ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಚುರ್ಚಿಹಾಳ ಹಾಗೂ ಡಂಬಳ ಗ್ರಾಮದ ಮಧ್ಯೆ ರೈತರ ಪಾಲಿಗೆ ಸೋಲಾರ್ ವಿದ್ಯುತ್ ಕಂಪನಿ ಕಂಟಕಪ್ರಾಯವಾಗಿ ಪರಿಣಮಿಸಿದ್ದು, ಈ ಕಂಪನಿ ಸೋಲಾರ್ ವಿದ್ಯುತ್ ಪ್ಯಾನಲ್ ಅಳವಡಿಕೆಗಾಗಿ 2400 ಮರಗಳನ್ನು ಕತ್ತರಿಸಿದೆ.2024ನೇ ಸಾಲಿನಲ್ಲಿ ಚುರ್ಚಿಹಾಳ ಹಾಗೂ ಡಂಬಳ ಗ್ರಾಮದ ಸರಹದ್ದಿನಲ್ಲಿ ಹಿರೋ ಕಂಪನಿ ಸೋಲಾರ್ ವಿದ್ಯುತ್ ಉತ್ಪಾದನೆಗಾಗಿ ರೈತರಿಂದ 800 ಎಕರೆ ಭೂಮಿಯನ್ನು ಎಕರೆಗೆ ವಾರ್ಷಿಕ ₹30 ಸಾವಿರದಂತೆ 30 ವರ್ಷ ಗುತ್ತಿಗೆ ಪಡೆದಿದೆ. ಈ ಜಮೀನುಗಳಲ್ಲಿ ಮಾವು, ಬೇವು, ತೆಂಗು ಸೇರಿದಂತೆ ನಾನಾ ಬಗೆಯ ಗಿಡ ಮರಗಳಿದ್ದವು.
ಸೋಲಾರ್ ಪ್ಯಾನಲ್ ಅಳವಡಿಕೆ ವೇಳೆ ಪ್ರತಿ ಎಕರೆಗೆ ಸರಾಸರಿ 3 ಮರಗಳಂತೆ ಅಂದಾಜು 2400 ಮರಗಳ ಮಾರಣಹೋಮ ಮಾಡಲಾಗಿದೆ. ಇದಕ್ಕೆ ಸರ್ಕಾರ ಅಥವಾ ಅರಣ್ಯ ಇಲಾಖೆಯಿಂದಾಗಲಿ ಪರವಾನಗಿ ಪಡೆಯದೆ ಇಷ್ಟೊಂದು ಸಂಖ್ಯೆಯ ಮರಗಳನ್ನು ಕಡಿಯಲಾಗಿದೆ. ಈ 2400 ಮರಗಳು ವರ್ಷಕ್ಕೆ ಸುಮಾರು 2.4 ಲಕ್ಷದಿಂದ 2.88 ಲಕ್ಷ ಕೆಜಿ ಆಮ್ಲಜನಕ ಉತ್ಪಾದಿಸುತ್ತಿದ್ದವು ಎಂದು ತಜ್ಞರು ಹೇಳುತ್ತಾರೆ.ಇದೇ ಹಿರೋ ಕಂಪನಿ ವಿದ್ಯುತ್ ಕಂಬಗಳ ಅಳವಡಿಕೆ ಮಾಡುವಾಗ ಅಂದಾಜು 1000 ಮರಗಳನ್ನು ಕಡಿದಿದೆ. ಹೀಗೆ ಸಾವಿರಾರು ಮರಗಳನ್ನು ಕಡಿದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ರೈತರ ಜಮೀನುಗಳಲ್ಲಿನ ಮರ ಕಡಿಯುವಾಗ ರೈತರಿಗೆ ಪರಿಹಾರವನ್ನೂ ನೀಡಿಲ್ಲ.
ಪರಿಹಾರ ಯಾರ ಕಿಸೆಗೆ?: ಕಂಪನಿಯ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ರೈತರೇ ಮರಗಳನ್ನು ಕಡಿದಿದ್ದಾರೆ. ರೈತರಿಗೆ ಪ್ರತಿ ಮರಕ್ಕೆ ಅಂದಾಜು ₹45 ಸಾವಿರದಂತೆ ಪರಿಹಾರವನ್ನು ಮಧ್ಯವರ್ತಿಗಳ ಮೂಲಕ ನೀಡಿದ್ದೇವೆ ಎನ್ನುತ್ತಾರೆ. ಆದರೆ ರೈತರು ಇಲ್ಲಿಯವರೆಗೆ ಯಾವುದೇ ಪರಿಹಾರವನ್ನೂ ನೀಡಿಲ್ಲ ಎಂದು ಹೇಳುತ್ತಾರೆ. 3000ಕ್ಕೂ ಹೆಚ್ಚು ಮರಗಳನ್ನು ಕಡಿದಿರುವ ಕಂಪನಿಯವರು ಮತ್ತೆ ಗಿಡಗಳನ್ನು ಹಚ್ಚಿ ಬೆಳೆಸುವಂತೆ ಆದೇಶಿಸಬೇಕು. ಆ ಮೂಲಕ ಈ ಭಾಗದ ಪ್ರಾಣಿ, ಪಕ್ಷಿಗಳ ಹಿತರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರಾದ ಬಸವರಾಜ ಓಲಿ, ಬಸಪ್ಪ ಗದಗಿನ, ಸೋಮಪ್ಪ ಓಲಿ, ಅಬ್ದುಲ್‌ಸಾಬ್ ಕಿರೋಸೂರ, ಹನುಮಂತಪ್ಪ ಕೊರವರ ಆಗ್ರಹಿಸಿದ್ದಾರೆ.
ಪರಿಹಾರ ನೀಡಿಲ್ಲ: ಈಗಾಗಲೆ ಸೋಲಾರ್ ಪ್ಯಾನಲ್ ಅಳವಡಿಕೆ ಮಾಡುವಾಗ ಮತ್ತು ಕಂಬಗಳ ಅಳವಡಿಸುವಾಗ ಜಮೀನಿನಲ್ಲಿ ಇರುವ ಮರಗಳನ್ನು ಕಡಿಯುವ ಮುನ್ನ ಅರಣ್ಯ ಇಲಾಖೆಗೆ ತಿಳಿಸಲಾಗುವುದು, ಅಲ್ಲದೇ ಅದಕ್ಕೆ ಸೂಕ್ತ ಪರಿಹಾರ ಕೊಡುತ್ತೇವೆ ಎಂದಿದ್ದರು. ಆದರೆ ಇಲ್ಲಿಯವರೆಗೂ ಪರಿಹಾರವನ್ನು ನೀಡಿಲ್ಲ ಎಂದು ಗ್ರಾಮಸ್ಥರಾದ ಈಶ್ವರಪ್ಪ ಕಣವಿ ಎಂದರು.ಸೂಕ್ತ ಕ್ರಮ: ಹಿರೋ ಸೋಲಾರ್ ಕಂಪನಿಯವರು ಮರಗಳನ್ನು ಕಡಿದಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅರಣ್ಯ ಇಲಾಖೆಯ ಕಾನೂನಿನ ಪ್ರಕಾರ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಆರ್‌ಎಫ್‌ಒ ಮಂಜುನಾಥ ಮೇಗಲಮನಿ ತಿಳಿಸಿದರು.