ಸಾರಾಂಶ
ಬ್ಯಾಡಗಿ ತಾಲೂಕು ಕಾನೂನು ಸೇವೆಗಳ ಸಮಿತಿ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಹಾಗೂ ಕಿರಿಯ ದಿವಾಣಿ ನ್ಯಾಯಾಲಯದಲ್ಲಿ ಬಾಕಿಯಿದ್ದ ಒಟ್ಟು ₹1.78 ಕೋಟಿ ಮೊತ್ತದ 2425 ಪ್ರಕರಣ ಇತ್ಯರ್ಥಗೊಳಿಸಲಾಯಿತು.
ಬ್ಯಾಡಗಿ: ತಾಲೂಕು ಕಾನೂನು ಸೇವೆಗಳ ಸಮಿತಿ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಹಾಗೂ ಕಿರಿಯ ದಿವಾಣಿ ನ್ಯಾಯಾಲಯದಲ್ಲಿ ಬಾಕಿಯಿದ್ದ ಒಟ್ಟು ₹1.78 ಕೋಟಿ ಮೊತ್ತದ 2425 ಪ್ರಕರಣಗಳು ರಾಜಿ ಸಂಧಾನದ ಮೂಲಕ ಸೌಹಾರ್ದಯತವಾಗಿ ಇತ್ಯರ್ಥಗೊಳಿಸಲಾಯಿತು.
ಈ ಕುರಿತು ಪ್ರಕಟಣೆ ನೀಡಿರುವ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಮತ್ತು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಅಮೋಲ್ ಜೆ. ಹಿರಿಕುಡೆ, ಸಿವಿಲ್ ಮತ್ತು ಕ್ರಿಮಿನಲ್ ಎರಡೂ ವಿಭಾಗ ಸೇರಿದಂತೆ ಬಾಕಿಯಿದ್ದ ಬ್ಯಾಂಕ್ ವಸೂಲಾತಿ ಪ್ರಕರಣ, ಚೆಕ್‌ಬೌನ್ಸ್, ಮೋಟಾರು ವಾಹನ ಅಪಘಾತ, ಸಿವಿಲ್ ವ್ಯಾಜ್ಯಗಳು, ಅಮಲ್ದಾರಿ, ಜೀವನಾಂಶ, ಕೌಟುಂಬಿಕ ಕಲಹ, ಗೃಹಕೃತ್ಯ, ದೌರ್ಜನ್ಯ, ಲಘು ಅಪರಾಧ, ವ್ಯಾಜ್ಯ ಪೂರ್ವಸಾಲ ವಸೂಲಾತಿ, ಪ್ರಕರಣ ಸೇರಿದಂತೆ ರಾಜೀ ಸಂಧಾನದ ಒಟ್ಟು ₹1.78 ಕೋಟಿ ಮೊತ್ತದ ಪ್ರಕರಣ ಇತ್ಯರ್ಥಗೊಳಿಸಲಾಯಿತು.1774 ವ್ಯಾಜ್ಯಪೂರ್ವ ಪ್ರಕರಣ ಇತ್ಯರ್ಥ: ಹಿರಿಯ ದಿವಾಣಿ ನ್ಯಾಯಾಲಯದಲ್ಲಿನ 904 ಹಾಗೂ ಕಿರಿಯ ದಿವಾಣಿ ನ್ಯಾಯಾಲಯದಲ್ಲಿನ 870 ಸೇರಿದಂತೆ ಒಟ್ಟು ಒಟ್ಟು 1774 ವ್ಯಾಜ್ಯಪೂರ್ವ ಮತ್ತು ರಾಜೀಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.
ಮತ್ತೆ ಒಂದಾದ ದಂಪತಿ: ದಿವಾಣಿ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಗಂಡ ಜಯಪ್ಪ ಶೇಖಪ್ಪ ನೀಲಗುಂದ ವಿರುದ್ಧ ಅರ್ಜಿ ಸಲ್ಲಿಸಿದ್ದ ಪೂರ್ಣಿಮಾ ಕೋರಿ ದಂಪತಿಯನ್ನು ಒಂದುಗೂಡಿಸಿದ ಪ್ರಕರಣ ನಡೆಯಿತು. ನ್ಯಾಯಾಧೀಶರಾದ ಅಮೋಲ್ ಹಿರೇಕುಡೆ ಹಾಗೂ ಸುರೇಶ ವಗ್ಗನವರ ಇಬ್ಬರೂ ದಂಪತಿಗೆ ತಿಳಿವಳಿಕೆ ನೀಡಿದರು. ಸಾಮರಸ್ಯದಿಂದ ಜೀವನ ಸಾಗಿಸುವಂತೆ ಸೂಚಿಸಿದರು. ದಂಪತಿ ಪರಸ್ಪರ ಮಾಲಾರ್ಪಣೆ ಮಾಡಿ, ದಾಂಪತ್ಯ ಜೀವನ ಮುಂದುವರಿಸಿದರು.ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು, ಪಕ್ಷಗಾರರು ಉಪಸ್ಥಿತರಿದ್ದರು.