ಗದಗ ಜಿಲ್ಲೆಯಲ್ಲಿ 24 ಮೈಕ್ರೋ ಫೈನಾನ್ಸ್ ಬ್ರ್ಯಾಂಚ್!

| Published : Jan 28 2025, 12:48 AM IST

ಗದಗ ಜಿಲ್ಲೆಯಲ್ಲಿ 24 ಮೈಕ್ರೋ ಫೈನಾನ್ಸ್ ಬ್ರ್ಯಾಂಚ್!
Share this Article
  • FB
  • TW
  • Linkdin
  • Email

ಸಾರಾಂಶ

ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನೂತನ ಕಾನೂನು ಜಾರಿಗೆ ತರಲು ಹೊರಟಿದೆ. ಆದರೆ, ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರ ತವರು ಜಿಲ್ಲೆ ಗದಗಿನಲ್ಲಿಯೇ 24 ಮೈಕ್ರೋ ಫೈನಾನ್ಸ್‌ಗಳು ಸಕ್ರಿಯವಾಗಿದ್ದು, ಇವುಗಳ ಹಾವಳಿಯಿಂದಾಗಿ ಹಲವ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನೂತನ ಕಾನೂನು ಜಾರಿಗೆ ತರಲು ಹೊರಟಿದೆ. ಆದರೆ, ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರ ತವರು ಜಿಲ್ಲೆ ಗದಗಿನಲ್ಲಿಯೇ 24 ಮೈಕ್ರೋ ಫೈನಾನ್ಸ್‌ಗಳು ಸಕ್ರಿಯವಾಗಿದ್ದು, ಇವುಗಳ ಹಾವಳಿಯಿಂದಾಗಿ ಹಲವ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲಿಯೂ ಈ ಮೈಕ್ರೋ ಫೈನಾನ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ 300ಕ್ಕೂ ಅಧಿಕ ಜನರು ಕೆಲಸ ನಿರ್ವಹಿಸುತ್ತಿದ್ದು, ಅವರ ಮೂಲಕವೇ ಜನರಿಗೆ ಸಣ್ಣ ಸಣ್ಣ ಸಾಲ ನೀಡುತ್ತಿದ್ದಾರೆ. ಮುಖ್ಯವಾಗಿ ಸಾಲ ಸಣ್ಣದಿದ್ದರೂ ಅದರ ಬಡ್ಡಿಯೇ ದೊಡ್ಡದಾಗಿದ್ದು, ಇದರಿಂದಾಗಿ ಜನರ ಶ್ರಮದ ಹಣವೆಲ್ಲಾ ಮೈಕ್ರೋ ಫೈನಾನ್ಸ್‌ಗಳ ಪಾಲಾಗುತ್ತಿದೆ.

24 ಬ್ರ್ಯಾಂಚ್‌ ಸಕ್ರಿಯ: ಜಿಲ್ಲೆಯಲ್ಲಿ ವಿವಿಧ ಮೈಕ್ರೋ ಫೈನಾನ್ಸ್ ಅನುಮತಿ ಹೊಂದಿರುವ ವಿವಿಧ ಕಂಪನಿಗಳ 24 ಬ್ರ್ಯಾಂಚ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಪ್ರತಿದಿನವೂ ಸಾಲ ವಿತರಣೆ ಮತ್ತು ಮರುಪಾವತಿ ಜಾರಿಯಲ್ಲಿರುತ್ತದೆ. ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆಯುವವರು ಪ್ರತಿ ವಾರವೂ ಸಾಲ ಮರುಪಾವತಿಸಬೇಕು. ಆದರೆ ಸಾಲ ಮರುಪಾವತಿಸುವವರು ಹೇಳುವ ಪ್ರಕಾರ, ಸಾಲ ಮರುಪಾವತಿ ಮಾಡುವವರಿಗೆ ಅಸಲು ಯಾವುದು, ಬಡ್ಡಿ ಯಾವುದು ಎಂದು ತಿಳಿಯದಂತೆ ಅವರನ್ನು ಗೊಂದಲದಲ್ಲಿ ಇಟ್ಟಿರುತ್ತಾರೆ.

125 ಸ್ಥಳಗಳಿಂದ ಆಪರೇಟ್: ಜಿಲ್ಲೆಯ ದೊಡ್ಡ- ಸಣ್ಣ ಗ್ರಾಮಗಳು ಸೇರಿದಂತೆ ಒಟ್ಟು 125 ಸ್ಥಳಗಳಿಂದ ಮೈಕ್ರೋ ಫೈನಾನ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ತೀವ್ರ ಹಣಕಾಸಿನ ತೊಂದರೆ ಎದುರಿಸುವ, ನಿತ್ಯವೂ ರಸ್ತೆ ಬದಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ನಡೆಸುವವರನ್ನೇ ಟಾರ್ಗೆಟ್ ಮಾಡುತ್ತಾರೆ. ಸಾಲ ಕೊಡುವ ಸಂದರ್ಭದಲ್ಲಿ ಕೇವಲ ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್ ಪಾಸ್ ಬುಕ್ ಮಾತ್ರವೇ ಗಮನಿಸುತ್ತೇವೆ. ಯಾವುದೇ ರೀತಿಯ ಭದ್ರತೆ ಇಲ್ಲದೇ ಸಾಲವನ್ನು ತಕ್ಷಣವೇ ನೀಡುತ್ತೇವೆ ಎಂದು ಸಿಬ್ಬಂದಿ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಬಡ ವ್ಯಾಪಾರಸ್ಥರು ಹಾಗೂ ಮನೆಯಲ್ಲಿರುವ ಅನರಕ್ಷಸ್ಥ ಮಹಿಳೆಯರೇ ಬಲಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಕಾನೂನು ಜಾರಿಯಾದರೆ ಸಾಲದು, ಅದು ಸಮರ್ಪಕ ಪಾಲನೆಯಾಗಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯ.

ಅನಧಿಕೃತ ಸಂಸ್ಥೆ: ಜಿಲ್ಲೆಯಲ್ಲಿ ಅಧಿಕೃತ ಮೈಕ್ರೋ ಫೈನಾನ್ಸ್‌ಗಳಿಗಿಂತ ಅನಧಿಕೃತ ಫೈನಾನ್ಸ್‌ಗಳ ಸಂಖ್ಯೆಯೇ ಹೆಚ್ಚಾಗಿವೆ. ಗದಗ -ಬೆಟಗೇರಿ ಅವಳಿ ನಗರದಲ್ಲಿ ಪ್ರತಿ 20 ಜನರಲ್ಲಿ ಒಬ್ಬ ಬಡ್ಡಿ ದಂಧೆಯನ್ನೇ ಪ್ರಮುಖ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಅದರಲ್ಲಿಯೂ ಆಸ್ತಿ ಮತ್ತು ಬಂಗಾರದ ಗಿರವಿ ಸಾಲದ ಹೆಸರಿನಲ್ಲಿ ವ್ಯಾಪಕ ಶೋಷಣೆ ನಡೆಯುತ್ತಿದ್ದು, ಸಾವಿರಾರು ಬಡವರು ಬಡ್ಡಿ ಕಟ್ಟಲು ಆಗದೇ ಆಸ್ತಿಗಳನ್ನೇ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಶೋಷಣೆಗೊಳಗಾದವರು. ಕಠಿಣ ಕ್ರಮ: ಮೈಕ್ರೋ ಫೈನಾನ್ಸ್‌ಗಳಿಂದ ಜಿಲ್ಲೆಯಲ್ಲಿ ಆಗಿರುವ ಆಗುತ್ತಿರುವ, ಆಗಬಹುದಾದ ಸಮಸ್ಯೆಗಳನ್ನು ತಡೆಗಟ್ಟಲು ನಿಟ್ಟಿನಲ್ಲಿ ಈಗಾಗಲೇ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ 24 ಮೈಕ್ರೋ ಫೈನಾನ್ಸ್ ಬ್ರ್ಯಾಂಚ್‌ಗಳಿದ್ದು, ಆರ್‌ಬಿಐ, ಸಹಕಾರಿ ಆ್ಯಕ್ಟ್ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಮೈಕ್ರೋ ಫೈನಾನ್ಸ್‌ಗಳಲ್ಲಿ ಕಾರ್ಯ ನಿರ್ವಹಿಸುವ ಪ್ರತಿನಿಧಿಗಳಿಗೆ ತಿಳಿವಳಿಕೆ ನೀಡಿ, ಕಾನೂನು, ನಿಯಮ ಪ್ರಕಾರ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಸಾಲ ವಸೂಲಿ ನೆಪದಲ್ಲಿ ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದು ಗದಗ ಎಸ್ಪಿ ಬಿ.ಎಸ್. ನೇಮಗೌಡ್ರ ಹೇಳಿದರು.