ಸಾರಾಂಶ
ಗದಗ: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು ೧೫ ಬೆಂಚ್ ರಚಿಸಿ ರಾಜಿಸಂಧಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಲ್ಲಿ ೨,೦೩೩ ಚಾಲ್ತಿ ಪ್ರಕರಣ ಹಾಗೂ ೨೧,೩೮೭ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು ೨೩,೪೨೦ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ಯರ್ಥಗೊಂಡ ಪ್ರಕರಣಗಳಲ್ಲಿ ೮ ಮೋಟಾರು ವಾಹನ ಅಪಘಾತ ಪ್ರಕರಣ, ೧೦೫ ಚೆಕ್‌ಬೌನ್ಸ್ ಪ್ರಕರಣ, ೪೦ ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣ, ೩೦೭ಅಸಲು ದಾವೆ ಪ್ರಕರಣ, ೩೭೪ ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣ, ೨೪ ವೈವಾಹಿಕ ಪ್ರಕರಣ, ೩೭ ವಿದ್ಯುಚ್ಚಕ್ತಿ ಪ್ರಕರಣ ಸೇರಿದಂತೆ ಒಟ್ಟು೨,೦೩೩ಚಾಲ್ತಿ ಪ್ರಕರಣಗಳನ್ನು ಒಟ್ಟು ₹ ೪೮,೧೩,೬೧,೫೫೩ಗಳ ಪರಿಹಾರ ಒದಗಿಸುವುದರ ಮೂಲಕ ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.
ಅದೇ ರೀತಿ ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಬ್ಯಾಂಕ್ ಪ್ರಕರಣ, ಬಿಎಸ್‌ಎನ್‌ಎಲ್, ಕಂದಾಯ ಅದಾಲತ್ ಪ್ರಕರಣಗಳು ಸೇರಿದಂತೆ ಒಟ್ಟು ೨೧,೩೮೭ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ₹ ೫,೨೭,೪೯,೬೨೮ ಗಳಿಗೆ ರಾಜಿ ಸಂಧಾನ ಮೂಲಕ ಮಾಡಲಾಗಿದೆ. ವಿಶೇಷವಾಗಿ ಗದುಗಿನ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ಹಾಗೂ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ೯ ಪ್ರಕರಣಗಳಲ್ಲಿ ದಂಪತಿಗಳನ್ನು ಪುನಃ ಒಂದುಗೂಡಿಸಲಾಯಿತು. ರೋಣ ನ್ಯಾಯಾಲಯದಲ್ಲಿ ೩ ಜೋಡಿ, ಲಕ್ಷ್ಮೇಶ್ವರ ನ್ಯಾಯಾಲಯದಲ್ಲಿ ೨ ಜೋಡಿ, ಮುಂಡರಗಿ ನ್ಯಾಯಾಲಯದಲ್ಲಿ ೨ ಜೋಡಿ ದಂಪತಿಗಳನ್ನು ಪುನಃ ಒಂದುಗೂಡಿಸಿ ಒಟ್ಟು ೧೬ ಜೋಡಿ ದಂಪತಿಗಳು ಈ ರಾಷ್ಟ್ರೀಯ ಲೋಕ ಅದಾಲತದಲ್ಲಿ ಪುನಃ ಒಂದುಗೂಡಿ ಹೋಗಿದ್ದು ವಿಶೇಷ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ. ಎಸ್.ಶೆಟ್ಟಿ, ೧ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಖಾದರಸಾಬ ಬೆನಕಟ್ಟಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಪ್ರೀತಿ ಸದ್ಗುರು ಸದರಜೋಶಿ, ಅಪರ ಹಿರಿಯ ದಿವಾಣಿ ನ್ಯಾಯಾಧೀಶ ಪ್ರಕಾಶ.ಸಿ. ಕುರುಬೆಟ್, ಪ್ರಧಾನ ದಿವಾಣಿ ನ್ಯಾಯಾಧೀಶ ಅರುಣ ಚೌಗಲೆ, ಪುಷ್ಪಾ ಜೋಗೋಜಿ, ಬೀರಪ್ಪ ಕಾಂಬಳೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿಪಾಟೀಲ, ಉಪಾಧ್ಯಕ್ಷ ಎ.ಎಂ. ಹದ್ಲಿ, ಪ್ರಧಾನ ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ, ಪಿ.ಬಿ.ಕಣಗಿನಹಾಳ, ವಿ.ಎಚ್. ಮೇರವಾಡೆ, ಸರ್ಕಾರಿ ಅಭಿಯೋಜಕಿ ಸವಿತಾ. ಎಂ.ಶಿಗ್ಲಿ, ಎಂ.ಎಂ.ಕುಕನೂರ, ಜಿ.ಬಿ.ನೀಲರಡ್ಡಿ ಹಾಗೂ ವಕೀಲ ವೃಂದ, ಸಂಧಾನಕಾರ ವಕೀಲರರು, ಪಕ್ಷಗಾರರು ಹಾಗೂ ನ್ಯಾಯಾಲಯಗಳ ಸಿಬ್ಬಂದಿವರ್ಗ ಇದ್ದರು.