ಸಾರಾಂಶ
ಹುಬ್ಬಳ್ಳಿ:
ಬಡ್ಡಿ ಕಿರುಕುಳ ನೀಡಿದ ಆರೋಪದ ಮೇಲೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 16 ಪ್ರಕರಣ ದಾಖಲಿಸಿ, 23 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.ಅವರು ಇಲ್ಲಿನ ಉಪನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಕೇಶ್ವಾಪುರ, ವಿದ್ಯಾನಗರ, ಬೆಂಡಿಗೇರಿ, ವಿದ್ಯಾಗಿರಿ, ಧಾರವಾಡ-ಹುಬ್ಬಳ್ಳಿ ಉಪನಗರ, ಕಸಬಾಪೇಟೆ ಸೇರಿದಂತೆ 13 ಠಾಣೆಗಳಲ್ಲಿ 16 ಪ್ರಕರಣ ದಾಖಲಿಸಿಕೊಂಡಿದ್ದು, 23 ಜನ ಬಡ್ಡಿ ದಂಧೆಕೋರರನ್ನು ಬಂಧಿಸಲಾಗಿದೆ. ಅಂದಾಜು ₹4 ಲಕ್ಷ ಮೌಲ್ಯದ ಕಾರು, ಬೈಕ್, ಮೊಬೈಲ್ ಮತ್ತು ದಾಖಲಾತಿ ವಶಪಡಿಸಿಕೊಳ್ಳಲಾಗಿದೆ. ಆ. 22ರಂದು 7 ಪ್ರಕರಣಗಳಲ್ಲಿ 25 ಮಂದಿ ಬಂಧಿಸಲಾಗಿತ್ತು ಎಂದರು.
ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳಾದ ರಾಜೇಶ ಮೆಹರವಾಡೆ, ಮೋಹಿತ ಮೆಹರವಾಡೆ, ಅನೀತಾ ಹಬೀಬ, ದೀಪಾ ಶಲವಡಿ ಬಂಧಿಸಲಾಗಿದ್ದರೆ, ಅಶೋಕನಗರ ಠಾಣೆಯಲ್ಲಿ ದಾಖಲಾದ ಒಂದು ಪ್ರಕರಣದಲ್ಲಿ ಸತೀಶ ದೊಡ್ಡಮನಿ ಎಂಬಾತನನ್ನು ಬಂಧಿಸಲಾಗಿದೆ.ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ 2 ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ ಭಾಂಡಗೆ, ದತ್ತು ಪಟ್ಟನ್, ಕಮರಿಪೇಟ್ ಠಾಣಾ ವ್ಯಾಪ್ತಿಯಲ್ಲಿ ಧನಲಕ್ಷ್ಮೀ ಮದ್ರಾಸಿ, ಗೋಕುಲ ರೋಡ್ ಠಾಣಾ ವ್ಯಾಪ್ತಿಯ ಸೋಲೋಮನ್ ಬಬ್ಬಾ, ಆನಂದ ರಾಯಚೂರ, ಎಪಿಎಂಸಿ ಠಾಣಾ ವ್ಯಾಪ್ತಿಯ ಶೇಖವ್ವ ದಾಸನೂರ, ಕೇಶ್ವಾಪುರ ಠಾಣಾ ವ್ಯಾಪ್ತಿಯ ಸ್ಟೀಫನ್ ಕ್ಷೀರಸಾಗರ ಎಂಬುವರನ್ನು ಬಂಧಿಸಲಾಗಿದೆ. ಧಾರವಾಡ ವಿದ್ಯಾಗಿರಿ ಠಾಣಾ ವ್ಯಾಪ್ತಿಯ ಸಮೀರ, ಸೈಯದಲಿ, ಬಿ.ಕೆ. ಬಾಯಿ, ಹ್ಯಾರಿಸ್ ಪಠಾಣ, ಉಪನಗರ ಠಾಣಾ ವ್ಯಾಪ್ತಿಯ ಜಾವೇದ ಘೋಡೆಸವಾರ, ಶಹರ ಠಾಣಾ ವ್ಯಾಪ್ತಿಯ ಶಾಕೀರ ಕರಡಿಗುಡ್ಡ, ಬೆಂಡಿಗೇರಿ ಠಾಣಾ ವ್ಯಾಪ್ತಿಯ ಗಿರಿಯಪ್ಪ ಬಳ್ಳಾರಿ, ಬಾಳು ಬಳ್ಳಾರಿ, ಅಭಿಲೇಖಾ ತೋಖಾ, ಕಸಬಾಪೇಟ್ ಠಾಣಾ ವ್ಯಾಪ್ತಿಯ ತನ್ವೀರ ಜಂಗ್ಲಿವಾಲೆ, ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯ ನಾಣಾರಾಯಣ ಕಾಟಿಗಾರ ಎಂಬುವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಧೈರ್ಯವಾಗಿ ದೂರು ಸಲ್ಲಿಸಿ:ಕಡಿಮೆ ಹಣಕ್ಕೆ ಹೆಚ್ಚು ಬಡ್ಡಿ ವಸೂಲಿ ಮಾಡುವುದು, ಅಸಲು-ಬಡ್ಡಿ ಪಾವತಿಸಿದರೂ, ಮೀಟರ್ ಬಡ್ಡಿ ಹಾಕಿ ಅದನ್ನೂ ಪಾವತಿಸಲು ಮಾನಸಿಕ ಕಿರುಕುಳ ನೀಡುವುದು ಕಾನೂನು ಬಾಹಿರ ಕೃತ್ಯವಾಗಿದೆ. ಕೈಗಡ ಪಡೆದ ಸಾಲಕ್ಕೂ ನಾಲ್ಕೈದು ಬಡ್ಡಿ ಹಾಕಿ ಹಿಂಸೆ ನೀಡುವುದು ಸರಿಯಲ್ಲ. ನೊಂದವರು ಧೈರ್ಯವಾಗಿ ಠಾಣೆಗೆ ಬಂದು ದೂರು ನೀಡಬೇಕು. ದೂರು ಇಲ್ಲದೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಕಮಿಷನರ್ ಹೇಳಿದರು.
ಬೆಂಗೇರಿಯ ಚೇತನಾ ಕಾಲನಿಯಲ್ಲಿ ಮೀಟರ್ ಬಡ್ಡಿ ವ್ಯವಹಾರದಿಂದ ನೊಂದು ಸುಜಿತ್ ಎಂಬುವವನು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಎಲೆಕ್ಟ್ರಿಕಲ್ ವ್ಯವಹಾರ ಮಾಡುತ್ತಿದ್ದು, ಬ್ಯಾಂಕ್ ದಾಖಲೆ ಪರಿಶೀಲಿಸಲಾಗುತ್ತಿದೆ. ಅವರ ಕುಟುಂಬದವರಿಂದ ಮಾಹಿತಿ ಸಂಗ್ರಹಿಸಿದ್ದು, ಆರೇಳು ಜನರೊಂದಿಗೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರುವುದು ತಿಳಿದು ಬಂದಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದರು.ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್, ಎಸಿಪಿಗಳಾದ ಶಿವಪ್ರಕಾಶ ನಾಯಕ, ಉಮೇಶ ಚಿಕ್ಕಮಠ ಸೇರಿದಂತೆ ವಿವಿಧ ಠಾಣೆಗಳ ಸಿಪಿಐಗಳು ಇದ್ದರು.