ಮಹಾದಾಸೋಹದಲ್ಲಿ ಬಳಕೆಯಾದ ಖಾದ್ಯ 2300 ಕ್ವಿಂಟಲ್

| Published : Jan 31 2025, 12:48 AM IST

ಸಾರಾಂಶ

ವಿವಿಧ ತಿನಿಸು ಸೇರಿ ಬರೋಬ್ಬರಿ 1 ಸಾವಿರ ಕ್ವಿಂಟಲ್ ಸಿಹಿ ತಿನಿಸು ಬಳಕೆಯಾಗಿದೆ. ಇನ್ನು 1200 ಕ್ವಿಂಟಲ್ ಅಕ್ಕಿಯ ಅನ್ನ ಮಾಡಲಾಗಿದೆ.

- ಸಾವಿರ ಕ್ವಿಂಟಲ್ ಸಿಹಿ ತಿನಿಸು

- 1200 ಕ್ವಿಂಟಲ್ ಅಕ್ಕಿ

- 100 ಕ್ವಿಂಟಲ್ ತರಕಾರಿ

- 20 ಲಕ್ಷ ರೊಟ್ಟಿ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

205 ಕ್ವಿಂಟಲ್ ಜಿಲೇಬಿ, 108 ಕ್ವಿಂಟಲ್ ಬೂಂದಿ, 375 ಕ್ವಿಂಟಲ್ ಮಾದಲಿ, 12 ಕ್ವಿಂಟಲ್ ಶೇಂಗಾ ಹೋಳಿಗೆ, 8.5 ಕ್ವಿಂಟಲ್ ರವೆ ಉಂಡಿ, ಕರದಂಟು 20 ಕ್ವಿಂಟಲ್, 1 ಲಕ್ಷ ಕರ್ಚಿಕಾಯಿ (ಸಿಹಿತಿನಿಸು), 6 ಕ್ವಿಂಟಲ್ ಬೇಸನ್ ಉಂಡೆ ಸೇರಿದಂತೆ ಸಿಹಿ ತಿನಿಸುಗಳು ಬರೋಬ್ಬರಿ 800 ಕ್ವಿಂಟಲ್‌, 1200 ಕ್ವಿಂಟಲ್ ಅಕ್ಕಿಯ ಅನ್ನ, 100 ಕ್ವಿಂಟಲ್ ತರಕಾರಿ ಸೇರಿ ಬರೋಬ್ಬರಿ 2300 ಕ್ವಿಂಟಲ್ ಖಾದ್ಯ.

ಇದು, ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ನಿಮಿತ್ತ 21 ದಿನಗಳ ಕಾಲ ನಡೆದ ಮಹಾದಾಸೋಹದಲ್ಲಿ ಬಳಕೆಯಾಗಿರುವ ಆಹಾರದ ಲೆಕ್ಕಾಚಾರ.

ಹೀಗೆ ಹೇಳುತ್ತಾ ಹೋದರೇ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಇದಲ್ಲದೆ ಕೆಜಿ ಲೆಕ್ಕದಲ್ಲಿ, ಎಡೆ ಲೆಕ್ಕದಲ್ಲಿ ಸಾವಿರಾರು ಭಕ್ತರು ಮಹಾದಾಸೋಹಕ್ಕೆ ಬಗೆ ಬಗೆ ತಿನಿಸು ತಂದು ಕೊಟಿದ್ದಾರೆ. ಅದ್ಯಾವುದನ್ನು ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ಅಷ್ಟು ಬಳಕೆಯಾಗಿದ್ದು, ಈ ವರ್ಷದ ಮಹಾದಾಸೋಹದಲ್ಲಿ ಇದರ ಲೆಕ್ಕಾಚಾರದಲ್ಲಿ ಬರೋಬ್ಬರಿ 15-16 ಲಕ್ಷ ಭಕ್ತರು ಪ್ರಸಾದ ಸೇವನೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

ವಿವಿಧ ತಿನಿಸು ಸೇರಿ ಬರೋಬ್ಬರಿ 1 ಸಾವಿರ ಕ್ವಿಂಟಲ್ ಸಿಹಿ ತಿನಿಸು ಬಳಕೆಯಾಗಿದೆ. ಇನ್ನು 1200 ಕ್ವಿಂಟಲ್ ಅಕ್ಕಿಯ ಅನ್ನ ಮಾಡಲಾಗಿದೆ. 100 ಕ್ವಿಂಟಲ್ ತರಕಾರಿ ಪಲ್ಯ ಮಾಡಲಾಗಿದೆ, 98 ಕೊಪ್ಪರಿಗೆ ಸಾಂಬಾರ್, 60 ಕ್ವಿಂಟಲ್ ಉಪ್ಪಿನಕಾಯಿ, 25 ಕ್ವಿಂಟಲ್ ಕೆಂಪುಚಟ್ನಿ, 25 ಕ್ವಿಂಟಲ್ ಪುಡಿ ಚಟ್ನಿ, 20 ಕೊಪ್ಪರಿಗೆ ಜುಣಕಾ, 10 ಕೊಪ್ಪರಿಗೆ ಬದನೇಕಾಯಿ ಪಲ್ಯ, 26 ಕೊಪ್ಪರಿಗೆ ಹೆಸರು ಬೇಳೆ ಪಲ್ಯ, ಜೊತೆಗೆ 20 ಲಕ್ಷ ರೊಟ್ಟಿ ಬಳಕೆಯಾಗಿವೆ. 8 ಕ್ವಿಂಟಲ್ ತುಪ್ಪ, 5 ಸಾವಿರ ಲೀಟರ್ ಹಾಲು ಬಳಕೆಯಾಗಿದೆ.

ಇದೆಲ್ಲವನ್ನು ಲೆಕ್ಕಾಚಾರ ಹಾಕಿದಾದ ಬರೋಬ್ಬರಿ 2300 ಕ್ವಿಂಟಲ್ ಖಾದ್ಯ ಬಳಕೆಯಾಗಿದೆ. ಇದು ದಾಖಲೆಯ ಲೆಕ್ಕಾಚಾರ ಎಂದೇ ಹೇಳಲಾಗುತ್ತದೆ.

15 ಸಾವಿರ ಜನರು:ಮಹಾದಾಸೋಹದಲ್ಲಿ ನಿತ್ಯವೂ ಸಾವಿರಾರು ಜನರು ಕೆಲಸ ಮಾಡಿದ್ದಾರೆ. ಅಡುಗೆ ಮಾಡಲು ಮುತ್ತು ಬಡಿಸಲು ಸೇರಿ ಬರೋಬ್ಬರಿ ಸಾವಿರಕ್ಕೂ ಅಧಿಕ ಭಕ್ತರು ಸೇವೆ ಮಾಡಿದ್ದಾರೆ. ಇವರ್ಯಾರು ಸಹ ಕೂಲಿಗಾಗಿ ಕೆಲಸ ಮಾಡಿಲ್ಲ. ಸೇವೆ ಮಾಡಿದ್ದಾರೆ.

ಬಂದಿದ್ದೆಲ್ಲವೂ ಬಳಕೆ:

ಮಹಾದಾಸೋಹಕ್ಕೆ ಬಂದಿದ್ದೆಲ್ಲವೂ ಬಳಕೆಯಾಗಿದೆ. ಅಲ್ವಸ್ವಲ್ಪ ಸಿಹಿತಿನಿಸು ಉಳಿದಿದ್ದು, ಈಗ ನಿತ್ಯವೂ ನಡೆಯುವ ದಾಸೋಹದಲ್ಲಿ ಬಳಕೆ ಮಾಡಲಾಗುತ್ತಿದೆ. ಮಹಾದಾಸೋಹವನ್ನು ಬಂದ್ ಮಾಡಿ, ದಾಸೋಹ ಪ್ರಾರಂಭಿಸಿದ್ದು, ಈಗಲೂ ಜಾತ್ರೆಯಂತೆಯೇ ಭಕ್ತರು ಆಗಮಿಸುತ್ತಿದ್ದಾರೆ. ಗುರುವಾರ ಬರೋಬ್ಬರಿ 30-40 ಸಾವಿರ ಭಕ್ತರು ಆಗಮಿಸಿದ್ದರು.

25 ಲಕ್ಷ ಭಕ್ತ:

ಜಾತ್ರಾ ಮಹೋತ್ಸವಕ್ಕೆ ಈ ವರ್ಷ ಬರೋಬ್ಬರಿ 25 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದಾರೆ ಎಂದು ಹೇಳಲಾಗುತ್ತದೆ. ರಥೋತ್ಸವದ ದಿನ 7-8 ಲಕ್ಷ ಭಕ್ತರು ಆಗಮಿಸಿದ್ದರು. ಮರು ದಿನ 2-3 ಲಕ್ಷ ಭಕ್ತರು ಆಗಮಿಸಿದ್ದರು. ಮೂರನೇ 1.5 ಲಕ್ಷ ಭಕ್ತರು ಜಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ಮೇಲೆ ನಿತ್ಯವೂ 70-80 ಸಾವಿರ ಭಕ್ತರು ಆಗಮಿಸುತ್ತಿದ್ದರು. ಇನ್ನು ರಜಾದಿನಗಳಲ್ಲಿ 1-2 ಲಕ್ಷ ಭಕ್ತರು ಆಗಮಿಸುತ್ತಿದ್ದರು. ಹೀಗೆ ಸುಮಾರು 25 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಕ್ತ ವರ್ಷದ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಲಾಗುತ್ತದೆ.ಮಹಾದಾಸೋಹದಲ್ಲಿ ಸುಮಾರು 2300 ಕ್ವಿಂಟಲ್ ಖಾದ್ಯ ಬಳಕೆಯಾಗಿದೆ ಎಂದು ಲೆಕ್ಕಾಚಾರ ಸಿಕ್ಕಿದ್ದು, ಇದು ಇನ್ನೂ ಅಧಿಕವಾಗಿಯೇ ಇದೆ. ಹೇಳದೆ ಕೊಟ್ಟು ಹೋಗುವವರು ಅನೇಕರು ಇದ್ದಾರೆ. ಇದ್ಯಾವುದು ಲೆಕ್ಕಕ್ಕೆ ಸಿಗುವುದಿಲ್ಲ ಎನ್ನುತ್ತಾರೆ ಉಸ್ತುವಾರಿ ಮಹಾದಾಸೋಹ ಪ್ರಕಾಶ ಚಿನಿವಾಲರ.