ಭಟ್ಕಳ ಕ್ಷೇತ್ರದಲ್ಲಿ 248 ಮತಗಟ್ಟೆ, 2,25 ಲಕ್ಷ ಮತದಾರರು: ಎಸಿ ಡಾ. ನಯನಾ

| Published : Mar 21 2024, 01:10 AM IST

ಭಟ್ಕಳ ಕ್ಷೇತ್ರದಲ್ಲಿ 248 ಮತಗಟ್ಟೆ, 2,25 ಲಕ್ಷ ಮತದಾರರು: ಎಸಿ ಡಾ. ನಯನಾ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದಲ್ಲಿ 1,14,053 ಪುರುಷರು ಮತ್ತು 1,11,075 ಮಹಿಳೆಯರು ಸೇರಿ ಒಟ್ಟೂ 2,25,125 ಮತದಾರರಿದ್ದಾರೆ.

ಭಟ್ಕಳ: ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯ ಎಂದು ಸಹಾಯ ಆಯುಕ್ತೆ ಮತ್ತು ಸಹಾಯಕ ಚುನಾವಣಾಧಿಕಾರಿ ಡಾ. ನಯನಾ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ 1,14,053 ಪುರುಷರು ಮತ್ತು 1,11,075 ಮಹಿಳೆಯರು ಸೇರಿ ಒಟ್ಟೂ 2,25,125 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟೂ 248 ಮತಗಟ್ಟೆ ಇದ್ದು, ಅದರಲ್ಲಿ 9 ಅತಿಸೂಕ್ಷ್ಮ ಮತ್ತು 37 ಮತಗಟ್ಟೆಗಳು ಸೂಕ್ಷ್ಮ ಎಂದು ಪರಿಗಣಿಸಲಾಗಿದೆ. ಕ್ಷೇತ್ರದಲ್ಲಿ 10 ಮಾದರಿ ಮತಗಟ್ಟೆಗಳನ್ನಾಗಿ ಮಾಡಲಾಗತ್ತಿದ್ದು, ಇದರಲ್ಲಿ 5 ಮಹಿಳಾ, 2 ಅಂಗವಿಕಲ, 2 ಯುವ ಮತದಾರರಿಗೆ ಹಾಗೂ 1 ಮಾದರಿ ಮತಗಟ್ಟೆಗಳಾಗಿವೆ. ಎಲ್ಲ ಮತಗಟ್ಟೆಗಳಲ್ಲಿಯೂ ಸುಸೂತ್ರವಾಗಿ ಮತ ಚಲಾಯಿಸಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ. ಅಂಗವಿಕಲರು, 80 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದವರೆಲ್ಲರೂ ಮತಗಟ್ಟೆಗೇ ಬಂದು ಮತ ಚಲಾಯಿಸಬೇಕು. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಿ ಯಶಸ್ವಿಗೊಳಿಸಬೇಕು. ಮತಗಟ್ಟೆ ಅಧಿಕಾರಿಗಳಿಗೆ ಆನಂದಾಶ್ರಮ ಕಾನ್ವೆಂಟ್‌ನಲ್ಲಿ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಗುರು ಸುಧೀಂದ್ರ ಕಾಲೇಜಿನಲ್ಲಿ ಮತಯಂತ್ರ ನೀಡುವುದು ಮತ್ತು ಪಡೆಯುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ರೀತಿಯಲ್ಲಿ ಚುನಾವಣೆಯಲ್ಲಿ ಅಕ್ರಮ ಆಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಕಡೆ ನಿಗಾ ಇಡಲಾಗುತ್ತದೆ. ಇದಕ್ಕಾಗಿಯೇ ಅಧಿಕಾರಿಗಳ ತಂಡ ರಚಿಸಲಾಗಿದೆ. ಮದುವೆ, ಉಪನಯನ ಮತ್ತಿತರ ಕಾರ್ಯಕ್ರಮಕ್ಕೆ ಅನುಮತಿಯ ಅಗತ್ಯವಿಲ್ಲ. ಆದರೆ ಇಲ್ಲಿ ರಾಜಕೀಯ ಸಭೆ, ಪ್ರಚಾರ ಮಾಡುವಂತಿಲ್ಲ. ರಥೋತ್ಸವ, ವರ್ಧಂತಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ತಹಸೀಲ್ದಾರರಿಂದ ಪರವಾನಗಿ ಪಡೆಯುವುದು ಅವಶ್ಯವಿದೆ. ಯಾವುದೇ ಕಾರ್ಯಕ್ರಮದಲ್ಲಿ ಪ್ರಚಾರ ಮಾಡುವಂತಿಲ್ಲ. ರಾಜಕೀಯ ಸಭೆ, ಪ್ರಚಾರ, ಸಮಾರಂಭ, ಕಟೌಟ್ ಹಾಕಲು ಮುಂತಾದವುಗಳಿಗೆ ಪರವಾನಗಿ ತೆಗೆದುಕೊಳ್ಳಲೇಬೇಕು ಎಂದ ಅವರು, ಒಬ್ಬ ವ್ಯಕ್ತಿ ₹50 ಸಾವಿರದ ವರೆಗೆ ಹಣವನ್ನು ಇಟ್ಟುಕೊಳ್ಳುಬಹುದು. ಇದಕ್ಕಿಂತ ಮೇಲ್ಪಟ್ಟು ಹಣ ಇಟ್ಟುಕೊಂಡು ಓಡಾಟ ನಡೆಸಿದ ಸಂದರ್ಭದಲ್ಲಿ ಸರಿಯಾದ ದಾಖಲೆ ನೀಡಬೇಕು. ಇಲ್ಲದಿದ್ದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ದೂರು ಇದ್ದರೂ ತಿಳಿಸಬಹುದು. ಇದಕ್ಕಾಗಿಯೇ ತಹಸೀಲ್ದಾರ್‌ ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಸಾರ್ವಜನಿಕರು ಚುನಾವಣೆ ಸಂಬಂಧ ಯಾವುದೇ ವಿಷಯ ಇದ್ದರೂ ಇಲ್ಲಿ ಕರೆ ಮಾಡಿ ತಿಳಿಸಬಹುದು ಎಂದರು. ಈ ಸಂದರ್ಭದಲ್ಲಿ ಭಟ್ಕಳ ತಹಸೀಲ್ದಾರ್‌ ನಾಗರಾಜ ನಾಯ್ಕಡ, ಭಟ್ಕಳ ಬಿಜೆಪಿ ಮಂಡಳಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಜೆಡಿಎಸ್ ಮುಖಂಡ ಕೃಷ್ಣಾನಂದ ಪೈ, ಸಿಪಿಐ(ಎಂ)ನ ಮುಖಂಡ ತಿಲಕ ಗೌಡ ಮುಂತಾದವರಿದ್ದರು.