6 ತಿಂಗಳೊಳಗೆ ಉಳ್ಳಾಲಕ್ಕೆ 24 ಗಂಟೆ ಕುಡಿಯುವ ನೀರು ಯೋಜನೆ: ಖಾದರ್‌

| Published : Aug 16 2024, 12:55 AM IST

ಸಾರಾಂಶ

ಉಳ್ಳಾಲ ತಾಲೂಕು ಮಟ್ಟದ ಸ್ವಾತಂತ್ರ್ಯ ಆಚರಣೆಗೆ ಉಳ್ಳಾಲದ ಅಬ್ಬಕ್ಕ ವೃತ್ತದಲ್ಲಿ ವೀರ ರಾಣಿ ಅಬ್ಬಕ್ಕಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಥಸಂಚಲನಕ್ಕೆ ಚಾಲನೆ ನೀಡಿ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ 110 ಮೀಟರ್ ಎತ್ತರದ ಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಉಳ್ಳಾಲವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಿನ 30 ವರುಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನೀಲನಕಾಶೆ ಸಿದ್ಧಪಡಿಸಿದ್ದು, ಉಳ್ಳಾಲ ನಗರ ಪ್ರದೇಶಕ್ಕೆ ಮುಂದಿನ ಆರು ತಿಂಗಳಿನೊಳಗೆ 24 ಗಂಟೆ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆಗೊಳ್ಳಲಿದೆ. ಗ್ರಾಮೀಣ ಪ್ರದೇಶದ ಕುಡಿಯುವ ನೀರಿಗೆ 300 ಕೋಟಿ ರು. ಬಿಡುಗಡೆಯಾಗಿದ್ದು, ಮುಂದಿನ ಎರಡು ವರುಷದ ಒಳಗೆ ಈ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.

ಉಳ್ಳಾಲ ತಾಲೂಕು ಮಟ್ಟದ ಸ್ವಾತಂತ್ರ್ಯ ಆಚರಣೆಗೆ ಉಳ್ಳಾಲದ ಅಬ್ಬಕ್ಕ ವೃತ್ತದಲ್ಲಿ ವೀರ ರಾಣಿ ಅಬ್ಬಕ್ಕಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಥಸಂಚಲನಕ್ಕೆ ಚಾಲನೆ ನೀಡಿ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ 110 ಮೀಟರ್ ಎತ್ತರದ ಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಉಳ್ಳಾಲ ವಲಯ ಪ್ರಾಥಮಿಕ , ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಸುಮಾರು 16 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದರು. ಸ್ಕೌಟ್ಸ್, ಗೈಡ್ಸ್, ಕಬ್, ಬುಲ್‍ಬುಲ್, 7 ಶಾಲೆಗಳ ವಿದ್ಯಾರ್ಥಿ ವಾದ್ಯವೃಂದ, ಕೆಎಸ್‌ಆರ್‌ಪಿ, ಪೊಲೀಸ್‌ ವಾದ್ಯವೃಂದದೊಂದಿಗೆ ಉಳ್ಳಾಲ ಅಬ್ಬಕ್ಕ ಸರ್ಕಲ್‍ನಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್‌ ವರೆಗೆ ಸುಮಾರು ಒಂದು ಕಿ. ಮೀ. ಪಥ ಸಂಚಲನಲ್ಲಿ ಖಾದರ್ ಹೆಜ್ಜೆ ಹಾಕಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ತಹಸೀಲ್ದಾರ್ ಪುಟ್ಟರಾಜು, ಕಾರ್ಯನಿರ್ವಹಣಾಧಿಕಾರಿ ಗುರುದತ್ತ್, ಉಳ್ಳಾಲ ನಗರಸಭಾ ಪೌರಾಯುಕ್ತೆ ಮುಖ್ಯಾಧಿಕಾರಿ ವಾಣಿ ವಿ. ಆಳ್ವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ಶೈಲಾ ಜೆ. ಕಾರಗಿ, ದಕ್ಷಿಣ ವಲಯ ಕ್ರ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್.ಆರ್., ಸೊಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್, ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಯು. ಕೆ. ಮೋನು, ಎಸಿಪಿ ಧನ್ಯಾ ನಾಯಕ್, ಉಳ್ಳಾಲ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಎಚ್. ಎನ್. ಮತ್ತಿತರರು ಇದ್ದರು.

ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ, ಹಝ್ರತ್ ಆಂಗ್ಲ ಮಾಧ್ಯಮ ಶಾಲೆ ಉಳ್ಳಾಲ ಎರಡೂ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯಿತು.

ಶಿಕ್ಷಕ ತ್ಯಾಗಂ ಹರೇಕಳ ಮತ್ತು ಮೋಹನ್ ಶಿರ್ಲಾಲು, ಹಳೆಕೋಟೆ ಸೈಯ್ಯದ್ ಮದನಿ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ ನಿರ್ವಹಿಸಿದರು.