ಸರ್ಜಿ ರೇಣುಕಾ ದೇವಧರ್ ಆಸ್ಪತ್ರೆಯಿಂದ 22 ಕ್ಷಯರೋಗಿಗಳ ದತ್ತು: ಡಾ. ಮಧು

| Published : Sep 17 2025, 01:06 AM IST

ಸರ್ಜಿ ರೇಣುಕಾ ದೇವಧರ್ ಆಸ್ಪತ್ರೆಯಿಂದ 22 ಕ್ಷಯರೋಗಿಗಳ ದತ್ತು: ಡಾ. ಮಧು
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷಯರೋಗವು ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಯಾಗಿದೆ. ಕೂದಲು ಹಾಗೂ ಉಗುರುಗಳನ್ನು ಬಿಟ್ಟು ಬೇರೆ ಯಾವ ಜಾಗದಿಂದಲೂ ಬರುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಕ್ಷಯರೋಗ(ಟಿಬಿ) ಬಗ್ಗೆ ಹೆಚ್ಚು ಜಾಗೃತರಾಗಬೇಕು.

ಹಾವೇರಿ: ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಡಿ 22 ಕ್ಷಯರೋಗಿಗಳನ್ನು ದತ್ತು ಪಡೆದುಕೊಂಡು, ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಕ್ಷಯರೋಗಿಗಳನ್ನು ನಿಕ್ಷಯರನ್ನಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸರ್ಜಿ ರೇಣುಕಾ ದೇವಧರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮಧು ಕೆ.ಆರ್. ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷಯರೋಗವು ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಯಾಗಿದೆ. ಕೂದಲು ಹಾಗೂ ಉಗುರುಗಳನ್ನು ಬಿಟ್ಟು ಬೇರೆ ಯಾವ ಜಾಗದಿಂದಲೂ ಬರುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಕ್ಷಯರೋಗ(ಟಿಬಿ) ಬಗ್ಗೆ ಹೆಚ್ಚು ಜಾಗೃತರಾಗಬೇಕು. ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು, ಪೌಷ್ಟಿಕ ಆಹಾರ ಇಲ್ಲದಿರುವುದು, ಮದ್ಯಪಾನ ಹಾಗೂ ಧೂಮಪಾನಕ್ಕೆ ಒಳಗಾವುದು, ಎಚ್‌ಐವಿ, ಶುಗರ್ ಕಾಯಿಲೆ ಹಾಗೂ ಇಕ್ಕಟ್ಟಾದ ಜಾಗದಲ್ಲಿ ಬಹಳಷ್ಟು ಜನರು ವಾಸವಿರುವುದರಿಂದ ರೋಗ ಬರುವ ಸಾಧ್ಯತೆಗಳು ಇದೆ. ಪ್ರತಿವರ್ಷ ಶೇ. 7ರಷ್ಟು ಸಂಖ್ಯೆ ಜನರು ಕ್ಷಯರೋಗದಿಂದ ಸಾವಿಗೀಡಾಗುತ್ತಿದ್ದಾರೆ. ಶೇ. 45ರಿಂದ 55ರಷ್ಟು ಗ್ರಾಮೀಣ ಭಾಗದ ಜನರು ಈ ಕಾಯಿಲೆಗೆ ಒಳಗಾಗುತ್ತಿದ್ದಾರೆ ಎಂದರು.ಜಿಲ್ಲೆಯಲ್ಲಿ ಕಳೆದ ವರ್ಷ 1,676 ಜನರು ಕ್ಷಯರೋಗಕ್ಕೆ ತುತ್ತಾಗಿದ್ದರು. ಈ ವರ್ಷ 1,077 ಜನರಲ್ಲಿ ಕ್ಷಯರೋಗ ಪತ್ತೆಯಾಗಿದೆ. 15 ದಿನಗಳ ನಿರಂತರ ಕೆಮ್ಮು, ಕಫ, ಸಂಜೆಯಾದರೆ ಜ್ವರ, ಊಟ ಸೇರದಿರುವುದು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು ಹೀಗೆ ಲಕ್ಷಣಗಳಾಗಿವೆ. ಅಂಥವರು ಬೇಗನೇ ಬಂದು ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬೇಕು. ನಮ್ಮ ಆಸ್ಪತ್ರೆಯಲ್ಲೇ 40 ಜನರು ಕ್ಷಯರೋಗಕ್ಕೆ ಒಳಗಾಗಿದ್ದಾರೆ.

ಅಂಥವರ ಪೈಕಿ 22 ಜನರನ್ನು ದತ್ತು ಪಡೆದಿದ್ದೇವೆ. ಸರ್ಕಾರದಿಂದ ತಲಾ ₹1000 ರೋಗಿಗಳಿಗೆ ಸಿಗುತ್ತದೆ. ನಾವೂ ಒಂದು ಬಾರಿ ಪೌಷ್ಟಿಕ ಆಹಾರದ ಕಿಟ್‌ಗಳನ್ನು ನೀಡುತ್ತೇವೆ. ಆಸ್ಪತ್ರೆಯಿಂದ ಹೆಚ್ಚಿನ ಕಾಳಜಿ ವಹಿಸಿ, ಜಿಲ್ಲಾಸ್ಪತ್ರೆ ಸಹಕಾರದೊಂದಿಗೆ ಔಷಧಿಗಳನ್ನು ನೀಡುತ್ತೇವೆ ಎಂದರು. ಡಾ. ರಾಘವಾಂಕ, ರಂಜಿತಾ ಬಸೇಗಣ್ಣಿ, ಸಂಯೋಜನಾಧಿಕಾರಿ ಮುಬಾರಕ ಇತರರು ಇದ್ದರು.