ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 25 ಕೋಟಿ ಅನುದಾನ ನೀಡಿದ್ದು, ಈ ಪೈಕಿ 12 ಕೋಟಿಯನ್ನು ಕ್ಷೇತ್ರಾದ್ಯಂತ ಅಪೂರ್ಣಗೊಂಡಿರುವ ಸಮುದಾಯ ಭವನಗಳ ಅಭಿವೃದ್ಧಿಗೆ ಬಳಸಲು ನಿರ್ಣಯಿಸಿದ್ದು ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ಹೇಳಿದರು. ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕು ಪತ್ರ ವಿತರಿಸಿ ಮಾತನಾಡಿ, ಸಚಿವ ಜಮೀರ್ ಅಹಮ್ಮದ್ ಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿದ್ದು ಆದಿವಾಸಿಗಳಿಗೆ 2 ಸಾವಿರ ಮನೆ ಮಂಜೂರು ಮಾಡುವಂತೆ ಕೋರಿದ್ದೆ ನನ್ನ ಕೋರಿಕೆಗೆ ಮನ್ನಣೆ ನೀಡಿದ್ದಾರೆ. ಅದೇ ರೀತಿಯಲ್ಲಿ ಕ್ಷೇತ್ರಕ್ಕೆ ಅವರು 7 ಕೋಟಿ ಅನುದಾನ ಒದಗಿಸಿದ್ದು ಅನುದಾನವನ್ನು ಯಾವ ವಾರ್ಡ್‌ಗಳಲ್ಲಿ ಜೈನರು, ಅಲ್ಪಸಂಖ್ಯಾತರು, ಕ್ರೈಸ್ತ ಸಮುದಾಯ ವಾಸವಿದ್ದಾರೆ ಅಲ್ಲಿ ಕೈಗೊಳ್ಳಬೇಕಾದ ಕಾಮಗಾರಿ ಬಗ್ಗೆ ಮಾಹಿತಿ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಕೊಳ್ಳೇಗಾಲದ ಶಾದಿ ಮಹಲ್ ಪರಿಪೂರ್ಣಕ್ಕೆ 1 ಕೋಟಿ ಅಗತ್ಯವಿದ್ದು ಸರ್ಕಾರಕ್ಕೆ ಅನುದಾನ ನೀಡಲು ಮನವಿ ಮಾಡಿರುವೆ. ಈಗಾಗಲೇ 12 ಕೋಟಿಯನ್ನು ಎಲ್ಲಾ ಧರ್ಮಗಳ ಸಮುದಾಯ ಭವನಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುವುದು, ಈ ಪೈಕಿ ಅರುಣೋದಯ ಚಚ್೯ಗೆ 50 ಲಕ್ಷ, ಬೇತಲ್ ಲೂಥರನ್ ಚಚ್೯ಗೆ 25 ಲಕ್ಷ ನೀಡಲಾಗುವುದು, ಯಳಂದೂರು ಶಾದಿ ಮಹಲ್‌ಗೆ 50 ಲಕ್ಷ, ಮಾಂಬಳ್ಳಿ ಮಸೀದಿಗಾಗಿ 50 ಲಕ್ಷ, ಕೊಳ್ಳೇಗಾಲದ ಹಳೆಯ ಉರ್ದು ಶಾಲೆಯ ಅಭಿವೃದ್ಧಿಗೂ ಅನುದಾನ ನೀಡಲು ಚಿಂತಿಸಿದ್ದೇನೆ ಎಂದರು. ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ಜನಪರ, ಬಡವರ ಪರವಿದೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತ್ರ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು. ಕೊಳ್ಳೇಗಾಲ ಅಂಬೇಡ್ಕರ್ ಭವನಕ್ಕೆ ನಾನೇ 25 ಕೋಟಿ ಅನುದಾನದಲ್ಲಿ ಅಗತ್ಯ ಅನುದಾನ ನೀಡಲು ಚಿಂತಿಸಿದ್ದೆ, ಆದರೆ ಸಮಾಜ ಕಲ್ಯಾಣ ಇಲಾಖಾ ಸಚಿವರು ಕೊಳ್ಳೇಗಾಲ ಅಂಬೇಡ್ಕರ್ ಭವನ ಪೂರ್ಣವಾಗಲು ಅಗತ್ಯವಿರುವ ಅನುದಾನ ಕುರಿತು ಪಟ್ಟಿ ನೀಡಿದರೆ ಸಮಾಜ ಕಲ್ಯಾಣ ಇಲಾಖೆಯಿಂದಲೇ ಅಗತ್ಯ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಈ ಕುರಿತು ಅವರೇ ಬಹಳ ಆಸಕ್ತಿ ವಹಿಸಿದ್ದಾರೆ , ಈ ಹಿಂದೆ ನಾನು ಕೊಳ್ಳೇಗಾಲ ಅಂಬೇಡ್ಕರ್ ಭವನಕ್ಕೆ ನಿಗಮದ ಅಧ್ಯಕ್ಷರಾಗಿದ್ದ ವೇಳೆ 99 ಲಕ್ಷ ಕೊಡಿಸಿದ್ದೆ ಎಂದರು. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸರ್ಕಾರ 5 ಕೋಟಿ ನೀಡಿದೆ. ಸಣ್ಣ ನೀರಾವರಿ ಇಲಾಖೆಗೆ 4 ಕೋಟಿ, ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ 2 ಕೋಟಿಗೂ ಅಧಿಕ ಹಣ ನೀಡಿದ್ದು ಅವುಗಳನ್ನು ಕ್ಷೇತ್ರದಲ್ಲಾಗಬೇಕಾದ ಕೆಲಸ, ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು, ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ಜನಪರ, ಬಡವರ ಪರವಿದೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತ್ರ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಮನೆಗಳಿದ್ದವರು ಮನೆ ಪಡೆಯದೆ, ಬಡವರು, ಅರ್ಹರನ್ನು ಗುರುತಿಸಿ ಮನೆ ವಿತರಣೆಗೆ ನೀವೆಲ್ಲರೂ ಸಹಕರಿಸಿ ಎಂದು ನಗರಸಭಾ ಸದಸ್ಯರು, ಪಕ್ಷದ ಮುಖಂಡರಿಗೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು, ಮಾಜಿ ಉಪಾಧ್ಯಕ್ಷ ಪಾಶಾ, ಸದಸ್ಯರಾದ ಸಮೇರಾ ಬೇಗಂ, ಸುಶೀಲಾ, ಕವಿತಾ, ಶಾಂತರಾಜು, ಭಾಗ್ಯ, ರಾಘವೇಂದ್ರ, ಪೌರಾಯುಕ್ತ ರಮೇಶ್, ಕೊಳಗೇರಿ ಅಭಿವೃದ್ಧಿ ಮಂಡಳಿ ಎಇಇ ರಾಮಚಂದ್ರ ಇನ್ನಿತರಿದ್ದರು.
ಸಿಎಂಗೆ ಚಪ್ಪಾಳೆ ಹೊಡೆಯಿರಿ ಅಂದ್ರು..!ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬದ್ದರಾಗಿದ್ದಾರೆ, ಅವರು ಅಧಿಕಾರದಲ್ಲಿದ್ದರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರೆಯಲಿದೆ, ಅವರು ಎಂದೆಂದಿಗೂ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಬಡವರ ಪರವಿದ್ದಾರೆ, ಹಾಗಾಗಿ ಕೊಳ್ಳೇಗಾಲ ಕ್ಷೇತ್ರಕ್ಕೆ 25 ಕೋಟಿ ವಿಶೇಷ ಅನುದಾನ ಒದಗಿಸಿದ್ದಾರೆ ಅವರಿಗೆ ಚಪ್ಪಾಳೆ ಹೊಡೆಯಿರಿ ಎಂದು ನೆರೆದಿದ್ದ ಸಭಿಕರಲ್ಲಿ ಮನವಿ ಮಾಡಿದರು. ಶಾಸಕರು ಚಪ್ಪಾಳೆ ಹೊಡೆಯಿರಿ ಎನ್ನುತ್ತಿದ್ದಂತೆ ನೆರೆದಿದ್ದ ಸಭಿಕರು ಚಪ್ಪಾಳೆ ಸುರಿಮಳೆಗೈದರು.