ಸಾರಾಂಶ
ಶ್ರೀಮಂತರು ಹೆಚ್ಚು ತೆರಿಗೆ ಪಾವತಿಸುತ್ತಾರೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ, ಕೇಂದ್ರ ಸರ್ಕಾರವು ಆ ವರ್ಗಕ್ಕೆ ರಿಯಾಯಿತಿ ನೀಡಿ ಪೋಷಿಸುತ್ತಿದೆ,
ಕನ್ನಡಪ್ರಭ ವಾರ್ತೆ ಮೈಸೂರು
ದೇಶದಲ್ಲಿ ತೆರಿಗೆ ಹೆಸರಿನಲ್ಲಿ ಬಡ ಜನರ ರಕ್ತ ಹೀರಲಾಗುತ್ತಿದೆ. ದೇಶದಲ್ಲಿ ಜನರ ಜೀವಿತಾವಧಿಯನ್ನು ಸರ್ಕಾರದ ನೀತಿಗಳು ನಿರ್ಧರಿಸುತ್ತಿವೆ. ಸೌಲಭ್ಯದ ಕೊರತೆಯಿಂದ ಕಡು ಬಡವರ ಜೀವಿತಾವಧಿಯೇ ಕುಂಠಿತವಾಗುತ್ತಿದೆ ಎಂದು ಕೇರಳ ಸಂಸದ ವಿ. ಶಿವದಾಸನ್ ಕಳವಳ ವ್ಯಕ್ತಪಡಿಸಿದರು.ನಗರದ ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಶನಿವಾರ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ (ಮಾಕ್ಸ್ ವಾದಿ) 24ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಶ್ರೀಮಂತರು ಹೆಚ್ಚು ತೆರಿಗೆ ಪಾವತಿಸುತ್ತಾರೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ, ಕೇಂದ್ರ ಸರ್ಕಾರವು ಆ ವರ್ಗಕ್ಕೆ ರಿಯಾಯಿತಿ ನೀಡಿ ಪೋಷಿಸುತ್ತಿದೆ, ತೆರಿಗೆಯ ಹೆಸರಿನಲ್ಲಿ ಬಡ ಜನರ ರಕ್ತ ಹೀರಲಾಗುತ್ತಿದೆ ಎಂದು ಕಿಡಿಕಾರಿದರು.ಬಿಸಿಯೂಟ ನೌಕರರಿಗೆ ಕೇಂದ್ರ ಸರ್ಕಾರದ ಕಡೆಯಿಂದ ತಿಂಗಳಿಗೆ 1200 ರೂ. ಪಾವತಿಸಲಾಗುತ್ತಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಈ ಮೊತ್ತದಿಂದ ಬದುಕಲು ಹೇಗೆ ಸಾಧ್ಯ. ಕೇಂದ್ರವು ಬಿಸಿಯೂಟ ಯೋಜನೆ ಅನುದಾನ ಕಡಿತ ಗೊಳಿಸಿರುವುದರಿಂದ ವೇತನ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸದಿರುವುದು ವಿಷಾದನಿಯ ಎಂದು ಅವರು ಹೇಳಿದರು.ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಪೂರ್ಣಾವಧಿ ಕೆಲಸವಿದ್ದರೂ ಅವರನ್ನು ನೌಕರರೆಂದು ಗುರುತಿಸಿ ವೇಜ್‌ಬೋರ್ಡ್‌ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸರ್ಕಾರ ತಯಾರಿಲ್ಲ. ಈ ಕೆಲಸಗಳನ್ನು ಯೋಜನೆಯ ಕೆಲಸ ಎಂದು ಕರೆದು ದುಡಿಸಿಕೊಳ್ಳುತ್ತಿದ್ದಾರೆ. ಮಹಿಳೆಯರನ್ನು ನಾರಿ ಶಕ್ತಿ ಎಂದು ಕರೆಯುವ ಮೋದಿ, ಮಹಿಳಾ ವರ್ಗದ ಪರವಾಗಿ ಯಾಕೆ ಕೆಲಸ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿನ ಅನುದಾನವನ್ನೂ ಕಡಿಮೆ ಮಾಡಿದ್ದಾರೆ. ದೇವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಆಡಳಿತ ಪಕ್ಷ ದೇವರಂತ ಮಕ್ಕಳ ಪೋಷಣೆಯನ್ನು ನಿರ್ಲಕ್ಷಿಸುತ್ತಿರುವುದು ಖಂಡನಿಯ. ಕೇಂದ್ರ ಬಜೆಟ್‌ನಲ್ಲಿ ಅವಕಾಶ ಇದ್ದರೂ ಆರೋಗ್ಯ ಮತ್ತು ಶಿಕ್ಷಣ ವಲಯಕ್ಕೆ ಹಣ ಮೀಸಲಿಡುತ್ತಿಲ್ಲ. ದೇಶದಲ್ಲಿ ಬಡತನ, ನಿರುದ್ಯೋಗ, ಅಪರಾಧಗಳು ಹೆಚ್ಚುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಸರ್ಕಾರಿ ಆರೋಗ್ಯ ವಲಯವನ್ನು ಕೇಂದ್ರ ಸರ್ಕಾರವು ಒತ್ತಡವೆಂದು ಭಾವಿಸುತ್ತಿದೆ. ಈ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಮಾಡುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಅಂಗಾಂಗ ಮಾರಾಟಮಾಡುವ ವ್ಯವಸ್ಥೆಯಿದ್ದು, ಅದರಿಂದ ದೂರವಿರಲು ಸರ್ಕಾರಿ ವ್ಯವಸ್ಥೆ ನೋಡಿಕೊಳ್ಳಬೇಕು. ಆದರೆ, ಸರ್ಕಾರ ಇವುಗಳ ಬಗ್ಗೆ ಯೋಚಿಸದೆ ಯೋಜನೆಗಳನ್ನು ಕಡಿತಗೊಳಿಸುತ್ತಿದೆ. ದುಬಾರಿ ಶುಲ್ಕದ ಕಾರಣದಿಂದ ಸಾಲ ಸೌಲಭ್ಯದ ವ್ಯವಸ್ಥೆಯಿದ್ದರೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಸಮರ್ಪಕ ಯೋಜನೆ ಜಾರಿಗೊಳಿಸಬೇಕಿದೆ ಎಂದು ಅವರು ಆಗ್ರಹಿಸಿದರು.ಇದಕ್ಕೂ ಮುನ್ನ ಜಿಲ್ಲಾ ಸಮ್ಮೇಳನ ಅಂಗವಾಗಿ ಗನ್ ಹೌಸ್ ಬಳಿಯಿಂದ ಕಾರ್ಮಿಕರು, ರೈತರು ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದವರೆಗೆ ಮೆರವಣಿಗೆಯಲ್ಲಿ ಆಗಮಿಸಿದರು.ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್, ರಾಜ್ಯ ಸಮಿತಿ ಸದಸ್ಯೆ ಎಚ್.ಎಸ್. ಸುನಂದಾ, ಜಿಲ್ಲಾ ಕಾರ್ಯದರ್ಶಿ ಜಗದೀಶ್‌ಸೂರ್ಯ, ಮುಖಂಡರಾದ ಜಿ. ಜಯರಾಮ್, ಲ. ಜಗನ್ನಾಥ್, ವಿಜಯ್‌ಕುಮಾರ್, ಸುಬ್ರಹ್ಮಣ್ಯ, ಕೆ. ಬಸವರಾಜು ಮೊದಲಾದವರು ಇದ್ದರು.----ಕೋಟ್...ಜಿಎಸ್ಟಿ ಒಕ್ಕೂಟ ವ್ಯವಸ್ಥೆಯ ಮೇಲೆ ದೊಡ್ಡ ಹೊಡೆತ ನೀಡಿದೆ. ಜಿಎಸ್ಟಿಯಲ್ಲಿನ ದೊಡ್ಡ ಪಾಲನ್ನು ಕೇಂದ್ರ ಸರ್ಕಾರವೇ ಪಡೆಯುತ್ತಿದೆ. ಜೆಎಸ್ಟಿ ಸಂಗ್ರಹ ಪ್ರಮಾಣ ಹಾಗೂ ಕೇಂದ್ರ ಸರ್ಕಾರವು ರಾಜ್ಯಗಳಿಗೆ ವಾಪಸ್‌ನೀಡುವ ಪ್ರಮಾಣ ಗಮನಿಸಿದಾಗ ಹೇಗೆ ಹಣ ಲೂಟಿ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತದೆ. ಆಡಳಿತ ಪಕ್ಷದ ಜನವಿರೋಧಿ ನೀತಿಗಳನ್ನು ಪ್ರಶ್ನಿಸಿ, ನಮ್ಮ ಹಕ್ಕನ್ನು ಪಡೆಯಲು ಹೋರಾಟ ಸಂಘಟಿಸಬೇಕಿದೆ.- ವಿ. ಶಿವದಾಸನ್, ಕೇರಳ ಸಂಸದ