ಸಾರಾಂಶ
ಶಿರವಾಸೆ ಹಾಗೂ ಮೇಲಿನಹುಲುವತ್ತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಜನಸಂಪರ್ಕ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಈ ಕ್ಷೇತ್ರದ ಜಾಗರ ಹೋಬಳಿಯೊಂದಕ್ಕೆ ₹21 ಕೋಟಿ ಅನುದಾನ ಒದಗಿಸಿ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ ಎಂದು ಚಿಕ್ಕಮಗಳೂರು ಕ್ಷೇತ್ರ ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಜಾಗರ ಹೋಬಳಿ ಶಿರವಾಸೆ ಹಾಗೂ ಮೇಲಿನ ಹುಲುವತ್ತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು. ಕಸಬಾ, ಲಕ್ಯಾ, ಸಖರಾಯಪಟ್ಟಣ, ದೇವನೂರು ಕ್ಷೇತ್ರಕ್ಕೆ ₹20 ಕೋಟಿ ಅನುದಾನವನ್ನು ಒದಗಿಸಲಾಗಿದೆ. ಜಾಗರ ಹೋಬಳಿಯೊಂದಕ್ಕೆ ಆದರೆ, ಒಟ್ಟು ₹21 ಕೋಟಿ ಗಳಲ್ಲಿ ₹13 ಕೋಟಿ ಗಳನ್ನು ವಿಸ್ತೀರ್ಣ ದೊಡ್ಡದಾಗಿರುವ ಶಿರವಾಸೆ ಗ್ರಾ.ಪಂ.ಗೆ ನೀಡಲಾಗಿದ್ದು, ಕಡಿಮೆ ವಿಸ್ತೀರ್ಣವಿರುವ ಮೇಲಿನ ಹುಲುವತ್ತಿಗೂ ಉಳಿದ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಹೆಚ್ಚಿನ ಅವಶ್ಯಕತೆ ಇರುವಲ್ಲಿಗೆ ಪ್ರಥಮ ಆದ್ಯತೆ ನೀಡಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.ಜಾಗರದಿಂದ ನೆತ್ತಿ ಚೌಕದವರೆಗೆ ₹5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕೆಲವೇ ದಿನಗಳಲ್ಲಿ ಹೊಂಡದ ಕಾನ್‌ವರೆಗೆ ₹5 ಕೋಟಿ ವೆಚ್ಚದ ಪಿಡಬ್ಲ್ಯುಡಿ ರಸ್ತೆ ನಿರ್ಮಾಣವಾಗಲಿದೆ. ಹೊನ್ನಾಳದಿಂದ ಗಾಳಿ ಗುಡ್ಡದವರೆಗಿನ ₹ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇಲ್ಲಿಂದ ಮುಂದುವರಿದ ಭಾಗಕ್ಕೂ ಒಂದೊಂದು ಕೋಟಿ ರು.ನ ಎರಡು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
₹25 ಲಕ್ಷದ ಶಿರವಾಸೆ ಕಾಂಕ್ರೀಟ್ ರಸ್ತೆ ಈಗಾಗಲೇ ಉದ್ಘಾಟಿಸಲಾಗಿದೆ. ಮೇಲಿನ ಹುಲುವತ್ತಿ ಗ್ರಾಪಂ ವ್ಯಾಪ್ತಿಯ ₹40 ಲಕ್ಷ ವೆಚ್ಚದ ಸೇತುವೆ ಉದ್ಘಾಟಿಸಲಾಗಿದೆ. ಹೊನ್ನಾಳದಿಂದ ಸಿದ್ದರಬಾನುವರೆಗಿನ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು 2 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇವಲ್ಲದೆ ಸಣ್ಣ ಸಣ್ಣ ರಸ್ತೆ ಕಾಮಗಾರಿಗಳನ್ನು ಕೂಡ ಕೈಗೆತ್ತಿಕೊಳ್ಳಲಾಗಿದೆ. ಬಿಲ್ಲವ ಸಮುದಾಯದ ಸಮುದಾಯ ಭವನ ಮುಕ್ತಾಯಗೊಳಿಸಲು ₹10 ಲಕ್ಷ ಗಳನ್ನು ಒದಗಿಸಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಆಗ ಬಾರದು. ಹಾಗಾಗಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆತಂದು ಸಮಸ್ಯೆ ಆಲಿಸಲು ಕೈಜೋಡಿಸಲಾಗಿದೆ. ಇಲ್ಲಿ ಗ್ರಾಮಸ್ಥರು ನೀಡುವ ಅರ್ಜಿಗಳನ್ನು ಪಡೆದು ಆ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಯವರು ಬಗೆಹರಿಸಬೇಕು. ಆ ಸಮಸ್ಯೆಗಳನ್ನು ತಹಸೀಲ್ದಾರ್ ಹಾಗೂ ತಾಪಂ ಇಒಗಳು ತಿಂಗಳಿಗೊಮ್ಮೆ ಸಮಸ್ಯೆಗಳ ಸ್ಥಿತಿಗತಿ ಬಗ್ಗೆ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಸಭೆಯಲ್ಲಿ ಮೊದಲು ಪ್ರಸ್ತಾಪಿಸಿದ ಸಮಸ್ಯೆಗಳು ಪುನರಾವರ್ತನೆಯಾಗಬಾರದು. ಇಲ್ಲಿ ನಡೆಸುವ ಜನಸಂಪರ್ಕ ಸಭೆಗಳು ಕಾಟಾಚಾರದ ಸಭೆಗಳಾಗಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು. 2023ರಲ್ಲಿ ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ, ಎಲ್ಲಾ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ತಮ್ಮ ಕ್ಷೇತ್ರದಲ್ಲಿ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಶಾಸಕರು ಜನಸಂಪರ್ಕ ಸಭೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭ ಮಾಡಲಾಯಿತು. ಸ್ಥಳೀಯ ಮಟ್ಟ ದಲ್ಲಿ ಸಮಸ್ಯೆ ಬಗೆಹರಿಸಿದರೆ ರಾಜ್ಯಮಟ್ಟಕ್ಕೆ ಹೋಗುವ ಪರಿಸ್ಥಿತಿ ಒದಗುವುದಿಲ್ಲ ಎನ್ನುವ ಕಾರಣಕ್ಕಾಗಿ ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಜಿಲ್ಲಾ ಮಟ್ಟದಲ್ಲಿ ಹಾಗೂ ತಾವು ತಾಲೂಕು ಮಟ್ಟದಲ್ಲಿ ಈ ಸಭೆ ಉದ್ಘಾಟಿಸಿದ್ದಾಗಿ ಹೇಳಿದರು.ತಾಲೂಕುಮಟ್ಟಕ್ಕೂ ಬರಲು ಗ್ರಾಮಸ್ಥರಿಗೆ ತೊಂದರೆಯಾಗಬಹುದೆಂದು ನೇರವಾಗಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆದೊಯ್ದು ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎರಡೆರಡು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಜನ ಸಂಪರ್ಕ ಸಭೆ ಗಳನ್ನು ನಡೆಸುವ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು. ಶಿರವಾಸೆ ಗ್ರಾಪಂ ಅಧ್ಯಕ್ಷ ರಘುನಾಥ್, ಮೇಲಿನಹುಲುವತ್ತಿ ಗ್ರಾಪಂ ಅಧ್ಯಕ್ಷೆ ಜಾನಕೀರಾಮ್, ಜಿಪಂ ಉಪ ಕಾರ್ಯದರ್ಶಿ ಶಂಕರ್ ಕೊರವರ್, ತಾಲೂಕು ತಹಸೀಲ್ದಾರ್ ಸುಮಂತ್‌ಕುಮಾರ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಜಯ ಕುಮಾರ್, ಶಿರವಾಸೆ ಗ್ರಾಪಂ ಉಪಾಧ್ಯಕ್ಷೆ ರಾಧ, ಮೇಲಿನ ಹುಲುವತ್ತಿ ಗ್ರಾಪಂ ಉಪಾಧ್ಯಕ್ಷೆ ಕೆ.ಸಿ.ಭಾರತಿ, ಸದಸ್ಯರಾದ ಪ್ರೇಮಾಕ್ಷಿ ಎಸ್. ಅಮೀನ್, ದಾಕ್ಷಾಯಿಣಿ, ಶಿರವಾಸೆ ಗ್ರಾಪಂ ಸದಸ್ಯರಾದ ವಿಮಲಾ, ಪಾರ್ವತಿ, ಎಸ್. ಉಮಾ, ಗಣೇಶ್, ಟಿ.ಎಸ್.ರಘು, ಎನ್.ಪ್ರೀತಿ, ರವಿ ರೇವಣ್ಣ, ಮೇಲಿನ ಹುಲುವತ್ತಿ ಗ್ರಾಪಂ ಸದಸ್ಯೆ ಶಾರದಾಂಬ, ಡಿಎಚ್‌ಒ ಡಾ.ಅಶ್ವತ್ಥ್ ಬಾಬು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.7 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಜಾಗರ ಹೋಬಳಿಯ ಶಿರವಾಸೆ ಹಾಗೂ ಮೇಲಿನಹುಲುವತ್ತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಜನ ಸಂಪರ್ಕ ಸಭೆಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.