ಮಂತ್ರಾಲಯಕ್ಕೆ 24ನೇ ವರ್ಷದ ಪಾದಯಾತ್ರೆ

| Published : Jan 11 2025, 12:46 AM IST

ಸಾರಾಂಶ

ಕನಕಗಿರಿ ಪಟ್ಟಣದ ಪ್ರತಾಪರಾಯ, ಕನಕಾಚಲಪತಿ ಹಾಗೂ ಶ್ರೀ ರಾಘವೇಂದ್ರಸ್ವಾಮಿ ಭಜನಾ ಸಂಘದ ಸಹಯೋಗದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಭಕ್ತರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ೨೪ನೇ ವರ್ಷದ ಪಾದಯಾತ್ರೆ ಆರಂಭಿಸಿದರು.

ಕನಕಗಿರಿ: ಪಟ್ಟಣದ ಪ್ರತಾಪರಾಯ, ಕನಕಾಚಲಪತಿ ಹಾಗೂ ಶ್ರೀ ರಾಘವೇಂದ್ರಸ್ವಾಮಿ ಭಜನಾ ಸಂಘದ ಸಹಯೋಗದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಭಕ್ತರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ೨೪ನೇ ವರ್ಷದ ಪಾದಯಾತ್ರೆ ಆರಂಭಿಸಿದರು.

ಶ್ರೀ ರಾಘವೇಂದ್ರಸ್ವಾಮಿ ಭಜನಾ ಸಂಘದ ಗೌರವಾಧ್ಯಕ್ಷ ಸುರೇಶರೆಡ್ಡಿ ಮಹಲಿನಮನಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಂಕ್ರಮಣ ಪ್ರಯುಕ್ತ ಮಂತ್ರಾಲಯ ಕ್ಷೇತ್ರಕ್ಕೆ ೨೪ನೇ ವರ್ಷದ ಪಾದಯಾತ್ರೆ ಕೈಗೊಂಡಿದ್ದೇವೆ. ಎಲ್ಲ ಭಕ್ತರ ಇಷ್ಟಾರ್ಥಗಳನ್ನು ರಾಯರು ಪೂರೈಸುತ್ತಿದ್ದರಿಂದ ವರ್ಷದಿಂದ ವರ್ಷಕ್ಕೆ ಪಾದಯಾತ್ರಿಕರ ಸಂಖ್ಯೆ ಏರಿಕೆಯಾಗುತ್ತಿದೆ ಎಂದರು.

ಸಂಘದ ಅಧ್ಯಕ್ಷ ರಾಮಣ್ಣ ಗುಂಜಳ್ಳಿ ಮಾತನಾಡಿ, ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ ೫೦ ವರ್ಷ ಪೂರೈಸಿದ ಹಿನ್ನೆಲೆ ಕನ್ನಡಾಂಬೆಯ ಭಾವಚಿತ್ರ ಹಾಗೂ ಸರ್ಕಾರ ಬಿಡುಗಡೆಗೊಳಿಸಿದ ೫೦ನೇ ಸಂಭ್ರಮದ ಲಾಂಛನವನ್ನು ವಾಹನಗಳಿಗೆ ಕಟ್ಟಿಕೊಂಡು ಕನ್ನಡ ಉಳಿಸಿ, ಬೆಳೆಸುವ ನಮ್ಮ ಸಂಘದ ವಿನೂತನ ಪ್ರಯತ್ನಕ್ಕೆ ಕನ್ನಡಾಭಿಮಾನಿಗಳು ಪ್ರಶಂಶೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶದ ಕೋಸಿಗಿ, ಡಿ. ಬೆಳಗಲ್, ಉರುಕುಂದ ಗ್ರಾಮಗಳಲ್ಲಿಯೂ ಕನ್ನಡ ಜಾಗೃತಿ ಮೂಡಿಸಲಾಗುವುದು ಎಂದರು.

ತೇರಿನ ಹನುಮಪ್ಪ ದೇವಸ್ಥಾನದಿಂದ ಆರಂಭಗೊಂಡ ಪಾದಯಾತ್ರಾ ಮೆರವಣಿಗೆ ರಾಜಬೀದಿ ಮೂಲಕ ಶ್ರೀ ಕನಕಾಚಲಪತಿ ದೇವಸ್ಥಾನ, ಬಸ್ ನಿಲ್ದಾಣ, ವಾಲ್ಮೀಕಿ ವೃತ್ತದ ಮಾರ್ಗವಾಗಿ ಪಾದಯಾತ್ರೆ ಹೊರಟಿತು.

ಪಪಂ ಸದಸ್ಯ ಶರಣೇಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸಿಂಧು ಬಲ್ಲಾಳ್, ಪ್ರಮುಖರಾದ ಭೀಮರೆಡ್ಡಿ ಓಣಿಮನಿ, ಸುರೇಶಪ್ಪ ಬೊಂದಾಡೆ, ಶ್ರೀನಿವಾಸರೆಡ್ಡಿ ಓಣಿಮನಿ, ವಿನಯ ಪತ್ತಾರ, ರಾಮಣ್ಣ ಪೂಜಾರ, ಶಿವಪ್ಪ ಅಂಕಸದೊಡ್ಡಿ, ವೀರೇಶ ವಸ್ತ್ರದ, ನಾಗರೆಡ್ಡಿ ಮಾದಿನಾಳ, ಶರಣಪ್ಪ ಕೊರೆಡ್ಡಿ, ಶರಣಪ್ಪ ಭಾವಿಕಟ್ಟಿ, ರವಿ ಪಾಟೀಲ್ ಇತರರು ಇದ್ದರು.