ಸಾರಾಂಶ
- ಸಂಸದೆ ಡಾ.ಪ್ರಭಾ ಭರವಸೆ । ದಿನದ 24 ಗಂಟೆ ನೀರಿನ ಸೌಲಭ್ಯದ ದಾನಿಹಳ್ಳಿ ಪ್ರಥಮ, ಕನಗೊಂಡನಹಳ್ಳಿ ದ್ವಿತೀಯ ಗ್ರಾಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲೆಯ ಕನಿಷ್ಠ 100 ಗ್ರಾಮಗಳಿಗೆ ಆಗಸ್ಟ್ ಮಾಹೆಯೊಳಗಾಗಿ ದಿನದ 24 ಗಂಟೆ ನೀರು ಪೂರೈಸುವ ಗುರಿ ಹೊಂದಿದ್ದೇನೆ. ನ್ಯಾಮತಿ ತಾ. ದಾನಿಹಳ್ಳಿ 24*7 ನಿರಂತರ ಕುಡಿಯುವ ನೀರು ಪೂರೈಕೆಯಾಗುವ ಗ್ರಾಮವಾದರೆ, ದಾವಣಗೆರೆ ತಾ. ಕನಗೊಂಡನಹಳ್ಳಿ 2ನೇ ಗ್ರಾಮವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ತಾಲೂಕಿನ ಕನಗೊಂಡನಹಳ್ಳಿಯಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗ, ಜಲಜೀವನ ಮಿಷನ್, ಕರ್ನಾಟಕ ಸುಸ್ಥಿರ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಕಾರ್ಯಾಚರಣೆ ನಿರ್ವಹಣೆ ಸಾಂಸ್ಥೀಕರಣದ ಬಲವರ್ಧನೆ ಅಂಗವಾಗಿ 24*7 ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಗಸ್ಟ್ ತಿಂಗಳೊಳಗೆ ಎಲ್ಲ ಗ್ರಾಮಗಳಿಗೆ ನಿರಂತರ ನೀರೊದಗಿಸುವ ಕೆಲಸ ಮಾಡುತ್ತೇವೆ. ಈಗಾಗಲೇ ನ್ಯಾಮತಿ ತಾಲೂಕಿನ ದಾನಿಹಳ್ಳಿ ಜಿಲ್ಲೆಯ ಮೊದಲ ಗ್ರಾಮವಾದರೆ, ದಾವಣಗೆರೆ ತಾಲೂಕಿನ ಕನಗೊಂಡನಹಳ್ಳಿ ಜಿಲ್ಲೆಯ 2ನೇ ಗ್ರಾಮವಾಗಿದೆ. ರಾಜ್ಯದ 15ನೇ ಗ್ರಾಮವಾಗಿ ಗಮನ ಸೆಳೆಯುತ್ತಿದೆ. ದಿನದ 24 ಗಂಟೆ ನೀರು ಪೂರೈಕೆಯಾಗುವ ಜಿಲ್ಲೆಯ ಈ ಎರಡೂ ಗ್ರಾಮಗಳ ಜನರು ಸಹ ನೀರಿನ ಮಹತ್ವ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಶುದ್ಧ ಕುಡಿಯುವ ನೀರು ಪೂರೈಕೆಯಿಂದ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು. 24 ಗಂಟೆ ನೀರು ಸಿಗುವುದರಿಂದ ಮಿತವಾಗಿ ಬಳಸಬೇಕು. ನೀರು ವ್ಯರ್ಥವಾಗಿ ಹರಿದಂತೆ ತಡೆಯಬೇಕು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯಿಂದ ಕಾಲಕಾಲಕ್ಕೆ ನೀರಿನ ಪರೀಕ್ಷೆ ಮಾಡಿಸಿ, ನೀರು ಪೂರೈಸಲಾಗುವುದು. ಮನೆಯಲ್ಲಿ ಹೆಚ್ಚು ನೀರು ಸಂಗ್ರಹಿಸಿ, ವ್ಯರ್ಥ ಮಾಡಬಾರದು. ನೀರು ಸಂಗ್ರಹಿಸುವುದರಿಂದ ಡೆಂಘೀ ಸೇರಿದಂತೆ ಇತರೆ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಸಹ ಸಂಸದೆ ಡಾ.ಪ್ರಭಾ ಎಚ್ಚರಿಸಿದರು.
ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ಕನಗೊಂಡನಹಳ್ಳಿಯಲ್ಲಿ 340 ನಲ್ಲಿ (ನಳ) ಅಳವಡಿಸಲಾಗಿದೆ. ಇದಕ್ಕಾಗಿ ₹97 ಲಕ್ಷ ಖರ್ಚು ಮಾಡಲಾಗಿದೆ. ಇಲ್ಲಿನ ನೀರನ್ನು 13 ವಿವಿಧ ಮಾದರಿಯಲ್ಲಿ ಆಗಿಂದಾಗ್ಗೆ ಪರೀಕ್ಷೆ ಮಾಡಿ, ಪೂರೈಸಲಾಗುವುದು. ನೀರಿನ ಶುದ್ಧತೆ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನವೇ ಬೇಡ. ನೀರು ನಿರ್ವಹಣೆಯನ್ನು ಸ್ವಸಹಾಯ ಗುಂಪುಗಳೇ ನಿರ್ವಹಣೆ ಮಾಡಲಿವೆ ಎಂದು ತಿಳಿಸಿದರು.ವಿಶ್ವ ಬ್ಯಾಂಕ್ ಟಾಸ್ಕ್ ಪೋರ್ಸ್‌ನ ಮರಿಯಪ್ಪ ಕುಳ್ಳಪ್ಪ, ಲೀಡ್ ಬ್ಯಾಕ್ ಸಂಸ್ಥೆ ಸಿಇಒ ಅಜಯ್ ಸಿಂಹ, ಗ್ರಾಪಂ ಅಧ್ಯಕ್ಷೆ ಜಲಜಾಕ್ಷಿ, ವಿವಿಧ ಅಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.
- - -(ಬಾಕ್ಸ್) * ಹೆಚ್ಚು ಮಿನರಲ್ಸ್ ಇರುವ ನೀರು: ಡಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ನೀರು ಮಿತವಾದ ಸಂಪತ್ತು. ನಮ್ಮ ಸ್ವಂತ ವಾಹನ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ರೀತಿಯಲ್ಲಿ ಮನೆ ಮುಂದಿನ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನಲ್ಲಿ ಮುರಿದರೆ ಆಯಾ ಮನೆಯವರೇ ಖರೀದಿಸಿ ಅಳವಡಿಸಿಕೊಂಡು, ನೀರು ವ್ಯರ್ಥವಾಗಿ ಹರಿಯದಂತೆ ಜೀವಜಲ ಕಾಪಾಡಿಕೊಳ್ಳುವ ಜವಾಬ್ದಾರಿ ಹೊರಬೇಕು. ಬಾಟಲಿ ನೀರನ್ನು ಹೆಚ್ಚು ಉಪಯೋಗಿಸದೇ, ಮನೆಗೆ ಪೂರೈಸುವ ಶುದ್ಧ ಕುಡಿಯುವ ನೀರನ್ನೇ ಬಳಸಬೇಕು. ಏಕೆಂದರೆ, ಇದರಲ್ಲಿ ಹೆಚ್ಚು ಮಿನರಲ್ಸ್‌ಗಳಿದ್ದು, ಆರೋಗ್ಯಕ್ಕೆ ಪೂರಕವಾಗಿದೆ ಎಂದರು.
- - --7ಕೆಡಿವಿಜಿ3, 4.ಜೆಪಿಜಿ:
ದಾವಣಗೆರೆ ತಾಲೂಕಿನ ಕನಗೊಂಡನಹಳ್ಳಿಯಲ್ಲಿ ಸೋಮವಾರ 24*7 ಶುದ್ಧ ಕುಡಿಯುವ ನೀರು ಪೂರೈಸುವ ಕಾರ್ಯಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಓ ಸುರೇಶ ಇಟ್ನಾಳ್ ಇತರರು ಇದ್ದರು.