ಸಾರಾಂಶ
ರಟ್ಟೀಹಳ್ಳಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದೇ ದುಸ್ತರವಾದ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ ಶೂನ್ಯ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದರೂ ಅದಕ್ಕೆ ಕಿವಿಗೊಡದೆ ಸಿಎಂ ಸಿದ್ದರಾಮಯ್ಯನವರು ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ₹25 ಕೋಟಿ ಹಣ ನೀಡಿದ್ದಾರೆ ಎಂದು ಶಾಸಕ ಯು.ಬಿ ಬಣಕಾರ ತಿಳಿಸಿದರು.
2023- 24ನೇ ಸಾಲಿನ ಎಸ್ಎಫ್‌ಸಿ ವಿಶೇಷ ಅನುದಾನದಲ್ಲಿ ಸುಮಾರು ₹54 ಲಕ್ಷ ವೆಚ್ಚದ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಸುಮಾರು ₹80 ಕೋಟಿಯನ್ನು ದೇವಸ್ಥಾನಗಳಿಗೆ, ₹8 ಕೋಟಿ ಹಣವನ್ನು ಮುಜರಾಯಿ ಇಲಾಖೆಗೆ ನೀಡಿದ್ದು, ಅಲ್ಪಸಂಖ್ಯಾತರಿಗೆ ₹4 ಕೋಟಿ ಹಾಗೂ ₹5 ಕೋಟಿಯಲ್ಲಿ ಮೂಲ ಸೌಲಭ್ಯಗಳಿಗೆ ನೀಡಲಾಗಿದೆ. ಅದೇ ರೀತಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹1.39 ಕೋಟಿ ಹಣ ನೀಡಿದ್ದು, ಅದರಲ್ಲಿ ₹54 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಬಾಕಿ ಹಣದಲ್ಲಿ ಮುಂಬರುವ ದಿನಗಳಲ್ಲಿ ನಿಯಮಾನುಸಾರ ಅನುಮೊದನೆ ಸಿಕ್ಕ ನಂತರ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.ಇಂದಿರಾ ಕ್ಯಾಂಟೀನ್‌ಗೆ ಚಾಲನೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್ ಇತ್ತೀಚಿಗಷ್ಟೆ ಲೋಕಾರ್ಪಣಗೊಂಡಿದ್ದು, ರಾಜ್ಯದ ಯಾರೊಬ್ಬರೂ ಹಸಿವಿನಿಂದ ಬಳಲದೆ ಕಡಿಮೆ ವೆಚ್ಚದಲ್ಲಿ ಊಟ, ತಿಂಡಿ ನೀಡಲಾಗುತ್ತಿದ್ದು, ಪಟ್ಟಣದಲ್ಲೂ ಚಾಲನೆ ನೀಡಿದ್ದು ಅತ್ಯಂತ ಹೆಮ್ಮೆಯ ವಿಷಯ ಎಂದರು.ರಟ್ಟೀಹಳ್ಳಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ರಮೇಶ ಭೀಮಪ್ಪನವರ, ನಿಂಗನಗೌಡ ಪ್ಯಾಟಿಗೌಡ್ರ, ಮಂಜು ಮಾಸೂರ, ನಾಗನಗೌಡ ಕೋಣ್ತಿ, ದಾನಪ್ಪನವರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಶ ಚಂದ್ರಕೇರ ಹಾಗೂ ಸಿಬ್ಬಂದಿ ಇದ್ದರು.ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆರಟ್ಟೀಹಳ್ಳಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ₹5 ಲಕ್ಷ ವೆಚ್ಚದ ಹೈಮಾಸ್ಟ್ ದೀಪ ಅಳವಡಿಕೆ, ಹೊಳೆಸಾಲ ದುರ್ಗಾದೇವಿ ದೇವಸ್ಥಾನದ ಮಾರ್ಗದಲ್ಲಿನ ಸ್ಮಶಾನ ಅಭಿವೃದ್ಧಿಗೆ ₹15 ಲಕ್ಷ, ವಾರ್ಡ್ ನಂ. 1ರ ಎಡಚಿ ರಸ್ತೆಯ ಆಸ್ಪತ್ರೆಯ ಹತ್ತಿರ ಎರಡು ಬದಿಯ ಕಾಲುವೆ ನಿರ್ಮಾಣಕ್ಕೆ ₹10 ಲಕ್ಷ, ಮಾಸೂರು ರಸ್ತೆಯ ವಾರ್ಡ್ ನಂ. 15ರಲ್ಲಿ ಕಾಲುವೆ ನಿರ್ಮಾಣಕ್ಕೆ ₹14 ಲಕ್ಷ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಡೆ ಬೋರ್‌ವೆಲ್ ಕೊರೆದು ಮೋಟಾರ್ ಅಳವಡಿಸಲು ₹10 ಲಕ್ಷದ ಕಾಮಗಾರಿಗಳಿಗೆ ಶಾಸಕ ಯು.ಬಿ. ಬಣಕಾರ ಅವರು ಚಾಲನೆ ನೀಡಿದರು.