ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕಳೆದ ಅಸೆಂಬ್ಲಿ ಚುನಾವಣೆ ಸಂದರ್ಭ ಮಂಗಳೂರು(ಉಳ್ಳಾಲ) ಕ್ಷೇತ್ರದ ಜನತೆಗೆ 24X7 ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೊಳಿಸುವ ಬಗ್ಗೆ ಮಾತು ಕೊಟ್ಟಿದ್ದೆ. ಅದರಂತೆ 249 ಕೋಟಿ ರು. ವೆಚ್ಚದಲ್ಲಿ ಉಳ್ಳಾಲಕ್ಕೆ ಪ್ರತ್ಯೇಕ ನೀರಿನ ವ್ಯವಸ್ಥೆಯ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಈ ಪ್ರಥಮ ಹಂತದ ಉದ್ಘಾಟನೆ ಹಾಗೂ 2ನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೂಲಕ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಡುಗಡೆಯಾದ 249 ಕೋಟಿ ರು.ಗಳಲ್ಲಿ ಸಜಿಪದಲ್ಲಿ ಜಾಕ್‌ವೆಲ್‌ನಿಂದ ಕೊಣಾಜೆಗೆ ನೀರನ್ನು ಪೂರೈಸಿ ಶುದ್ಧೀಕರಣಗೊಂಡು ಪೈಪ್‌ಲೈನ್ ಮೂಲಕ ಉಳ್ಳಾಲ, ತಲಪಾಡಿವರೆಗೆ ಹರಿಸುವ ಕಾಮಗಾರಿ ಪೂರ್ಣಗೊಂಡಿದೆ. ಚೆಂಬುಗುಡ್ಡೆಯಲ್ಲಿ ಕ್ಷೇತ್ರದ ನಗರ ಭಾಗಕ್ಕೆ ನೀರು ಪೂರೈಸಲು 70 ಲಕ್ಷ ಲೀಟರ್ ಟ್ಯಾಂಕ್ ನಿರ್ಮಾಣವಾಗಿದೆ. 2ನೇ ಹಂತದಲ್ಲಿ ಗ್ರಾಮೀಣ ಮಟ್ಟಕ್ಕೂ ನೀರು ಪೂರೈಕೆಗಾಗಿ ಮುಖ್ಯ ಟ್ಯಾಂಕ್‌ಗೆ ನೀರು ಹರಿಸಿ ಅಲ್ಲಿಂದ ಸಣ್ಣ ಟ್ಯಾಂಕ್‌ಗಳಿಂದ ಮನೆಗಳಿಗೆ ಸಂಪರ್ಕ ನೀಡುವ ಕೆಲಸ ನಡೆಯಲಿದೆ. ಇದಕ್ಕಾಗಿ 386 ಕೋಟಿ ರು..ಗಳ ಅನುದಾನ ಬಿಡುಗಡೆ ಆಗಿದೆ ಎಂದು ಯು.ಟಿ.ಖಾದರ್ ಹೇಳಿದರು.ಮುಂಬೈಯಿಂದ ಕೊಚ್ಚಿಗೆ ಕ್ರೂಸ್‌ಗೆ ಸೋಮೇಶ್ವರದಲ್ಲಿ ಬಂದರು ನಿರ್ಮಾಣಕೇಂದ್ರ ಸರ್ಕಾರ ಮುಂಬೈನಿಂದ ಕೊಚ್ಚಿಗೆ ಕ್ರೂಸ್ (ಪ್ರಯಾಣಿಕ ಹಡಗು ಸೇವೆ) ಆರಂಭಿಸಲಿದೆ. ಈ ಕ್ರೂಸ್‌ಗೆ ಉಳ್ಳಾಲದ ಸೋಮೇಶ್ವರದಲ್ಲಿ ನಿಲುಗಡೆಗೆ ಮಾಡಲು ಪೂರಕವಾದ ಬಂದರು ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರದೇಶ ಪ್ರಯಾಣಿಕ ಹಡಗು ತಂಗುದಾಣ ನಿರ್ಮಿಸಲು ಪ್ರಶಾಂತವಾದ ಹಾಗೂ ಪ್ರವಾಸಿ ತಾಣವಾಗಿ ರೂಪಿಸಲು ಉತ್ತಮ ಸ್ಥಳವಾಗಿದ್ದು, ಈ ನಿಟ್ಟಿನಲ್ಲಿ ಯೋಜನೆ ಸಿದ್ಧಗೊಳ್ಳುತ್ತಿದೆ ಎಂದು ಯು.ಟಿ.ಖಾದರ್ ಹೇಳಿದರು.