ಸಾರಾಂಶ
ಕಾರವಾರ: ಕುಟುಂಬದೊಳಗೆ ಯಾವುದೇ ರೀತಿಯ ಹಿಂಸೆಗೊಳಗಾದ ಮಹಿಳೆಯರಿಗೆ ರಕ್ಷಣೆ, ಸಾಂತ್ವನ ಒದಗಿಸುವ ಜತೆಗೆ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಕೌಶಲ್ಯ ತರಬೇತಿಗಳನ್ನು ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆ ಹಾಗೂ ಇತರೆ ಯೋಜನೆಗಳ ಪ್ರಗತಿ ಕುರಿತ ತ್ರೈ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಕೌಟುಂಬಿಕ ಹಿಂಸೆ ಕುರಿತಂತೆ 261 ಪ್ರಕರಣಗಳು ದಾಖಲಾಗಿದ್ದು, 213 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.
ದಾಖಲಾಗಿರುವ ಈ ಎಲ್ಲ ಪ್ರಕರಣಗಳಲ್ಲಿ ನೊಂದ ಮಹಿಳೆಯರು ಕೌಶಲ್ಯ ತರಬೇತಿ ಪಡೆಯಲು ಇಚ್ಛೆಯಿದ್ದಲ್ಲಿ ಅವರಿಗೆ ಅಗತ್ಯ ತರಬೇತಿಗೆ ವ್ಯವಸ್ಥೆ ಮಾಡಬೇಕು. ಈ ಮೂಲಕ ಅವರು ಸ್ವ ಉದ್ಯೋಗ ಅಥವಾ ಸ್ವಾವಲಂಬಿ ಜೀವನ ಸಾಗಿಸಲು ನೆರವು ನೀಡಬೇಕು ಎಂದರು.ಮಕ್ಕಳ ಗ್ರಾಮಸಭೆಗಳಲ್ಲಿ ಮಕ್ಕಳಿಂದ ಸ್ವೀಕಾರವಾಗುವ ಮನವಿಗಳ ಬಗ್ಗೆ ಪರಿಶೀಲಿಸಿ, ನಿರಂತರವಾಗಿ ಅವುಗಳನ್ನು ಫಾಲೋ ಅಪ್ ಮಾಡಿ ಕ್ರಮ ಕೈಗೊಳ್ಳಬೇಕು. ಎಲ್ಲ ತಾಲೂಕುಗಳಲ್ಲಿ ಬಾಲವಿಕಾಸ ಸಮಿತಿ ಸಭೆಗಳು ನಿಯಮಿತವಾಗಿ ನಡೆಯಬೇಕು. ಶಾಲೆ ಬಿಟ್ಟ ಮಕ್ಕಳ ಬಗ್ಗೆ ವಿಶೇಷ ಗಮನಹರಿಸಿ ಅವರನ್ನು ಪುನಃ ಶಾಲೆಗೆ ಸೇರ್ಪಡೆ ಮಾಡಬೇಕು. ಶಾಲಾ- ಕಾಲೇಜುಗಳಲ್ಲಿ, ಅಂಗನವಾಡಿ ಕಾರ್ಯಕರ್ತೆಯರ ಸಭೆಗಳಲ್ಲಿ, ಗ್ರಾಮಸಭೆ, ಮಕ್ಕಳ ಸಭೆಗಳಲ್ಲಿ ಪೋಕ್ಸೋ ಕಾಯಿದೆ, ಬಾಲ್ಯವಿವಾಹ ನಿಷೇಧ, ಮಕ್ಕಳ ಸಹಾಯವಾಣಿ 1098 ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂದರು.ಮಾತೃವಂದನಾ ಯೋಜನೆಯಡಿ ಅರ್ಹ ಎಲ್ಲ ಗರ್ಭಿಣಿಯರಿಗೆ ಆರ್ಥಿಕ ನೆರವು ದೊರೆಯುವಂತೆ ನೋಡಿಕೊಳ್ಳಬೇಕು. ತಂತ್ರಾಂಶದಲ್ಲಿ ಕಂಡುಬರುವ ತಾಂತ್ರಿಕ ದೋಷಗಳನ್ನು ಎನ್ಐಸಿ ಗಮನಕ್ಕೆ ತಂದು ಮತ್ತು ಆಧಾರ್ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬೇಕು ಎಂದರು.ಗೃಹಲಕ್ಷ್ಮೀ ಯೋಜನೆಯಡಿ ಶೇ. 98.02 ಪ್ರಗತಿ ಸಾಧಿಸಿದ್ದು, ಯೋಜನೆಗೆ ಒಳಪಡಲು ವಿವಿಧ ಕಾರಣಗಳಿಂದ ಬಾಕಿ ಇರುವ 1652 ಜನರಲ್ಲಿ, ಹಾಸಿಗೆ ಪೀಡಿತರ ಮನೆಗಳಿಗೆ ಭೇಟಿ ನೀಡಿ ಯೋಜನೆಗೆ ನೋಂದಾಯಿಸುವಂತೆ, ಆಧಾರ್ ಮತ್ತು ರೇಷನ್ ಕಾರ್ಡ್ ಹೊಂದಾಣಿಕೆ ಸಮಸ್ಯೆಯಿರುವವರ ಕುರಿತಂತೆ ಜಿಲ್ಲಾ ಆಧಾರ್ ಸಮಾಲೋಚಕರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಯೋಜನೆಯ ಪ್ರಗತಿಯಲ್ಲಿ ಶೀಘ್ರದಲ್ಲೇ ಶೇ. 100 ಸಾಧನೆ ಮಾಡಬೇಕು ಎಂದರು.
ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಎಲ್ಲ ತಾಲೂಕುಗಳಲ್ಲಿ ನಿವೇಶನ ಹುಡುಕುವಂತೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ನಗರ ಪ್ರದೇಶದಲ್ಲಿ ಸಿಎ ನಿವೇಶನ ಲಭ್ಯವಿದ್ದಲ್ಲಿ ಅದನ್ನು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನೀಡಲಾಗುವುದು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿರೂಪಾಕ್ಷ ಗೌಡ ಪಾಟೀಲ್, ವಿವಿಧ ಇಲಾಖೆಯ ಅಧಿಕಾರಿಗಳು, ಎಲ್ಲ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತಿತರರು ಇದ್ದರು.