ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿ ಜಿಲ್ಲೆಯಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಆರಂಭವಾಗಿರುವ 24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಅಲ್ಲದೆ, ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ ಹಾಗೂ ಈಜುಕೊಳ ನಿರ್ಮಿಸಲು ಈಗಾಗಲೇ ಜಾಗ ಗುರುತಿಸಲಾಗಿದೆ. ಮೇ 3ರಿಂದ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಕ್ರೀಡಾಕೂಟ ನಡೆಯುತ್ತದೆ. ಅಲ್ಲದೆ, ಇತ್ತೀಚೆಗೆ ನಡೆದ ಕರ್ನಾಟಕ ಕ್ರೀಡಾಕೂಟದ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಆಯವ್ಯಯದಲ್ಲಿ ೩ ಕೋಟಿ ರು. ಈಗಾಗಲೇ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದಾಗಿ ತುಮಕೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.ಇಂದಿನಿಂದ 3 ದಿನ ನಡೆಯಲಿರುವ 24ನೇ ರಾಷ್ಟ್ರೀಯ 20 ವರ್ಷದೊಳಗಿನ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ ತುಮಕೂರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದ ಅವರು, ಅಮೆರಿಕಾದಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಈ ಕ್ರೀಡಾಕೂಟ ಅತ್ಯಂತ ಮಹತ್ವ ಪಡೆದಿದೆ. ಅಮೆರಿಕಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತದ ಪ್ರತಿನಿಧಿಗಳನ್ನು ಈ ಕ್ರೀಡಾಕೂಟದಲ್ಲಿ ಆಯ್ಕೆ ಮಾಡಲಾಗುತ್ತದೆ. ಇದೊಂದು ಮಹತ್ವದ ವಿಷಯವಾಗಿದೆ ಎಂದು ಅವರು ವಿವರಿಸಿದರು.ತುಮಕೂರು ನಗರದಲ್ಲಿ ಈ ವಿಶೇಷ ಕ್ರೀಡಾ ವಾತಾವರಣ ನಿರ್ಮಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಯುವ ಕ್ರೀಡಾಳುಗಳಿಗೆ ಅನುಕೂಲವಾಗಿದೆ. ಪ್ರತಿದಿನವೂ ಯುವ ಪ್ರತಿಭೆಗಳು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ, ಟೆನಿಸ್ ಕ್ರೀಡಾಂಗಣದಲ್ಲಿ ತರಬೇತಿ, ತಾಲೀಮು ನಡೆಸುತ್ತಿದ್ದಾರೆ. ಮುಂಬರುವ ಏಷ್ಯನ್, ಒಲಿಂಪಿಕ್ ಕ್ರೀಡಾಕೂಟಗಳನ್ನು ಪ್ರತಿನಿಧಿಸಲು ಕ್ರೀಡಾಪಟುಗಳು ಇಲ್ಲಿ ತಯಾರಾಗುತ್ತಿರುವುದು ಸಂತೋಷದ ವಿಷಯ ಎಂದರು. ಶಾಸಕ ಬಿ. ಸುರೇಶ್ ಗೌಡ ಮಾತನಾಡಿ, ಮನುಷ್ಯನ ಆರೋಗ್ಯ ದೃಢವಾಗಲು ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ಕ್ರೀಡಾವಾತಾವರಣ ನಿರ್ಮಾಣವಾಗಿರುವುದು ಸಂತಸದ ವಿಷಯ ಎಂದರು.ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ತುಮಕೂರು ಶೈಕ್ಷಣಿಕ ನಗರವಲ್ಲದೆ, ಕ್ರೀಡಾ ನಗರಿಯಾಗಿಯೂ ಬೆಳೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ. ಜಿ. ಪರಮೇಶ್ವರ ಅವರು ಜಿಲ್ಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಲು ಪ್ರಯತ್ನಿಸುವ ಈ ಪ್ರಗತಿ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿದ ಅಥ್ಲೀಟ್‌ಗಳಾದ ಪ್ರಿಯಾಮೋಹನ್, ರೀತುಶ್ರೀ, ಎಂ.ಕ್ರಿಷಿಕ್ ಅವರ ಪೋಷಕರನ್ನು ಗೌರವಿಸಲಾಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ., ಮಹಾನಗರಪಾಲಿಕೆ ಆಯುಕ್ತೆ ಶುಭ ಬಿ., ರಾಜ್ಯ ಅಥ್ಲೆಟಿಕ್ ಸಂಸ್ಥೆ ಸ್ಪರ್ಧಾ ನಿರ್ದೇಶಕ ಸತ್ಯನಾರಾಯಣ್, ತುಮಕೂರು ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಪ್ರಭಾಕರ್ ಎ.ಎನ್. ಉಪಸ್ಥಿತರಿದ್ದರು.
24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ
ತುಮಕೂರು ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿ ಜಿಲ್ಲೆಯಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.