ಜುಲೈ 21ರಂದು ಹುತಾತ್ಮ ದಿನ ಬದಲು ಕರಾಳ ದಿನ

| Published : Jun 29 2024, 12:33 AM IST

ಸಾರಾಂಶ

ಬಹುತೇಕ ರೈತರಿಗೆ ಬರ ಪರಿಹಾರ ಮುಟ್ಟಿಲ್ಲ. ಸಾಲ ತುಂಬದಂತೆ ಸರ್ಕಾರ ಹೇಳಿದೆ. ಬ್ಯಾಂಕ್ ಸಾಲ ಮರು ಪಾವತಿಗೆ ನೋಟಿಸ್ ನೀಡುತ್ತಿವೆ. ಸರ್ಕಾರ ಮತ್ತು ಬ್ಯಾಂಕ್ ರೈತರ ಜೊತೆ ಚಲ್ಲಾಟ ಆಡುತ್ತಿವೆ.

ಧಾರವಾಡ:

ರೈತ ಹುತಾತ್ಮ ದಿನಾಚರಣೆ ಬದಲು ನವಲಗುಂದದಲ್ಲಿ ಜು. 21ಕ್ಕೆ ಕರಾಳ ದಿನಾಚರಣೆಗೆ ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬೀರಪ್ಪ ದೇಶನೂರ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಂಡೂರಾವ್ ಸರ್ಕಾರ ರೈತರ ಮೇಲೆ ಗೋಲಿಬಾರ್ ಮಾಡಿಸಿ, ಕರಾಳ ಇತಿಹಾಸಕ್ಕೆ ನಾಂದಿ ಹಾಡಿದೆ. ಈ ಕಾರಣಕ್ಕೆ ಕರಾಳ ದಿನಾಚರಣೆ ಮಾಡಲಾಗುತ್ತಿದೆ. ಚುನಾವಣೆಗೆ ಮಾತ್ರ ರೈತರನ್ನು ಬಳಸಿಕೊಳ್ಳುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳು ರೈತರನ್ನು ತುಳಿಯುತ್ತಿವೆ. ರೈತ ಸಂಘಟನೆ ಒಗ್ಗೂಡಿ ಈ ತ್ರಿಪಕ್ಷಗಳಿಗೆ ಬುದ್ಧಿ ಕಲಿಸಲು ಕರೆ ನೀಡಿದರು.

ಬಹುತೇಕ ರೈತರಿಗೆ ಬರ ಪರಿಹಾರ ಮುಟ್ಟಿಲ್ಲ. ಸಾಲ ತುಂಬದಂತೆ ಸರ್ಕಾರ ಹೇಳಿದೆ. ಬ್ಯಾಂಕ್ ಸಾಲ ಮರು ಪಾವತಿಗೆ ನೋಟಿಸ್ ನೀಡುತ್ತಿವೆ. ಸರ್ಕಾರ ಮತ್ತು ಬ್ಯಾಂಕ್ ರೈತರ ಜೊತೆ ಚಲ್ಲಾಟ ಆಡುತ್ತಿವೆ. ಅಂಬಾನಿ-ಅದಾನಿ ಅವರ ಕೋಟಿ ಕೋಟಿ ಸಾಲಮನ್ನಾ ಮಾಡಿದ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾಕ್ಕೆ ಮೀನಾಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ಹೋರಾಟಗಾರ ಶಂಕರ ಅಂಬಲಿ ಮಾತನಾಡಿ, ಮಲಪ್ರಭೆ ರಕ್ಷಿಸಬೇಕು. ಮಹದಾಯಿ ಶೀಘ್ರವೇ ಅನುಷ್ಠಾನಿಸಬೇಕು. ನಿರಂತರ ಖರೀದಿ ಕೇಂದ್ರ ಸ್ಥಾಪಿಸಬೇಕು. ಕೃಷಿಭೂಮಿ ಸ್ವಾಧೀನದ ಬದಲು ಲೀಜ್ ಪಡೆಯಲು ತಿಳಿಸಿದರು. ಮಹಾದಾಯಿ ಹೆಸರಿನಲ್ಲಿ ರಾಜಕೀಯದಲ್ಲಿ ಮೇಲಸ್ತರದಲ್ಲಿರುವ, ಮತ್ತೆ ಕೇಂದ್ರ ಸಚಿವರೂ ಆದ ಪ್ರಹ್ಲಾದ ಜೋಶಿ ಹಾಗೂ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ ಶೆಟ್ಟರ್‌ ಈಗಲಾದರೂ ಈ ಯೋಜನೆ ಜಾರಿಗೆ ಬರುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ವೈಜ್ಞಾನಿಕ ಬೆಳೆವಿಮಾ ಪದ್ಧತಿ ಮರು ಪರಿಶೀಲಿಸಬೇಕು. ಕೃಷಿ ಪರಿಕರಗಳ ಬೆಲೆ ಏರಿಕೆ ನಿಲ್ಲಿಸಬೇಕು. ರೈತ ವಿರೋಧಿ ಕಾನೂನು ರದ್ದುಪಡಿಸಬೇಕು. ಕೃಷಿಗೆ ಬಳಸುವ ವಾಹನಗಳಿಗೆ ರೈತರಿಗೆ ಉಚಿತ ಲೈಸೆನ್ಸ್ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಘುನಾಥ ನಡುವಿನಮನಿ, ಸುರೇಶ ಮೂಲಿಮನಿ, ಶಂಕರಗೌಡ ಪಾಟೀಲ, ಬಾಲಚಂದ್ರ ಸುರಪೂರ ಇದ್ದರು.