ಮುುದುಕೂರು ಭದ್ರಾ ತಟದಲ್ಲಿ 25-30 ಕಾಡಾನೆಗಳ ಓಡಾಟ : ಅರಣ್ಯ ಇಲಾಖೆ ಕಾರ್ಯಾಚಾರಣೆ

| N/A | Published : Feb 11 2025, 12:49 AM IST / Updated: Feb 11 2025, 12:04 PM IST

ಸಾರಾಂಶ

  ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಠಲ ಗ್ರಾಮದ ಹಾಗಲಮನೆ, ಹಳೇದಾನಿ ವಾಸ, ಮುದುಕೂರು ಭಾಗದ ಭದ್ರಾ ಹಿನ್ನೀರಿನ ತಟದಲ್ಲಿ 25 ರಿಂದ 30 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆ   ಕಾರ್ಯಾಚಾರಣೆ ನಡೆಸಿ ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಪ್ರಯತ್ನ ಮುಂದುವರಿಸಿದ್ದಾರೆ.

  ನರಸಿಂಹರಾಜಪುರ : ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಠಲ ಗ್ರಾಮದ ಹಾಗಲಮನೆ, ಹಳೇದಾನಿ ವಾಸ, ಮುದುಕೂರು ಭಾಗದ ಭದ್ರಾ ಹಿನ್ನೀರಿನ ತಟದಲ್ಲಿ 25 ರಿಂದ 30 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆ ಯವರು ಸೋಮವಾರ ಬೆಳಿಗ್ಗೆಯಿಂದ ಕಾರ್ಯಾಚಾರಣೆ ನಡೆಸಿ ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಪ್ರಯತ್ನ ಮುಂದುವರಿಸಿದ್ದಾರೆ.

ಭಾನುವಾರ ಸಂಜೆ ವಿಠಲ ಗ್ರಾಮದ ಹಾಗಲಮನೆಯ ದೇವಸ್ಥಾನದ ಸಮೀಪದ ಭದ್ರಾ ಹಿನ್ನೀರಿನ ತಟದಲ್ಲಿ ಕಾಡಾನೆಗಳ ಹಿಂಡು ಗ್ರಾಮಸ್ಥರಿಗೆ ಕಂಡಿದ್ದು ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆಯಿಂದ ಕಾರ್ಯಾಚರಣೆಗೆ ಇಳಿದ ಎಲಿಫೆಂಟ್ ಟಾಸ್ಕ್ ಫೋರ್ಸ್ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾಡಾನೆಗಳನ್ನು ಭದ್ರಾ ಹಿನ್ನೀರಿನ ಆಚೆ ಇರುವ ಭದ್ರಾ ಅಭಯಾರಣ್ಯಕ್ಕೆ ಅಟ್ಟುವ ಪ್ರಯತ್ನ ಮುಂದುವರಿಸಿದ್ದಾರೆ. ಭದ್ರಾ ಹಿನ್ನೀರು ಕಡಿಮೆ ಇರುವುದರಿಂದ ಕಾಡಾನೆಗಳು ಆಚೆ ದಡಕ್ಕೆ ಹೋಗಬಹುದು ಎಂದು ಅರಣ್ಯ ಇಲಾಖೆಯವರ ನಿರೀಕ್ಷೆಯಾಗಿದೆ.

ಮನೆ ಸಮೀಪ ಕಾಡಾನೆಗಳು:

ಕಡಹಿನಬೈಲು ಗ್ರಾಮದ ಚನಮಣೆ ಜಿ.ಡಿ.ಸೋಮಣ್ಣ ಎಂಬ ರೈತರ ಮನೆ ಸಮೀಪದಲ್ಲಿ ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ 5 ಕಾಡಾನೆಗಳು ಬಂದಿತ್ತು. ಮನೆಯವರು ಪಟಾಕಿ ಸಿಡಿಸಿ ಆನೆಗಳನ್ನು ದೂರ ಓಡಿಸಿದ್ದಾರೆ. ಇದೇ ಆನೆಗಳ ಹಿಂಡು ಸೋಮವಾರ ಬೆಳಿಗ್ಗೆ ಚನಮಣೆಯ ಎಚ್.ಡಿ.ರವಿ ಎಂಬುವ ಅಡಕೆ ತೋಟದ ಗೇಟಿನ ಹತ್ತಿನ ಬಂದಿತ್ತು. ಸುದ್ದಿ ತಿಳಿದ ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಕಾಡಾನೆಗಳನ್ನು ಸಮೀಪದ ಆರಂಬಳ್ಳಿ ಮೀಸಲು ಅರಣ್ಯಕ್ಕೆ ಅಟ್ಟಿಸಿದ್ದಾರೆ.

ದಿನೇ, ದಿನೇ ಕಾಡಾನೆಗಳು ಹಿಂಡು ಕಡಹಿನಬೈಲು, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಸುತ್ತಾಡುತ್ತಾ ಅಡಿಕೆ ತೋಟ, ಬಾಳೆ ತೋಟಗಳಿಗೆ ದಾಳಿ ಇಡುತ್ತಿದ್ದು ಗ್ರಾಮಸ್ಥರು ಭಯ ಭೀತರಾಗಿದ್ದಾರೆ.