ಸಾರಾಂಶ
ಹಾವೇರಿ: ಸಮಾಜದ ಶಾಂತಿ ಹಾಗೂ ನೆಮ್ಮದಿಗಾಗಿ ದಿನದ ೨೪ ತಾಸು ಕರ್ತವ್ಯ ನಿರ್ವಹಿಸುವ ಪೊಲೀಸರ ಸೇವೆ ಶ್ಲಾಘನೀಯ ಎಂದು ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಎಂ.ಇ. ಮಣ್ಣಣ್ಣನವರ ಹೇಳಿದರು.ಕೆರಿಮತ್ತಿಹಳ್ಳಿ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವಿಶ್ರಾಂತಿ ರಹಿತವಾಗಿ ನಿರಂತರವಾಗಿ ಸಮಾಜದ ನೆಮ್ಮದಿಗಾಗಿ ಕಾರ್ಯನಿರ್ವಹಿಸುವ ಪೊಲೀಸರು ತಮ್ಮ ತಮ್ಮ ಆರೋಗ್ಯವನ್ನು ಕಾಯ್ದುಕೊಂಡು ಶಿಸ್ತಿನಿಂದ ಕೆಲಸ ಮಾಡಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ್ ಅವರು ವರದಿ ವಾಚನ ಮಾಡಿ, ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ದಿನವನ್ನು ಪ್ರತಿ ವರ್ಷ ಏ.೨ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲಾಗುತ್ತದೆ. ಪೊಲೀಸರ ಕಲ್ಯಾಣ ನಿಧಿಗಾಗಿ ಮಾರಾಟ ಮಾಡಿದ ಧ್ವಜದಿಂದ ಸಂಗ್ರಹಿತ ಹಣವನ್ನು ಕರ್ತವ್ಯ ನಿರತ ಹಾಗೂ ನಿವೃತ್ತ ಪೊಲೀಸರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ನಿವೃತ್ತರಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಸಿ, ಜಿಲ್ಲೆಯ ವಿವಿಧ ವಿಭಾಗಗಳ ಡಿ ವೈಎಸ್‌ಪಿಗಳು, ವಿವಿಧ ವಿಭಾಗಗಳ ಪಿಎಸ್‌ಐಗಳು ಮತ್ತು ಸಿಬ್ಬಂದಿಗಳು ಇದ್ದರು.