನಿ ಪೂರಿ ಸೇವಿಸಿದ್ದ ಮಕ್ಕಳಲ್ಲಿ ಗುರುವಾರ ಸಂಜೆ ವಾಂತಿ ಸಹಿತ ಬೇಧಿ ಪ್ರಕರಣ ಕಂಡು ಬಂದಿದೆ.
ಗಾಬರಿಯಾದ ಪೋಷಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಕೆಲವು ಮಕ್ಕಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಒಂದು ಮಗು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಗಂಭೀರವಾಗಿದೆ ಎನ್ನಲಾಗಿದೆ.
ರಾತ್ರಿ ಎಲ್ಲಾ ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಕೆಲವರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರವೂ ಒಂದು ಮಗು ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ಕಾಯಿಸಿ ಆರಿಸಿದ ನೀರು ಕುಡಿಯಲು ಸಲಹೆ ನೀಡಲಾಗಿದೆ ಎಂದು ವ್ಶೆದ್ಯೆ ಡಾ.ಲಕ್ಷ್ಮಿ ತಿಳಿಸಿದರು.
ಮಕ್ಕಳು ಪಾನಿಪೂರಿ ಸೇವಿಸಿದ ಎರಡು ಬೀದಿಯ ಎಲ್ಲಾ ಮನೆಗಳ ಸಮೀಕ್ಷೆ ನಡೆಸಲು ವೈದ್ಯರು ಸೂಚಿಸಿದ್ದು, ಆಶಾ ಕಾರ್ಯಕರ್ತರು ಸಮೀಕ್ಷೆ ಆರಂಭಿಸಿದ್ದಾರೆ.
ಆಸ್ಪತ್ರೆಗೆ ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಡಾ.ಖಾದರ್, ಆರೋಗ್ಯ ನಿರೀಕ್ಷಕ ಉಮ್ಮಣ್ಣ, ನಾಗರಾಜ್ ಇತರರು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ಮಲೇಬೆನ್ನೂರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಜೊತೆಗೆ ವೆಂಟಿಲೇಟರ್ ವ್ಯವಸ್ಥೆ ಇಲ್ಲದೇ ದಾವಣಗೆರೆಗೆ ತೆರಳುವ ಅನಿವಾರ್ಯತೆ ಒದಗಿದೆ. ದೊಡ್ಡ ಆಸ್ಪತ್ರೆಯಲ್ಲಿ ಸರ್ಕಾರ ವೆಂಟಿಲೇಟರ್ ಒದಗಿಸುವ ಅವಶ್ಯಕತೆಯಿದೆ ಎಂದು ಮುಖಂಡ ಆಯೂಬ್‌ಖಾನ್ ಒತ್ತಾಯಿಸಿದರು.