ಬಸವೇಶ್ವರ ಯುವಕ ಮಂಡಳಿಯ ನೇತೃತ್ವದಲ್ಲಿ ಮಹತ್ವದ ಸೇವಾ ಕಾರ್ಯ ಕೈಗೊಳ್ಳಲಾಗಿದೆ.

ಕಂಪ್ಲಿ: ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ದಾಸೋಹ ಸೇವೆ ಒದಗಿಸುವ ಉದ್ದೇಶದಿಂದ ದೇವಸಮುದ್ರ ಗ್ರಾಮದ ತುರುಮುಂದಿ ಬಸವೇಶ್ವರ ಯುವಕ ಮಂಡಳಿಯ ನೇತೃತ್ವದಲ್ಲಿ ಮಹತ್ವದ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ಜಾತ್ರೆ ನಿಮಿತ್ತ ಭಕ್ತರಿಗೆ ವಿತರಿಸಲು 25 ಸಾವಿರ ಜೋಳದ ರೊಟ್ಟಿಗಳು ಹಾಗೂ 5 ಕ್ವಿಂಟಲ್ ಅಕ್ಕಿಯನ್ನು ಸಂಗ್ರಹಿಸಿ ಕೊಪ್ಪಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಜನವರಿ 5ರಿಂದ ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ದೇವಸಮುದ್ರ ಗ್ರಾಮದ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ದಾಸೋಹದ ಪೂರ್ವಸಿದ್ಧತೆ ಭರದಿಂದ ನಡೆಯುತ್ತಿದೆ. ಗ್ರಾಮದ ಸರ್ವಧರ್ಮದ ಮಹಿಳೆಯರು ಒಗ್ಗಟ್ಟಿನಿಂದ ರೊಟ್ಟಿ ತಯಾರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹಲವರು ದೇವಸ್ಥಾನ ಆವರಣದಲ್ಲಿ ಸ್ವಯಂಪ್ರೇರಿತರಾಗಿ ರೊಟ್ಟಿ ತಯಾರಿಸುತ್ತಿದ್ದರೆ, ಇನ್ನು ಕೆಲವರು ತಮ್ಮ ಮನೆಗಳಲ್ಲಿಯೇ ರೊಟ್ಟಿಗಳನ್ನು ತಯಾರಿಸಿ ದಾಸೋಹಕ್ಕೆ ನೀಡುತ್ತಿರುವುದು ಗ್ರಾಮೀಣ ಸಮುದಾಯದ ಶ್ರದ್ಧೆ ಮತ್ತು ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.

ಆರಂಭದಲ್ಲಿ ಐದು ಸಾವಿರ ಜೋಳದ ರೊಟ್ಟಿಗಳನ್ನು ತಯಾರಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಗ್ರಾಮದ ಮಹಿಳೆಯರು ಉತ್ಸಾಹದಿಂದ ಹೆಚ್ಚಿನ ಪ್ರಮಾಣದಲ್ಲಿ ರೊಟ್ಟಿ ತಯಾರಿಸಲು ಮುಂದೆ ಬಂದ ಪರಿಣಾಮ, ಇದುವರೆಗೆ 20 ಸಾವಿರಕ್ಕೂ ಹೆಚ್ಚು ಜೋಳದ ರೊಟ್ಟಿಗಳು ಸಂಗ್ರಹವಾಗಿವೆ. ಭಕ್ತರಿಗೆ ಹೆಚ್ಚಿನ ಸೇವೆ ಸಲ್ಲಿಸುವ ಸಂಕಲ್ಪದೊಂದಿಗೆ 25 ಸಾವಿರ ಜೋಳದ ರೊಟ್ಟಿಗಳನ್ನು ಕಳುಹಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತುರುಮುಂದಿ ಬಸವೇಶ್ವರ ಯುವಕ ಮಂಡಳಿಯ ಪದಾಧಿಕಾರಿಗಳು ತಿಳಿಸಿದರು.

ಈ ದಾಸೋಹ ಕಾರ್ಯಕ್ಕೆ ಗ್ರಾಮದ ಪ್ರಮುಖರಾದ ಜಿ. ಅಮರೇಗೌಡ, ಗುಡ್ಡದ ಜಂಬುನಾಥ, ಅಳ್ಳಳ್ಳಿ ಮಂಜುನಾಥ, ಅಗಸಿ ಬಸವನಗೌಡ, ಎಚ್.ಎಸ್. ಮಲ್ಲಿಕಾರ್ಜುನ, ಎಸ್. ಚಿದಾನಂದಪ್ಪ, ರುದ್ರಗೌಡ, ಜೆ. ಚನ್ನವೀರ ಸೇರಿದಂತೆ ಅನೇಕರು ಸಹಕಾರ ನೀಡುತ್ತಿದ್ದಾರೆ. ಗ್ರಾಮಸ್ಥರ ಒಗ್ಗಟ್ಟು, ಶ್ರದ್ಧಾಭಕ್ತಿ ಹಾಗೂ ಸೇವಾ ಮನೋಭಾವದಿಂದ ಈ ದಾಸೋಹ ಕಾರ್ಯ ಯಶಸ್ವಿಯಾಗಿ ಸಾಗುತ್ತಿದೆ.

ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನ್ನದಾಸೋಹದ ಮೂಲಕ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ ಎಂಬ ಭಾವನೆಯೊಂದಿಗೆ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಯುವಕ ಮಂಡಳಿಯ ಸದಸ್ಯರು ಹೇಳಿದರು.