ಬೇಬಿಬೆಟ್ಟದ ಜಾತ್ರಾ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 24 ಜೋಡಿಗಳು

| Published : Mar 03 2025, 01:45 AM IST

ಬೇಬಿಬೆಟ್ಟದ ಜಾತ್ರಾ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 24 ಜೋಡಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಆಡಂಬರದ ಮದುವೆಗಳಿಗೆ ಮಾರು ಹೋಗಿ ಪೋಷಕರು, ಜನರು ಹೆಚ್ಚಾಗಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಹಾಗಾಗಿ ಸರಳ ಮದುವೆಗೆ ಆಧ್ಯೆತೆ ನೀಡಬೇಕು, ಸರಳ ಮದುವೆ ಆಗುವುದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಲಿದೆ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದು, ಆಡಂಬರದ ಮದುವೆಗೆ ಕಡಿವಾಣ ಹಾಕಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪ್ರಸಿದ್ಧ ಬೇಬಿಬೆಟ್ಟದ ಭಾರೀ ದನಗಳ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ನಡೆದ ಉಚಿತ ಸರಳ ವಿವಾಹದಲ್ಲಿ 24 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ಎಲ್ಲಾ ವಧು-ವರರಿಗೆ ಚಿತ್ರ ನಟ ದರ್ಶನ್ ತೂಗದೀಪ ಅವರ ಪತ್ನಿ ವಿಜಯಲಕ್ಷ್ಮಿ ತಲಾ 5 ಗ್ರಾಂ ತೂಕದ ಮಾಂಗಲ್ಯ ವಿತರಣೆ ಮಾಡಿದರು. ಚಿತ್ರನಟ ಧನ್ವೀರ್ ವಾಚ್ ಹಾಗೂ ಹಾಸ್ಯನಟ ಚಿಕ್ಕಣ್ಣ ಅವರು ಸೀರೆ, ಪಂಚೆ ಶರ್ಟ್ ವಿತರಿಸಿದರು.

ಶ್ರೀರಾಮಾಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀಶಿವಬಸವ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸಮ್ಮುಖದಲ್ಲಿ ಬೆಳಗ್ಗೆ 10.10 ಗಂಟೆ ಶುಭ ಲಗ್ನದಲ್ಲಿ ನವ ವಧು-ವರರಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಾಂಗಲ್ಯ ಧಾರಣೆಯಾಗುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ನೂರಾರು ಸಂಖ್ಯೆ ಸಾರ್ವಜನಿಕರು ವಧುವರರಿಗೆ ಅಕ್ಷತೆ ಹಾಕುವ ಮೂಲಕ ಆಶೀರ್ವಾದಿಸಿದರು. ಸರಳ ಸಾಮೂಹಿಕದಲ್ಲಿ ಭಾಗವಹಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸರಳ ವಿವಾಹಕ್ಕೆ ಆದ್ಯತೆ ನೀಡಿ:

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಆಡಂಬರದ ಮದುವೆಗಳಿಗೆ ಮಾರು ಹೋಗಿ ಪೋಷಕರು, ಜನರು ಹೆಚ್ಚಾಗಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಹಾಗಾಗಿ ಸರಳ ಮದುವೆಗೆ ಆಧ್ಯೆತೆ ನೀಡಬೇಕು, ಸರಳ ಮದುವೆ ಆಗುವುದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಲಿದೆ ಎಂದರು.

ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದು, ಆಡಂಬರದ ಮದುವೆಗೆ ಕಡಿವಾಣ ಹಾಕಬೇಕು. ಸರಳ ಮದುವೆ ಆದರೆ ಸಮಾಜದಲ್ಲಿ ನಮ್ಮ ಬಗ್ಗೆ ಕೀಳು ಭಾವನೆಯಿಂದ ನೋಡುತ್ತದೆ ಎಂಬ ಭಾವನೆ ಕೆಲವರಲ್ಲಿದೆ. ಇಂತಹ ಕೀಳಿರಿಮೆ ಭಾವನೆ ತೆಗೆದುಹಾಕಬೇಕು ಎಂದರು.

ಸರಳ ಸಾಮೂಹಿಕ ವಿವಾಹಕ್ಕೆ ವಧು-ವರರಿಗೆ ಮಾಂಗಲ್ಯ, ವಾಚ್, ಬಟ್ಟೆ ವಿತರಣೆಯ ಸಂಪೂರ್ಣ ಜವಾಬ್ದಾರಿಯನ್ನು ಚಿತ್ರನಟ ದರ್ಶನ್ ವಹಿಸಿಕೊಂಡು ಅವರ ಪತ್ನಿ ವಿಜಯಲಕ್ಷ್ಮಿ ಅವರಿಂದ ನಡೆಸಿಕೊಟ್ಟಿದ್ದಾರೆ. ಅದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ. ಬೇಬಿಬೆಟ್ಟದ ಜಾತ್ರೆ ಪ್ರತಿ ವರ್ಷವು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಮುಂದಿನ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನವ ಜೋಡಿಗಳಿಗೆ ನೆಮ್ಮದಿ ದೊರಕಲಿ:

ವಿಜಯಲಕ್ಷ್ಮಿದರ್ಶನ್ ಮಾತನಾಡಿ, ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ದಾಂಪತ್ಯ ಜೀವನಕ್ಕೆ ಕಾಲಿಟುತ್ತಿರುವುದು ಒಳ್ಳೆಯ ನಿರ್ಧಾರ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳ ಜೀವನಕ್ಕೆ ಸುಖ, ನೆಮ್ಮದಿ ದೊರಕಲಿ, ರೈತರು ಮತ್ತು ರೈತ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.

ಹಾಸ್ಯ ನಟ ಚಿಕ್ಕಣ್ಣ ಮಾತನಾಡಿ, ಆಡಂಬರದ ಮದುವೆಗಳ ಮೂಲಕ ದುಂದು ವೆಚ್ಚ ಮಾಡುವುದಕ್ಕಿಂತ ಸರಳ ಮದುವೆ ಮಾಡಿಕೊಳ್ಳುವುದು ಉತ್ತಮ. ಮದುವೆ ಮಾಡಿಕೊಳ್ಳುವುದು ಮುಖ್ಯವಲ್ಲ. ಜೀವನದಲ್ಲಿ ಸಂಸಾರವನ್ನು ನೆಮ್ಮದಿಯಿಂದ ನಡೆಸಿಕೊಂಡು ಹೋಗುವುದು ಮುಖ್ಯ ಎಂದರು.

ನಾವು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಪ್ರಮುಖ ಕಾರಣ ಚಿತ್ರನಟ ದರ್ಶನ್ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು. ಚಿತ್ರನಟ ದರ್ಶನ್ ಅವರು ಕಳದೆ ವರ್ಷ ಭಾಗವಹಿಸಿ ಮುಂದಿನ ವರ್ಷವು ಬರುವುದಾಗಿ ಹೇಳಿದ್ದರು. ಆದರೆ, ಒಳ್ಳೆಯ ಮನಸ್ಸಿಗೆ ಒಳ್ಳೆಯದಾಗೋದಿಲ್ಲ ಅವರು ಬರಲು ಸಾಧ್ಯವಾಗದ ಕಾರಣ ಅವರ ಪತ್ನಿ ವಿಜಯಲಕ್ಷ್ಮಿ ಅವರು ಭಾಗವಹಿಸಿ ವಧು-ವರರಿಗೆ ಮಾಂಗಲ್ಯ ವಿತರಣೆ ಮಾಡಿದ್ದಾರೆ. ಮುಂದೆ ಎಲ್ಲರ ಜೀವನದಲ್ಲಿ ಒಳ್ಳೆಯದಾಗಲಿ ಎಂದರು.

ಸಮಾರಂಭದಲ್ಲಿ ಶ್ರೀರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀಶಿವಬಸವ ಸ್ವಾಮೀಜಿ, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್ ಕುಮಾರ್, ಇಒ ಲೋಕೇಶ್‌ಮೂರ್ತಿ, ಸಿಡಿಪಿಒ ಪೂರ್ಣಿಮಾ, ರೈತನಾಯಕಿ ಸುನೀತ ಪುಟ್ಟಣ್ಣಯ್ಯ, ರೈತ ಸಂಘದ ಅಧ್ಯಕ್ಷ ವಿಜಯಕುಮಾರ್, ಕೆ.ಟಿ.ಗೋವಿಂದೇಗೌಡ, ಕೆ.ಎಸ್.ದಯಾನಂದ್, ರೈತ ಮುಖಂಡ ರಾಘುವ ಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿದರು.