ರಾಜ್ಯದಲ್ಲಿ ಬಹಳಷ್ಟು ಯೋಗ್ಯ, ಅರ್ಹ ಅಭ್ಯರ್ಥಿಗಳಿದ್ದು, ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಬೀದರ್ ಜಿಲ್ಲಾ ಉಸ್ತುವಾರಿ ಸಚಿವನಾಗಿ ಪಕ್ಷವು ಯಾರನ್ನೇ ಕಣಕ್ಕಿಳಿಸಿದರೂ ಗೆಲ್ಲಿಸುತ್ತೇನೆ ಎಂದು ಸಚಿವ ಖಂಡ್ರೆ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರುಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 22 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಭರವಸೆ ನೀಡಿದಂತೆ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನರು ಆಶೀರ್ವಾದ ಮಾಡಲಿದ್ದಾರೆ ಎಂದರು.ರಾಜ್ಯದಲ್ಲಿ ಬಹಳಷ್ಟು ಯೋಗ್ಯ, ಅರ್ಹ ಅಭ್ಯರ್ಥಿಗಳಿದ್ದು, ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಬೀದರ್ ಜಿಲ್ಲಾ ಉಸ್ತುವಾರಿ ಸಚಿವನಾಗಿ ಪಕ್ಷವು ಯಾರನ್ನೇ ಕಣಕ್ಕಿಳಿಸಿದರೂ ಗೆಲ್ಲಿಸುತ್ತೇನೆ ಎಂದು ಹೇಳಿದರು.
ಸವದಿ ಬಿಜೆಪಿಗೆ ಹೋಗಲ್ಲ:ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಹೋಗಿದ್ದಾರೆ. ಆದರೆ ಲಕ್ಷ್ಮಣ ಸವದಿ ಆಗಲೀ, ಬೇರೆ ಯಾರೂ ಕೂಡ ಹೋಗಲ್ಲ. ಎಲ್ಲರೂ ಕಾಂಗ್ರೆಸ್ ಜತೆಗಿದ್ದಾರೆ. ಫೆಬ್ರವರಿ 17ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಭೆ ನಡೆಯಲಿದ್ದು, ಪಕ್ಷದ ಗೆಲುವಿಗಾಗಿ ನಾವೆಲ್ಲರೂ ಶ್ರಮಿಸುತ್ತಿದ್ದೇವೆ ಎಂದರು.
ಕೇಂದ್ರದಿಂದ ಘೋರ ಅನ್ಯಾಯ:ಕೇಂದ್ರ ಸರ್ಕಾರ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಅನುದಾನ ನೀಡದೆ ತಾರತಮ್ಯ, ಘೋರ ಅನ್ಯಾಯ ಮಾಡುತ್ತಿದೆ. ಅದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ. ಕೇಂದ್ರ ಸರ್ಕಾರ ಈ ಅನ್ಯಾಯವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲು ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಖಂಡ್ರೆ ಹೇಳಿದರು.
ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಯಾವುದೇ ತಾರತಮ್ಯ ಮಾಡಿಲ್ಲ ಮತ್ತು 3000 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.ಮಾಜಿ ಸಚಿವ ಜನಾರ್ದನ ಪೂಜಾರಿ ಭೇಟಿಯಾದ ಅರಣ್ಯ ಸಚಿವ ಖಂಡ್ರೆ-ರಾಜ್ಯದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೋಮವಾರ ರಾತ್ರಿ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರನ್ನು ಬಂಟ್ವಾಳದಲ್ಲಿರುವ ಅವರ ಮನೆಯಲ್ಲಿ ಭೇಟಿಯಾಗಿ ಆರೋಗ್ಯವನ್ನು ವಿಚಾರಿಸಿ, ಆರ್ಶೀವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, ಕಾಂಗ್ರೆಸ್ ಪಕ್ಷ ಕುಟುಂಬವಿದ್ದಂತೆ ಉತ್ತಮವಾಗಿ ಕೆಲಸ ಮಾಡಿ ಪಕ್ಷ ಮತ್ತು ಸರ್ಕಾರಕ್ಕೆ ಒಳ್ಳೆ ಹೆಸರು ತರುವಂತೆ ಸಲಹೆ ನೀಡಿದರು. ಇದೇ ವೇಳೆ ಸಚಿವ ಖಂಡ್ರೆ ಅವರ ತಂದೆ, ಮಾಜಿ ಸಚಿವ ಭೀಮಣ್ಣ ಖಂಡ್ರೆಯವರ ಒಡನಾಟವನ್ನು ಸ್ಮರಿಸಿದ ಪೂಜಾರಿಯವರು ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಅವರ ಭಾವನ ಬಗ್ಗೆಯೂ ಸಚಿವರಲ್ಲಿ ವಿಚಾರಿಸಿದರು.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕಾಂಗ್ರೆಸ್ ಸೇವಾದಳದ ಮುಖಂಡ ವೆಂಕಪ್ಪ ಪೂಜಾರಿ ಸಚಿವ ಖಂಡ್ರೆ ಅವರನ್ನು ಸ್ವಾಗತಿಸಿದರು.