ವಿಚ್ಛೇದನ ಬಿಟ್ಟು ಮತ್ತೆ ಒಂದಾದ 23 ಜೋಡಿಗಳು

| Published : Jul 13 2025, 01:19 AM IST

ಸಾರಾಂಶ

ಕೌಟುಂಬಿಕ ಕಲಹ, ತಪ್ಪುಗ್ರಹಿಕೆ ಸೇರಿದಂತೆ ನಾನಾ ಕಾರಣಕ್ಕೆ ಮನಸ್ತಾಪ ಉಂಟಾಗಿ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ 23 ಜೋಡಿಗಳು ತಮ್ಮೆಲ್ಲಾ ಮುನಿಸುಗಳನ್ನು ಮರೆತು, ಜಿಲ್ಲೆಯ ನ್ಯಾಯಾಧೀಶರು, ವಕೀಲರ ಸಮಕ್ಷಮ ಮತ್ತೆ ಒಂದಾಗಿ, ಬಾಳುವ ಸಂಕಲ್ಪ ಮಾಡಿ, ಹಾರ ಬದಲಿಸಿಕೊಂಡು ಬಾಂಧವ್ಯಗಳನ್ನು ಬೆಸೆಯುವ ಕ್ಷಣಗಳಿಗೆ ಲೋಕ್ ಅದಾಲತ್ ಶನಿವಾರ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೌಟುಂಬಿಕ ಕಲಹ, ತಪ್ಪುಗ್ರಹಿಕೆ ಸೇರಿದಂತೆ ನಾನಾ ಕಾರಣಕ್ಕೆ ಮನಸ್ತಾಪ ಉಂಟಾಗಿ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ 23 ಜೋಡಿಗಳು ತಮ್ಮೆಲ್ಲಾ ಮುನಿಸುಗಳನ್ನು ಮರೆತು, ಜಿಲ್ಲೆಯ ನ್ಯಾಯಾಧೀಶರು, ವಕೀಲರ ಸಮಕ್ಷಮ ಮತ್ತೆ ಒಂದಾಗಿ, ಬಾಳುವ ಸಂಕಲ್ಪ ಮಾಡಿ, ಹಾರ ಬದಲಿಸಿಕೊಂಡು ಬಾಂಧವ್ಯಗಳನ್ನು ಬೆಸೆಯುವ ಕ್ಷಣಗಳಿಗೆ ಲೋಕ್ ಅದಾಲತ್ ಶನಿವಾರ ಸಾಕ್ಷಿಯಾಯಿತು.

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರೂ ಆದ ಕೆ.ಎಲ್.ವೇಲಾ, ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಸೇರಿದಂತೆ ವಿವಿಧ ನ್ಯಾಯಾಧೀಶರ ಸಮಕ್ಷಮ 23 ಜೋಡಿ ಮುನಿಸು ಮರೆತು, ಒಂದಾಗಿ ಬಾಳಲು ಒಪ್ಪಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಗರ, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಶನಿವಾರ ಲೋಕ್ ಅದಾಲತ್ ನಡೆಯಿತು. ಅದರಂತೆ ದಾವಣಗೆರೆಯಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ 23 ಜೋಡಿಗಳು ವಿಚ್ಛೇದನ ಕೈ ಬಿಟ್ಟು, ಪರಸ್ಪರ ಹಾರ ಹಾಕಿ, ಸಿಹಿ ತಿನ್ನಿಸುವ ಸಂಸಾರ ನೊಗ ಹೊತ್ತರು.

ನ್ಯಾಯಾಧೀಶರಾದ ಡಿ.ಕೆ.ವೇಲಾ ಮಾತನಾಡಿ, ಲೋಕ್‌ ಅದಾಲತ್‌ನಲ್ಲಿ ಎಲ್ಲ ರೀತಿ ಪ್ರಕರಣ ರಾಜಿ ಮೂಲಕ ಪರಿಹರಿಸಲಾ ಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 9,360 ಜಾರಿ ಪ್ರಕರಣಗಳು ಮುಕ್ತಾಯಗೊಂಡು, 14,33,66,571 ಹಣದ ಪರಿಹಾರ ಆಗಿದೆ. 2,62,721 ವ್ಯಾಜ್ಯಪೂರ್ವ ಪ್ರಕರಣ ಮುಕ್ತಾಯಗೊಂಡು ₹72,62,10,788 ಹಣ ಪರಿಹಾರವಾಗಿ ರಾಜಿ ಮೂಲಕ ಮುಕ್ತಾಯವಾಗಿದೆ. 23 ಜೋಡಿಗಳು ವಿಚ್ಛೇದನ ಬದಲು ಪುನಃ ಒಂದಾಗಿದ್ದು ವಿಶೇಷವಾಗಿದ್ದರೆ, ಜಮೀನು ವ್ಯಾಜ್ಯವೊಂದು 2013ರಿಂದಲೂ ನಡೆದಿದ್ದು, ಅಮೆರಿಕಾದಲ್ಲಿದ್ದ ಕಕ್ಷಿದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದು ಮತ್ತೊಂದು ವಿಶೇಷ. ರಾಜಿ ಮೂಲಕ ಪ್ರಕರಣ ಇತ್ಯರ್ಥದಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಮಾತನಾಡಿ, ವಕೀಲರ ಸಂಘದ ಅಧ್ಯಕ್ಷ ಎಲ್‌.ಎಚ್. ಅರುಣಕುಮಾರ ಮಾತನಾಡಿದರು. ನ್ಯಾಯಾಧೀಶರಾದ ಆರ್.ಎನ್. ಪ್ರವೀಕುಮಾರ, ಶ್ರೀರಾಮ ನಾರಾಯಣ ಹೆಗಡೆ, ಶಿವಪ್ಪ ಗಂಗಪ್ಪ ಸಲಗೆರೆ, ಮುಖ್ಯ ನ್ಯಾಯಿಕ ದಂಡಾಧಿಕಾರಿಯೂ ಆದ ಎಚ್.ಕೆ.ರೇಷ್ಮಾ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಮಹಾವೀರ ಮ. ಕರೆಣ್ಣವರ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ ಗೋಪನಾಳ, ಕಾರ್ಯದರ್ಶಿ ಎಸ್.ಬಸವರಾಜ, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ, ನ್ಯಾಯಾಂಗ ಇಲಾಖೆ ಅಧಿಕಾರಿ, ಸಿಬ್ಬಂದಿ, ವಕೀಲರು, ಕಕ್ಷಿದಾರರು ಇದ್ದರು.

- - -

-12ಕೆಡಿವಿಜಿ9: ಲೋಕ್ ಅದಾಲತ್‌ನಲ್ಲಿ ಮುನಿಸು ಮರೆದು ಒಂದಾದ 23 ಜೋಡಿಗಳು, ಇತ್ಯರ್ಥಗೊಂಡ ಪ್ರಕರಣಗಳ ಬಗ್ಗೆ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರೂ ಆದ ಕೆ.ಎಲ್.ವೇಲಾ ಮಾಹಿತಿ ನೀಡಿದರು.