ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ಪರ್ಧಾತ್ಮಕ ಯುಗದಲ್ಲಿ ಮಾರುಕಟ್ಟೆಯಲ್ಲಿ ಬೆಳೆಯಬೇಕಾದರೆ ವಸ್ತುವಿನ ಗುಣಮಟ್ಟ ಕಾಯ್ದುಕೊಳ್ಳುವುದರ ಜತೆಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ನೀಡಬೇಕಾದ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಶನಿವಾರ ವಿಧಾನಸೌಧದಲ್ಲಿ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (ಕೆಎಸ್‌ಡಿಎಲ್) 21 ನೂತನ ವೈವಿಧ್ಯಮಯ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಖಾಸಗಿ ಕಂಪನಿಗಳ ಜತೆ ಸ್ಪರ್ಧೆ ನೀಡಬೇಕಾದರೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಸ್ತುಗಳನ್ನು ಉತ್ಪಾದನೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಆಗ ಮಾತ್ರ ಮಾರುಕಟ್ಟೆ ಉಳಿದು, ಬೆಳೆಯಬಹುದು. ಅಲ್ಲದೇ, ಲಾಭ ಮಾಡಬಹುದು ಎಂದರು.
ಕೆಎಸ್‌ಡಿಎಲ್ ತನ್ನ ಉತ್ಪನ್ನಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದರ ಜತೆಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಸ್ತುಗಳನ್ನು ಉತ್ಪಾದನೆ ಮಾಡುತ್ತಿದೆ. ಲಾಭದತ್ತವೂ ಸಂಸ್ಥೆ ಸಾಗುತ್ತಿದೆ. ಹಿಂದಿನ ಸಾಲಿನಲ್ಲಿ ಸಂಸ್ಥೆಯು ₹132 ಕೋಟಿ ಲಾಭ ಮಾಡಿದ್ದು, ಎಂ.ಬಿ.ಪಾಟೀಲ್ ಅವರು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಬಳಿಕ ಕಳೆದ ಎಂಟು ತಿಂಗಳಲ್ಲಿ ಲಾಭವು ₹182 ಕೋಟಿಗೆ ಹೆಚ್ಚಳವಾಗಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯ ಉತ್ಪಾದನಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಅವರು ಹಲವು ಮಹತ್ವಾಕಾಂಕ್ಷಿ ಉಪಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಸಂಸ್ಥೆಯ ವಹಿವಾಟು ಸದ್ಯಕ್ಕೆ ₹1,400 ಕೋಟಿಯಷ್ಟಿದೆ. ಇದನ್ನು ಎರಡು ವರ್ಷಗಳಲ್ಲಿ ಮೂರು ಸಾವಿರ ಕೋಟಿಗೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಉತ್ಪಾದನೆಯ ಪ್ರಮಾಣವು ಇತ್ತೀಚೆಗೆ ಶೇ.25ರಷ್ಟು ಹೆಚ್ಚಾಗಿದೆ. ಪಾರದರ್ಶಕ ಸಾಬೂನುಗಳು ಮತ್ತು ಸುಗಂಧಭರಿತ ಉತ್ಪನ್ನಗಳ ತಯಾರಿಕೆ ಕೂಡ ಸದ್ಯದಲ್ಲೇ ಆರಂಭವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ। ಪ್ರಶಾಂತ್, ತಾಂತ್ರಿಕ ಸಲಹೆಗಾರ ರಜನೀಕಾಂತ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.ನಕಲಿ ಉತ್ಪನ್ನ ಬಗ್ಗೆ ಎಚ್ಚರಿಕೆ ಇರಲಿ: ಸಿಎಂ
ಕೆಲ ದುಷ್ಕರ್ಮಿಗಳು ನಕಲಿ ಉತ್ಪನ್ನ ಮಾಡುವ ಕೆಲಸದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದ್ದು, ಮೈಸೂರು ಸ್ಯಾಂಡಲ್ ಸೋಪುಗಳ ನಕಲಿ ಉತ್ಪಾದನೆಯಾಗದಂತೆ ಎಚ್ಚರಿಕೆವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.ಇತ್ತೀಚೆಗೆ ಹೈದರಾಬಾದಿನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪು ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ಮಾಡಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ, ಕ್ರಮ ಜರುಗಿಸಲಾಗಿದೆ. ಈ ಬಗ್ಗೆ ಗಮನ ಹರಿಸಬೇಕು. ಈ ರೀತಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ.ಪಾಟೀಲ್, ಸಂಸ್ಥೆಯ ಉತ್ಪನ್ನಗಳ ನಕಲನ್ನು ತಡೆಯಲು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಜೊತೆಗೆ ಅಮೆರಿಕ, ಯೂರೋಪು ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೆಎಸ್‌ಡಿಎಲ್ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಅಂತಾರಾಷ್ಟ್ರೀಯ ವಹಿವಾಟನ್ನು ಸದ್ಯದ ₹19 ಕೋಟಿಯಿಂದ ₹25 ಕೋಟಿಗೆ ಈ ವರ್ಷವೇ ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.