ಸಾರಾಂಶ
ಉಡುಪಿ : ವಿಧಾನ ಪರಿಷತ್ ಚುನಾವಣೆಯಿಂದ ನಿವೃತ್ತಿಯಾಗಲು ಕೆ. ರಘುಪತಿ ಭಟ್ ಅವರಿಗೆ 24 ಗಂಟೆಗಳ ಗಡುವು ನೀಡಲಾಗಿದೆ. ತಪ್ಪಿದಲ್ಲಿ ಅವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೂರು ಬಾರಿ ಶಾಸಕರಾಗಿರುವ ರಘುಪತಿ ಭಟ್ ಅವರಿಗೆ ಪಕ್ಷ ಅವಕಾಶ ನೀಡಿಲ್ಲ ಎನ್ನುವುದು ಸರಿಯಲ್ಲ. ಅಭ್ಯರ್ಥಿ ನೀಡಿಲ್ಲ ಎಂಬ ಕಾರಣಕ್ಕೆ ಕರಾವಳಿಗೆ ಅನ್ಯಾಯವಾಗಿದೆ ಎನ್ನುವುದನ್ನು ಒಪ್ಪಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಬಳಿಕ ಪಕ್ಷದ ಸೂಚನೆ ಅನುಸರಿಸಿ ಅಭ್ಯರ್ಥಿಗಳ ಗೆಲುವಿಗೆ ಯತ್ನಿಸಬೇಕು. ಅದು ಬಿಟ್ಟು ಬೇರೇನು ಮಾಡಿದರೂ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ಆದ್ದರಿಂದ ರಘುಪತಿ ಭಟ್ ಮೇಲೆ ಪಕ್ಷದ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದರು.
ಸಹಶಾಸಕ, ಸ್ನೇಹಿತ, ಪಕ್ಷದ ಹಿರಿಯ ಕಾರ್ಯಕರ್ತ ಎಂಬ ನೆಲೆಯಲ್ಲಿ ರಘುಪತಿ ಭಟ್ ಅವರಿಗೆ ಸಾಕಷ್ಟು ಹೇಳಿಯಾಗಿದೆ. ಪಕ್ಷದ ವರಿಷ್ಠರೂ ಮಾತುಕತೆ ನಡೆಸುತ್ತಿದ್ದಾರೆ. ಭಟ್ ಸ್ಪರ್ಧೆಯಿಂದ ಹಿಂದೆ ಸರಿಯುವ ವಿಶ್ವಾಸ ಇನ್ನೂ ಇದೆ ಎಂದು ಸುನಿಲ್ ಹೇಳಿದ್ದಾರೆ.