23 ಬಾರಿ ಅತೀ ವೇಗ ಕಾರು ಚಾಲನೆ: ಮಾಲೀಕನಿಗೆ 23 ಸಾವಿರ ದಂಡ

| Published : Dec 07 2024, 12:30 AM IST

ಸಾರಾಂಶ

ಬೆಂಗಳೂರಿನ ಪಂಚವಟಿ ಲೇಔಟ್ ಕಲ್ಯಾಣ ನಗರದ ನಿವಾಸಿ ಶೇಷಾದ್ರಿ ಅಯ್ಯಂಗಾರ್ ದಂಡದ ಶಿಕ್ಷೆಗೊಳಗಾದ ಕಾರು ಮಾಲೀಕ.

ಮದ್ದೂರು: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀ ವೇಗದಿಂದ 23 ಬಾರಿ ಕಾರು ಚಲಾಯಿಸಿದ್ದ ಬೆಂಗಳೂರು ಮೂಲದ ಕಾರು ಮಾಲೀಕನಿಗೆ ಮದ್ದೂರು ಸಂಚಾರಿ ಠಾಣೆ ಪೊಲೀಸರು 23 ಸಾವಿರ ದಂಡ ವಿಧಿಸಿದ್ದಾರೆ. ಬೆಂಗಳೂರಿನ ಪಂಚವಟಿ ಲೇಔಟ್ ಕಲ್ಯಾಣ ನಗರದ ನಿವಾಸಿ ಶೇಷಾದ್ರಿ ಅಯ್ಯಂಗಾರ್ ದಂಡದ ಶಿಕ್ಷೆಗೊಳಗಾದ ಕಾರು ಮಾಲೀಕ. ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಶೇಷಾದ್ರಿ ಅಯ್ಯಂಗಾರ್ ತಮ್ಮ ಕೆ.ಎ.53, ಎಂ. 3638 ನೋಂದಣಿ ಸಂಖ್ಯೆಯ ಕಾರನ್ನು 23 ಬಾರಿ ನಿಗದಿಗಿಂತ ವೇಗವಾಗಿ ಚಾಲನೆ ಮಾಡಿದ್ದರು. ಈ ಪ್ರಕರಣ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವ ವಾಹನಗಳ ಪತ್ತೆಗಾಗಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಸಂಚಾರಿ ಠಾಣೆ ಪೊಲೀಸರು ಪಿಎಸ್ಐ ರಾಮಸ್ವಾಮಿ ನೇತೃತ್ವದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಶೇಷಾದ್ರಿ ಅವರ ಕಾರು ಸಹ 23 ಬಾರಿ ವೇಗವಾಗಿ ಚಲಿಸಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶೇಷಾದ್ರಿ ಅಯ್ಯಂಗಾರ್ ಅವರಿಂದ ದಂಡ ವಸೂಲಿ ಮಾಡಿದ್ದಾರೆ.

.