129 ಡ್ರಗ್ಸ್ ಬಳಕೆದಾರರ ವಿರುದ್ಧ 24 ಪ್ರಕರಣ ದಾಖಲು

| Published : Nov 22 2025, 02:15 AM IST

ಸಾರಾಂಶ

334ಕ್ಕೂ ಹೆಚ್ಚು ಡ್ರಗ್ಸ್ ಬಳಕೆದಾರರನ್ನು ನಗರದ ಕೆಎಂಸಿಆರ್‌ಐ ಹಾಗೂ ಧಾರವಾಡ ಡಿಮಾನ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ 129 ಜನ ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದ್ದು ಅವರ ವಿರುದ್ಧ 24 ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಯಿತು.

ಹುಬ್ಬಳ್ಳಿ:

ಡ್ರಗ್ಸ್, ಗಾಂಜಾ ತಡೆಗೆ ಸಮರ ಸಾರಿರುವ ಹು-ಧಾ ಮಹಾನಗರ ಪೊಲೀಸ್‌ ಆಯುಕ್ತಾಲಯ ಶುಕ್ರವಾರ 6ನೇ ಹಂತದ ವಿಶೇಷ ಕಾರ್ಯಾಚರಣೆ ನಡೆಸಿ 129 ಡ್ರಗ್ಸ್‌ ಬಳಕೆದಾರರ ವಿರುದ್ಧ 24 ಪ್ರಕರಣ ದಾಖಲಿಸಿದೆ.

ಮಹಾನಗರದ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶುಕ್ರವಾರ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು. 334ಕ್ಕೂ ಹೆಚ್ಚು ಡ್ರಗ್ಸ್ ಬಳಕೆದಾರರನ್ನು ನಗರದ ಕೆಎಂಸಿಆರ್‌ಐ ಹಾಗೂ ಧಾರವಾಡ ಡಿಮಾನ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ 129 ಜನ ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದ್ದು ಅವರ ವಿರುದ್ಧ 24 ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಯಿತು. ನಂತರ ಇವರನ್ನು ನಗರದ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಕರೆತಂದು ಡ್ರಗ್ಸ್ ಬಳಕೆದಾರರಿಗೆ ತಜ್ಞರಿಂದ ಕೌನ್ಸೆಲಿಂಗ್, ಅವರ ಪೋಷಕರಿಗೆ ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿಯ ಕುರಿತು ಅರಿವು ಮೂಡಿಸಲಾಯಿತು.

ಈ ವರೆಗೆ ಒಟ್ಟು 6 ಬಾರಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 2800ಕ್ಕೂ ಹೆಚ್ಚು ಶಂಕಿತ ಡ್ರಗ್ಸ್ ಬಳಕೆದಾರರ ವೈದ್ಯಕೀಯ ಪರೀಕ್ಷೆ ಮಾಡಿದ್ದು ಅದರಲ್ಲಿ ಪಾಸಿಟಿವ್ ಬಂದ 1270ಕ್ಕೂ ಹೆಚ್ಚು ಡ್ರಗ್ಸ್ ಬಳಕೆದಾರರ ಮೇಲೆ 245 ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.