ಶ್ರೀಕೃಷ್ಣ ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿರದೆ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡಿದ ವಿಶ್ವಗುರು ಆಗಿದ್ದವರು

ಬಳ್ಳಾರಿ: ನಗರದ ಗೊಲ್ಲರ ಸಂಘ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹25 ಲಕ್ಷ ಅನುದಾನ ನೀಡಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರದ ವಾಲ್ಮೀಕಿ ವೃತ್ತದ ಲೋಕಾರ್ಪಣೆ ಸಂದರ್ಭದಲ್ಲೇ ಸಿಎಂ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವುದು. ಸಮಾಜದ ಆಶೋತ್ತರಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.

ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿದರು. ಮಹಾನಗರ ಪಾಲಿಕೆಯ ಮಹಾಪೌರ ಪಿ.ಗಾದೆಪ್ಪ ಮಾತನಾಡಿ, ಶ್ರೀಕೃಷ್ಣ ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿರದೆ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡಿದ ವಿಶ್ವಗುರು ಆಗಿದ್ದವರು ಎಂದು ಹೇಳಿದರು.

ಬಳ್ಳಾರಿ ಜಿಲ್ಲಾ ಯಾದವ ಸಂಘಕ್ಕೆ ಹಿಂದಿನ ವರ್ಷ ಸಮುದಾಯದವರ ಸಹಕಾರದಿಂದ ನಿವೇಶನ ಖರೀದಿಸಲಾಗಿದೆ. ಅಲ್ಲಿ ಸಮಾಜದ ಬಹುದಿನಗಳ ಬೇಡಿಕೆಯಾದ ಸಮುದಾಯ ಭವನ ಹಾಗೂ ಶ್ರೀಕೃಷ್ಣನ ದೇವಾಲಯ ನಿರ್ಮಾಣಕ್ಕೆ ₹2.5 ಕೋಟಿ ವೆಚ್ಚದ ನೀಲನಕ್ಷೆ ಹಾಗೂ ಅಗತ್ಯ ಪರವಾನಗಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರದ ಜಯಂತಿಗಳ ಜತೆಗೆ ಸಣ್ಣ ಸಣ್ಣ ಸಮುದಾಯಗಳನ್ನು ಒಗ್ಗೂಡಿಸಿ ಉತ್ಸಾಹ ತುಂಬುವ ಉದ್ದೇಶದಿಂದ ಶಾಸಕರು ಹಾಗೂ ಮಹಾನಗರ ಪಾಲಿಕೆ ಸದಸ್ಯರ ಸಹಕಾರದೊಂದಿಗೆ ಸಣ್ಣ ಸಮಾಜಗಳ ಜಯಂತಿ ಆಚರಣೆಗೆ ₹50 ಸಾವಿರ ಅನುದಾನ ಬಳ್ಳಾರಿ ಮಹಾನಗರ ಪಾಲಿಕೆಯಿಂದ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಆಲಂಬಾಷ ವಿಶೇಷ ಉಪನ್ಯಾಸ ನೀಡಿದರು. ಬಳ್ಳಾರಿಯ ವೈ.ಬಸವರಾಜ ತಂಡದ ಸಮೂಹ ನೃತ್ಯ ನೋಡುಗರ ಮನಸೆಳೆಯಿತು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು. ನಗರದಲ್ಲಿ ಶ್ರೀ ಕೃಷ್ಣ ಜಯಂತಿ ಅಂಗವಾಗಿ ಅತ್ಯಂತ ಸಂಭ್ರಮ ಹಾಗೂ ಸಡಗರದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು.

ನಗರದ ಮುನ್ಸಿಪಾಲ್ ಕಾಲೇಜು ಆವರಣದಿಂದ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಜಿಲ್ಲಾ ಗೊಲ್ಲರ ಸಂಘದ ಗೌರವಾಧ್ಯಕ್ಷ ಪಿ. ತಿಮ್ಮಪ್ಪ ಯಾದವ್, ಸಹಾಯಕ ಆಯುಕ್ತ ರಾಜೇಶ್.ಎಚ್.ಡಿ., ತಹಸೀಲ್ದಾರ ಟಿ.ರೇಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.