ಸಾರಾಂಶ
ಗದಗ: ಸಾರ್ವಜನಿಕರಿಗೆ ವಂಚನೆ ಮಾಡಿದ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಕಂಪನಿಗಳಿಗೆ ಹಣ ಸಂದಾಯ ಮಾಡಿದ ಜನರಿಗೆ ತಕ್ಷಣ ಮರುಪಾವತಿಸಬೇಕೆಂದು ಆಗ್ರಹಿಸಿ ಠಗಿ ಪೀಡಿತ ಜಮಾಕರ್ತ ಪರಿವಾರ ಸಂಘಟನೆಯಿಂದ ಭಾನುವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಿತು.
ಎಲ್ಲ ಕಂಪನಿಗಳ ಸಂತ್ರಸ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ ವೇದಿಕೆ ಸಂಘದ ಜಿಲ್ಲಾಧ್ಯಕ್ಷ ಹೇಮಂತಗೌಡ ಮಾಲಿಪಾಟೀಲ ಮಾತನಾಡಿ, ಹಲವು ವರ್ಷಗಳಿಂದ ಕೆಲ ಪಬ್ಲಿಕ್ ಹಾಗೂ ಪ್ರೈವೇಟ್ ಲಮಿಟೆಡ್ ಕಂಪನಿಗಳು ಜನರಿಂದ ಹಣ ವಸೂಲಿ ಮಾಡಿದ್ದು, ಅವಧಿ ಮುಗಿದರೂ ಕೂಡ ಈವರೆಗೂ ಜನರಿಗೆ ಹಣ ತಲುಪಿಸಿಲ್ಲ ಹಾಗೂ ಇನ್ನು ಕೆಲ ಕಂಪನಿಗಳು ಜನತೆಗೆ ಹಣ ನೀಡದೇ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಸಂದಾಯ ಮಾಡಿದ ಸಾರ್ವಜನಿಕರಿಗೆ ತಕ್ಷಣ ಹಣ ಮರಳಿಸಬೇಕು ಎಂದು ಒತ್ತಾಯಿಸಿದರು.
ಬಡ ಜನರು, ಕೂಲಿಕಾರ್ಮಿಕರು ಹಾಗೂ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳಲ್ಲಿ ಹಣ ತೊಡಗಿಸಿದ್ದು, ನಕಾರಾತ್ಮಕ ಉತ್ತರ ನೀಡುತ್ತ ಕಾಲಹರಣ ಮಾಡುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಂಪನಿಗಳ ವಿರುದ್ಧ ಮೃದು ಧೋರಣೆ ತೋರುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಕೆಲ ಕಂಪನಿಗಳು ತಮ್ಮ ಕಾರ್ಯಾಲಯ ಬಂದ್ ಮಾಡಿದ್ದು, ಕಳೆದ ಹತ್ತು ವರ್ಷಗಳಿಂದ ಜನರು ಕಚೇರಿಗಳ ಕಾರ್ಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಪಿಎಸಿಎಲ್, ಗುರುಟೇಕ್, ಸಮೃದ್ಧಿ ಜೀವನ್, ಈ ಸ್ಟೋರಿ ಇಂಡಿಯಾ, ಜನಸ್ನೇಹ, ಅಗ್ರಿಗೋಲ್ಟ್, ಗ್ರೀನ್ ಬರ್ಡ್ ಸೇರಿದಂತೆ ಇನ್ನು ಹತ್ತು ಹಲವಾರು ಕಂಪನಿಗಳು ಜನರಿಗೆ ಮೋಸ ಮಾಡಿದ್ದು, ಕಂಪನಿಗಳ ಸ್ಥಿರಾಸ್ತಿ ಜಪ್ತಿ ಮಾಡಿ ತಕ್ಷಣ ಜನರಿಗೆ ಹಣ ಮರುಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ವೀರಣ್ಣ ಚಾಲಕಬ್ಬಿ ಮಾತನಾಡಿ, ಸರ್ಕಾರ ವಂಚನೆ ಮಾಡಿದ ಕಂಪನಿಗಳ ಮಾಲೀಕರ ಹಾಗೂ ನಿರ್ದೇಶಕರನ್ನು ಬಂಧಿಸಿದ್ದು, ಆದರೆ ವಂಚನೆಗೊಳಗಾದ ಜನರಿಗೆ ನ್ಯಾಯ ಒದಗಿಸಿಲ್ಲ. ಕಂಪನಿಗಳು ಮಾಡಿದ ವಂಚನೆಗೆ ಸಾವಿರಾರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಮಠ ಕಳೆದುಕೊಂಡಿದ್ದಾರೆ. ದೇಶದ ಇತಿಹಾಸದಲ್ಲಿ ಇದು ಅತ್ಯಂತ ವಿಷಾದಕಾರಿ ಸಂಗತಿಯಾಗಿದೆ. ಬಡ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ, ಸಾಮಾನ್ಯ ಜನರ ನೋವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಹಸೀಲ್ದಾರ ಕಾರ್ಯಾಲಯದಲ್ಲಿ ಅರ್ಜಿ ತೆಗೆದುಕೊಂಡಿದ್ದು, ಆದರೆ ಹಣ ಪಾವತಿ ಪ್ರಕ್ರಿಯೆ ವಿಳಂಬವಾಗಿದೆ, ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ನೋಂದ ಜನರಿಗೆ ನ್ಯಾಯ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.ಹೇಮಂತ ಮಾಲಿಪಾಟೀಲ ಮಾತನಾಡಿ, ಠಗಿ ಪೀಡಿತ ಜಮಾಕರ್ತ ಪರಿವಾರ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಮದ್‌ಲಾಲ ಆಜಾದ ಹಾಗೂ ರಾಜ್ಯ ಘಟಕ ಅಧ್ಯಕ್ಷ ಅಪ್ಪಾಸಾಬ್ ಬುಗಡೆ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದು, ಸೆ. 4 ರಿಂದ ದೇಶಾದ್ಯಂತ ಜಿಲ್ಲಾಧಿಕಾರಿ ಕಾರ್ಯಾಲಯದ ಬಳಿ ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ನಮ್ಮ ನ್ಯಾಯುತ ಬೇಡಿಕೆ ಈಡೇರುವವರೆಗೂ ಸ್ಥಳ ಬಿಟ್ಟು ಕದಲುವದಿಲ್ಲ. ಯಾವುದೇ ತ್ಯಾಗಕ್ಕೂಸಿದ್ಧ ಎಂದರು.
ಶಿರಹಟ್ಟಿ ತಾಲೂಕಾಧ್ಯಕ್ಷ ಮಂಜುನಾಥ ಆರೆಪಲ್ಲಿ, ಸುರೇಶ ಕರ್ಜಗಿ, ಹೊನಕೇರಪ್ಪ ನರಸಾಪೂರ, ಸುಮಂಗಲಾ ರಾಠೋಡ, ಗಂಗಮ್ಮ ಹುರಳಿ, ಶಿವಕುಮಾರ ಮಠದ, ಅಶೋಕ ಕುರ್ತಕೋಟಿ, ಪುಪ್ಪಾ ಸುತ್ರಾವೆ, ಕಲಾವತಿ ನಾವಿ ಮತ್ತಿತರರು ಉಪಸ್ಥಿತರಿದ್ದರು.