ಈ ವರ್ಷ 24 ಮಂದಿಗೆ ಕೆಎಫ್‍ಡಿ ಸೋಂಕು: ಡಾ.ಅನಿಕೇತನ್

| Published : Jun 12 2024, 12:31 AM IST

ಸಾರಾಂಶ

ತೀರ್ಥಹಳ್ಳಿ ಪಟ್ಟಣದ ಇಲ್ಲಿನ ಗ್ರಾಮೀಣಾಭಿವೃದ್ದಿ ಸಭಾಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿತಾಲೂಕಿನ ಸರ್ಕಾರಿ ಜೆಸಿ ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 220 ಮಂದಿ ಸಿಬ್ಬಂದಿ ಪೈಕಿ 113 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 62 ಸಿಬ್ಬಂದಿ ಕೊರತೆ ಇದ್ದು 32 ಹೊರಗುತ್ತಿಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಅನಿಕೇತನ್ ತಿಳಿಸಿದರು.

ಇಲ್ಲಿನ ಗ್ರಾಮೀಣಾಭಿವೃದ್ದಿ ಸಭಾಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಈ ವರ್ಷ ತಾಲೂಕಿನಲ್ಲಿ 24 ಮಂದಿಗೆ ಕೆಎಫ್‍ಡಿ ಸೋಂಕು ತಗುಲಿದ್ದು ಮಣಿಪಾಲ ಆಸ್ಪತ್ರೆ ಸೇರಿದಂತೆ ಸೂಕ್ತ ಚಿಕಿತ್ಸೆ ನೀಡಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಹಾರ್ಟ್ ಅಟ್ಯಾಕ್‍ನಂತ ತುರ್ತು ಚಿಕಿತ್ಸೆ ಅಗತ್ಯದ ಸಂದರ್ಭಗಳಲ್ಲಿ ರೋಗಿಯ ಜೀವ ರಕ್ಷಣೆಗೆ ಪ್ರಾಶಸ್ತ್ಯ ನೀಡುವ ಸಲುವಾಗಿ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ವಾಹನಗಳ ಕೆಲವೊಂದು ನಿಬಂಧನೆಗಳನ್ನು ಸರ್ಕಾರ ಸಡಿಲಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಗುಣಮಟ್ಟದ ತಪಾಸಣೆ ಬಗ್ಗೆ ಗ್ರಾಪಂ ಪಿಡಿಒಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಆದೇಶಿಸಿದರು. ಕಳಪೆ ದರ್ಜೆ ನೀರನ್ನು ಬಳಸಿ ಐಸ್ ಕ್ರೀಮ್ ಮಾರಾಟ ಮಾಡುವವರ ಬಗ್ಗೆ ಗಮನ ಹರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಆ್ಯಂಬುಲೆನ್ಸ್ ನಿಯಮ ಸಡಿಲ ಅಗತ್ಯ:

ಆ್ಯಂಬುಲೆನ್ಸ್ ವಾಹನಗಳಿಗೆ ವ್ಯಾಪ್ತಿ ನಿಗದಿ ಪಡಿಸಿದ ಫಲವಾಗಿ ಈಚೆಗೆ ಹೊಸನಗರ ತಾಲೂಕಿನ ನಗರದ ಓರ್ವ ರೋಗಿ ಸಕಾಲಕ್ಕೆ ಆಸ್ಪತ್ರೆ ತಲುಪಲಾಗದೇ ದಾರಿ ಮಧ್ಯೆ ಮೃತನಾದ ಘಟನೆ ನಡೆಯುತ್ತಿದೆ. ಹಾರ್ಟ್ ಅಟ್ಯಾಕ್‍ನಂತ ತುರ್ತು ಚಿಕಿತ್ಸೆ ಅಗತ್ಯದ ಸಂದ ರ್ಭಗಳಲ್ಲಿ ರೋಗಿಯ ಜೀವ ರಕ್ಷಣೆಗೆ ಪ್ರಾಶಸ್ತ್ಯ ನೀಡುವ ಸಲುವಾಗಿ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ವಾಹನಗಳ ಕೆಲವೊಂದು ನಿಬಂಧನೆಗಳನ್ನು ಸರ್ಕಾರ ಸಡಿಲಗೊಳಿಸಬೇಕಿದೆ ಎಂದು ತಿಳಿಸಿದರು.

ತಾಲೂಕಿನಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು ಜನವರಿಯಿಂದ ಜೂನ್ ಮೊದಲ ವಾರದವರೆಗೆ 271 ಮಿಮಿ ಮಳೆಯಾಗಿದ್ದು, ಇದು ಈ ಅವಧಿಯ ವಾಡಿಕೆಗಿಂತ 97 ಮಿಮಿ ಅಧಿಕ ಮಳೆಯಾಗಿದೆ. ತಾಲೂಕಿನಲ್ಲಿ ಕೃಷಿ ಇಲಾಖೆಯ ವತಿಯಿಂದ ಮುಂಗಾರು ಕೃಷಿಗೆ ಪೂರಕವಾದ ಸಿದ್ದತೆ ನಡೆದಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ತಿಳಿಸಿದರು. ಇಲಾಖೆಯಲ್ಲಿ 1266.71 ಟನ್ ರಸಗೊಬ್ಬರ ದಾಸ್ತಾನಿದೆ. 296 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯ್ತಿ ದರದಲ್ಲಿ ಬೀಜ, ಕೀಟನಾಶಕಗಳನ್ನು ವಿತರಣೆ ಮಾಡಲಾಗುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 2018-19 ರಿಂದ ಈವರೆಗೆ ತಾಲೂಕಿನ 17,540 ಮಂದಿ ಫಲಾನುಭವಿಗಳ ವೈಯಕ್ತಿಕ ಖಾತೆಗೆ ಒಟ್ಟು 60.37 ಕೋಟಿ ರು. ಜಮಾ ಆಗಿದೆ. ಉಳಿದಂತೆ ಕೃಷಿ ಯಾಂತ್ರೀಕರಣ ಘಟಕಗಳಾದ ಪವರ್ ಟಿಲ್ಲರ್, ತುಂತುರು ನೀರಾವರಿ, ಕೃಷಿ ಸಂಸ್ಕರಣೆ ಯೋಜನೆಯಡಿ ಬರುವ ಸವಲತ್ತುಗಳನ್ನು ಲಭ್ಯತೆಯ ಆಧಾರದಲ್ಲಿ ಕೆ-ಕಿಸಾನ್ ತಂತ್ರಾಂಶದ ಮೂಲಕ ವಿತರಿಸಲಾಗುತ್ತಿದೆ ಎಂದರು.

ಶಿಕ್ಷಕರ ಕೊರತೆ ನೀಗಿಸಿ: ತಾಲೂಕಿನಲ್ಲಿ ಪ್ರಾಥಮಿಕ ತರಗತಿಗಳಲ್ಲಿ 105, ಪ್ರೌಡಶಾಲೆಗಳಿಗೆ 41 ಶಿಕ್ಷಕರ ಕೊರತೆ ಇದೆ. ಜೈಪುರ ಮಳಲಿ ಸೇರಿ 3 ಕಿರಿಯ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸಾಧ್ಯತೆಯಿದೆ. ಸಮವಸ್ತ್ರ ಪೂರೈಕೆಯಾಗಿದ್ದು ಶೇ.85 ರಷ್ಟು ಪಠ್ಯ ಪುಸ್ತಕ ಬಂದಿದೆ. ಶಿಕ್ಷಣ ಕ್ಷೇತ್ರ ಸಂಪನ್ಮೂಲ ಕಚೇರಿ ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿದೆ. ಇಲಾಖೆಗೆ ವಾಹನದ ತೀರಾ ಅಗತ್ಯವಿದೆ ಎಂದು ಬಿಇಒ ವೈ.ಗಣೇಶ್ ತಿಳಿಸಿದರು. ತಾಲೂಕಿನಲ್ಲಿ ಗಾಂಜಾ ಸೇವನೆ ಹೆಚ್ಚುತ್ತಿದ್ದು ವಿದ್ಯಾರ್ಥಿಗಳು ಮತ್ತು ಯುವಕರು ಹೆಚ್ಚು ವ್ಯಸನಿಗಳಾಗುತ್ತಿದ್ದಾರೆ ಎಂದು ಇನ್ಸ್‌ಪೆಕ್ಟರ್ ಅಶ್ವಥ್‍ಗೌಡ ತಿಳಿಸಿದರು. ಗೃಹಜ್ಯೋತಿ ಯೋಜನೆಯಲ್ಲಿ ಮೇ 24 ರವರೆಗೆ 1,08,75,984 ರೂ ಸಬ್ಸಿಡಿ ನೀಡಲಾಗಿದೆ ಎಂದು ಮೆಸ್ಕಾಂ ಎಇಇ ಪ್ರಶಾಂತ್ ತಿಳಿಸಿದರು. ವೇದಿಕೆಯಲ್ಲಿ ತಾಪಂ ಆಡಳಿತಧಿಕಾರಿ ಗಣೇಶ್, ಇಒ ಎಂ.ಶೈಲಾ, ತಹಸೀಲ್ದಾರ್ ಜಕ್ಕನಗೌಡರ್ ಇದ್ದರು.